Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮಕ್ಕಳಲ್ಲಿ ಪ್ರಶ್ನೆ ಮಾಡುವ ಮನೋಭಾವ ಬೆಳಸಬೇಕು : ಜಿಲ್ಲಾಧಿಕಾರಿ ದಿವ್ಯಪ್ರಭು

06:47 PM Dec 08, 2023 IST | suddionenews
Advertisement

ಚಿತ್ರದುರ್ಗ.ಡಿ.08: ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಪ್ರಶ್ನೆ ಮಾಡುವ ಮನೋಭಾವವನ್ನು ಬೆಳಸಬೇಕು, ಆಗ ಮಾತ್ರ ವಿದ್ಯಾರ್ಥಿಗಳು ಮುಂದೆ ಬರಲು ಸಾಧ್ಯ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‍ಜೆ ಹೇಳಿದರು.

Advertisement

ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಫ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಫ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಾತೃ ಭಾಷೆಯ ಜೊತೆಗೆ ಎಲ್ಲಾ ಭಾಷೆಯ ಕಲಿಕೆಗೂ ಸಹ ಒತ್ತು ನೀಡಿದಾಗ ಮಾತ್ರ ಎಲ್ಲಾ ವಿಷಯಗಳಲ್ಲಿ ಅತಿ ಹೆಚ್ಚು ಅಂಕಗಳಿಸಲು ವಿದ್ಯಾರ್ಥಿಗಳಿಗೆ ಸುಲಭವಾಗುತ್ತದೆ. ಒಂದೊಂದು ವಿಷಯಗಳನ್ನು ಒಂದೊಂದು ವಿಧಾನದಲ್ಲಿ ತಿಳಿಸಬೇಕು, ಮಕ್ಕಳಲ್ಲಿ ಆತ್ಮ ವಿಶ್ವಾಸ ನೀಡಿದರೆ ಅವರು ಸಾಧನೆ ಮಾಡಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಯಾವುದೇ ಭಾಷೆಯನ್ನಾಗಲಿ ಸರಳ ಹಾಗೂ ಅರ್ಥವಾಗುವ ರೀತಿಯಲ್ಲಿ ಬೋಧನೆ ಮಾಡಬೇಕು ಮತ್ತು ಶಿಕ್ಷಕರು ಆಸಕ್ತಿದಾಯಕವಾಗಿ ಪಾಠ ಕಲಿಸುವ ಮನಸ್ಥಿತಿ ಹೊಂದಿರಬೇಕು ಎಂದರು.

Advertisement

ವಯಸ್ಸು ಕಳೆದಂತೆ ಕಲಿಯುವ ಆಸಕ್ತಿ ಕಡಿಮೆಯಾಗುತ್ತದೆ, ಹೀಗಾಗಿ ಸಾಧನೆ ಮಾಡಿದ ಬಳಿಕ ಅಲ್ಲೇ ಇರಬಾರದು, ಕಲಿಕೆ ನಿಂತ ನೀರಾಗಬಾರದು, ಪುಸ್ತಕಗಳನ್ನು ನಿರಂತರವಾಗಿ ಓದುವುದರಿಂದ ಇನ್ನೂ ಹೆಚ್ಚು ಹೆಚ್ಚು ಸಾಧನೆ ಮಾಡಬಹುದು ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.

ಜೀವನದಲ್ಲಿ ಶಿಕ್ಷಣ ಹಾಗೂ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ಮರೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಶಿಕ್ಷಕರು ಸಾಧನೆ ಮಾಡುವುದರ ಜೊತೆಗೆ ವಿದ್ಯಾರ್ಥಿಗಳನ್ನು ಭಾರತ ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ಮಾಡಬಹುದು.  ಮುಂಬರುವ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡುವುದರ ಜೊತೆಗೆ ನಮ್ಮ ಜಿಲ್ಲೆಯನ್ನು ಶೈಕ್ಷಣಿಕವಾಗಿ ಉನ್ನತ ಸ್ಥಾನಕ್ಕೆ ಏರಿಸಬೇಕು ಎಂದು ತಿಳಿಸಿದರು.

