ಮಕ್ಕಳಿಗೆ ದೈನಂದಿನ ಸವಾಲುಗಳನ್ನು ಎದುರಿಸುವಂತ ಕೌಶಲ್ಯ ಶಿಕ್ಷಣವನ್ನು ಕಲಿಸಬೇಕಿದೆ : ಶ್ರೀಮತಿ ಗಾಯಿತ್ರಿದೇವಿ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ.24 : ದೈನಂದಿನ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವಂತ ಕೌಶಲ್ಯ ಶಿಕ್ಷಣವನ್ನು ಮಕ್ಕಳಿಗೆ ಕಲಿಸಬೇಕಿದೆ ಎಂದು ರಾಜ್ಯ ಯೋಜನಾ ನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಶ್ರೀಮತಿ ಗಾಯಿತ್ರಿದೇವಿ ಶಿಕ್ಷಕರುಗಳಿಗೆ ತಿಳಿಸಿದರು.
ಜೆ.ಎಸ್.ಡಬ್ಲ್ಯು ಫೌಂಡೇಶನ್ ಕರ್ನಾಟಕ ಮಾದರಿ ಶಾಲಾ ಮಾರ್ಗದರ್ಶಿ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ನೂರು ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸುವ ಯೋಜನೆಯನ್ನು ತ.ರಾ.ಸು.ರಂಗಮಂದಿರದಲ್ಲಿ ಬುಧವಾರ ಉದ್ಗಾಟಿಸಿ ಮಾತನಾಡಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನೇಕ ಯೋಜನೆಗಳಿವೆ. ಶೈಕ್ಷಣಿಕ ಅಭಿವೃದ್ದಿಗೆ ಅನೇಕ ಸಂಸ್ಥೆಗಳು ಸಹಕಾರ ನೀಡುತ್ತಿವೆ. ಜೆ.ಎಸ್.ಡಬ್ಲ್ಯು, ಯುವ, ಶಿಕ್ಷಣ ಫೌಂಡೇಶನ್, ಉದ್ಯಮ್, ಸತ್ವ, ಸಂಬೋಧಿ ಸೇರಿದಂತೆ ಹನ್ನೊಂದು ಸಂಸ್ಥೆಗಳು ಜಿಲ್ಲೆಯಲ್ಲಿ 66 ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ 34 ಪೌಢಶಾಲೆಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಮುಂದಾಗಿರುವುದು ಹೆಮ್ಮೆಯ ಸಂಗತಿ. ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವೆ ಇರುವ ಅಂತರವನ್ನು ದೂರ ಮಾಡಬೇಕಾಗಿರುವುದರಿಂದ ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸಬೇಕಾಗಿದೆ. ವಿದ್ಯಾರ್ಥಿಗಳ ದಾಖಲಾತಿ ಕೂಡ ಹೆಚ್ಚಿಸಬೇಕು. ಶಾಲೆಗಳಲ್ಲಿ ಡಿಜಿಟಲೀಕರಣ, ಉದ್ಯಮಶೀಲತೆ ಬೆಳೆಸಬೇಕಿದೆ. ಇಂತಹ ಕಾರ್ಯಕ್ರಮದಿಂದ ಶಿಕ್ಷಕರುಗಳು ನಾಯಕತ್ವ ಗುಣ ಮೈಗೂಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಸ್ಪೋಕನ್ ಇಂಗ್ಲಿಷ್ ಮೂಲಕ ಮಕ್ಕಳಲ್ಲಿರುವ ಕ್ರಿಯಾಶೀಲತೆ, ಸಾಮಥ್ರ್ಯವನ್ನು ಹೊರತರಬೇಕಿದೆ. ಜೆ.ಎಸ್.ಡಬ್ಲ್ಯು ಸಂಸ್ಥೆಯ ಉತ್ತಮ ಯೋಜನೆ ರೂಪಿಸುವ ಕಾರ್ಯಕ್ರಮ ಇದಾಗಿದ್ದು, ಜಿಲ್ಲೆಯಲ್ಲಿ ಆಯ್ಕೆ ಮಾಡಿಕೊಂಡಿರುವ ನೂರು ಸರ್ಕಾರಿ ಶಾಲೆಗಳು ಬೇರೆ ಶಾಲೆಗಳಿಗಿಂತ ಭಿನ್ನವಾಗಿರಬೇಕು. ಇದರಿಂದ ಮಕ್ಕಳ ಸಮಗ್ರ ಕಲಿಕೆಯಾಗುತ್ತದೆ ಎಂದರು.
ಜೆ.ಎಸ್.ಡಬ್ಲ್ಯು ಮುಖ್ಯಸ್ಥ ಪ್ರದೀಪ್ ಶರ್ಮ ಮಾತನಾಡಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ನಮ್ಮ ಉದ್ದೇಶ. ದಾವಣಗೆರೆ, ತುಮಕೂರು, ಯಾದಗಿರಿ, ಹಾವೇರಿ ಜಿಲ್ಲೆಯಲ್ಲಿ 105 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ ಚಿತ್ರದುರ್ಗ ಜಿಲ್ಲೆಯೊಂದರಲ್ಲಿಯೇ ನೂರು ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಶಿಕ್ಷಣ ಇಲಾಖೆಯ ಎಲ್ಲರ ಸಹಕಾರ ಬೇಕಿದೆ ಎಂದು ಮನವಿ ಮಾಡಿದರು.