ಎಸ್‍ಎಸ್‍ಎಲ್‍ಸಿ ನೋಡಲ್ ಅಧಿಕಾರಿ ಎನ್.ಆರ್. ತಿಪ್ಪೇಸ್ವಾಮಿ ಮಾತನಾಡಿ, ನಿರಂತರ ಶೈಕ್ಷಣಿಕ ಕಾರ್ಯಾಗಾರಗಳಲ್ಲಿ ಶಿಕ್ಷಕರು ಪಾಲ್ಗೊಳ್ಳುವುದರಿಂದ ಅವರಲ್ಲಿ ಉತ್ಸಾಹ ಹೆಚ್ಚಾಗುತ್ತದೆ. ಈ ವರ್ಷದ ಶೈಕ್ಷಣಿಕ ಪರೀಕ್ಷೆ ನಡೆಸುವ ವ್ಯವಸ್ಥೆ ಬದಲಾಗಿದೆ, ಅ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು ಹೆಚ್ಚಿನ ಶ್ರಮವಹಿಸಿ ನಮ್ಮ ಉನ್ನತ ಫಲಿತಾಂಶ ಸ್ಥಾನವನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಚಿತ್ರದುರ್ಗ ತಾಲ್ಲೂಕಿನ ವಿದ್ಯಾಧಿಕಾರಿ ಸಿದ್ದಪ್ಪ ಮಾತನಾಡಿ, 2022 ರಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನಗಳಿಸಿರುವುದು ಸಂತೋಷಕರ ವಿಷಯ ಇದೇ ರೀತಿ ಮುಂಬರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅದನ್ನು ಉಳಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‍ಜೆ ಅವರು ಹಿಂದಿ ಭಾಷೆಯ ಪಾಸಿಂಗ್ ಮತ್ತು ಸ್ಕೋರಿಂಗ್ ಪ್ಯಾಕೇಜ್ ಪುಸ್ತಕವನ್ನು ಬಿಡುಗಡೆ ಮಾಡಿದರು.

ಗುಲ್ಬರ್ಗ ಜಿಲ್ಲೆಯ ಹಿಂದಿ ಉಪನ್ಯಾಸಕ ಗುಲಾಬ್ ನಭಿ ಅವರು ಹಿಂದಿ ವಿಷಯದ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ನೀಡಿದರು.

ಕಾರ್ಯಾಗಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್, ಸಮಗ್ರ ಶಿಕ್ಷಣ ಜಿಲ್ಲಾ ಸಮನ್ವಯಾಧಿಕಾರಿ ವೆಂಕಟೇಶ್, ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್, ಆಂಗ್ಲ ಮತ್ತು ಸಮಾಜ ವಿಷಯ ಪರಿವೀಕ್ಷಕ ಚಂದ್ರಣ್ಣ, ಗಣಿತ ವಿಷಯ ಪರಿವೀಕ್ಷಕಿ ಸವಿತಾ, ವಿಜ್ಞಾನ ವಿಷಯ ಪರಿವೀಕ್ಷಕ ಗೋವಿಂದಪ್ಪ, ಕನ್ನಡ ವಿಷಯ ಪರಿವೀಕ್ಷಕ ಶಿವಣ್ಣ, ಜಿಲ್ಲಾ ಹಿಂದಿ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದರೆಡ್ಡಿ, ಹಿಂದಿ ಭಾಷಾ ಬೋಧಕರ ರಾಜ್ಯ ಕಾರ್ಯದರ್ಶಿ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್, ಸಹ ಶಿಕ್ಷಕ ಗಿರೀಶ್, ಸೇರಿದಂತೆ ವಿಷಯ ಪರಿವೀಕ್ಷಕರು ಉಪಸ್ಥಿತರಿದ್ದರು.  ಕಾರ್ಯಾಗಾರದಲ್ಲಿ ಜಿಲ್ಲೆಯ ಶಾಲೆಗಳ ಹಿಂದಿ ಭಾಷಾ ಶಿಕ್ಷಕರು ಪಾಲ್ಗೊಂಡಿದ್ದರು.

Advertisement
Tags :
childrenchitradurgaDistrict Collector Divya Prabhuspirit of questioningಚಿತ್ರದುರ್ಗಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ
Advertisement
Next Article