ಯೋಜನೆಗೆ ಸಂಬಂಧಿಸಿದ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಬಿ.ಇ.ಡಿ.ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಟಿ.ಜಿ.ಲೀಲಾವತಿ ಶಿಕ್ಷಣ ಇಲಾಖೆಯಲ್ಲಿ ಉನ್ನತೀಕರಣವಾಗಬೇಕಿದೆ. ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಹೆಚ್ಚಿನ ಕಾಳಜಿ ವಹಿಸುತ್ತಿರುವುದರಿಂದ ಶಿಕ್ಷಕರ ಹಾಗೂ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಕೂಡ ಜಾಸ್ತಿಯಿದೆ. ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳು ಪೈಪೋಟಿ ಎದುರಿಸುತ್ತಿರುವುದರಿಂದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಬೇಕಿದೆ. ಅದಕ್ಕಾಗಿ ಶಿಕ್ಷಕರುಗಳಿಗೆ ಅನೇಕ ರೀತಿಯ ತರಬೇತಿಗಳನ್ನು ನೀಡಲಾಗುತ್ತಿದೆ. ಸರ್ಕಾರದಿಂದ ಸಾವಿರಾರು ಕೋಟಿ ರೂ.ಗಳ ಅನುದಾನ ಹರಿದು ಬರುತ್ತಿದ್ದು, ಇಂತಹ ಅವಕಾಶ ಎಲ್ಲರಿಗೂ ಸಿಗಲ್ಲ. ಜೆ.ಎಸ್.ಡಬ್ಲ್ಯು ಸಂಸ್ಥೆಯವರ ಕೊಡುಗೆಯನ್ನು ಉಪಯೋಗಪಡಿಸಿಕೊಳ್ಳಿ ಎಂದು ಶಿಕ್ಷಕರುಗಳಿಗೆ ತಾಕೀತು ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್‍ರೆಡ್ಡಿ ಜೆ.ಎಸ್.ಡಬ್ಲ್ಯು ಸೇರಿದಂತೆ ಹನ್ನೊಂದು ಸಂಸ್ಥೆಗಳು ಒಟ್ಟುಗೂಡಿ ಜಿಲ್ಲೆಯಲ್ಲಿ ನೂರು ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುಂದೆ ಬಂದಿರುವುದು ನಿಜಕ್ಕೂ ಸುವರ್ಣಾವಕಾಶ. ಮಕ್ಕಳ ಶೈಕ್ಷಣಿಕ ಅಭಿವೃದ್ದಿಗಾಗಿ ಏನೆಲ್ಲಾ ಕೊಡಲು ಬಂದಿರುವ ಇಂತಹ ಸಂಸ್ಥೆಗಳ ಉಪಯೋಗವನ್ನು ಪಡೆದುಕೊಂಡು ಮಕ್ಕಳ ಭವಿಷ್ಯ ರೂಪಿಸುವತ್ತ ಶಿಕ್ಷಕರುಗಳು ಮುಂದಾಗಬೇಕೆಂದು ಕರೆ ನೀಡಿದರು.
ಇಂತಹ ಯೋಜನೆಯಿಂದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗುತ್ತದೆ. ಈ ಅವಕಾಶವನ್ನು ಅನುಷ್ಠಾನಗೊಳಿಸುವಲ್ಲಿ ಶಿಕ್ಷಕರುಗಳು ಹಾಗೂ ಇಲಾಖೆ ಅಧಿಕಾರಿಗಳು ಕೈಜೋಡಿಸಬೇಕು. ಸಿ.ಎಸ್.ಆರ್.ಫಂಡ್‍ನಿಂದ ಜಿಲ್ಲೆಯ ಎಲ್ಲಾ ಶಾಲೆಗಳಿಗೂ ಮೂಲಭೂತ ಸೌಲಭ್ಯಗಳನ್ನು ಪಡೆಯಬಹುದು. ನಿವೃತ್ತಿಯ ನಂತರವೂ ಮಕ್ಕಳ ಶಿಕ್ಷಣಕ್ಕಾಗಿ ಸದಾ ನಿಮ್ಮ ಜೊತೆ ಇರುತ್ತೇನೆಂದು ಭರವಸೆ ನೀಡಿದರು.
ಡಯಟ್ ಪ್ರಾಂಶುಪಾಲರಾದ ಎಸ್.ಎ.ನಾಸಿರುದ್ದಿನ್, ಜೆ.ಎಸ್.ಡಬ್ಲ್ಯು ಸಂಸ್ಥೆಯ ಹರ್ಷವರ್ಧನ್ ಇವರುಗಳು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀನಿವಾಸ್, ನಿರ್ಮಲದೇವಿ, ಸವಿತ, ವೆಂಕಟೇಶ್, ಶೈಲಜಾ ಕುಮಾರಿ, ತಿಪ್ಪೇಸ್ವಾಮಿ ಸೈಯದ್ ಮೊಹಸಿನ್, ತಿಪ್ಪೇಸ್ವಾಮಿ ಹಾಗೂ ಜೆ.ಎಸ್.ಡಬ್ಲ್ಯು ಸಂಸ್ಥೆಯ ಅನೇಕರು ವೇದಿಕೆಯಲ್ಲಿದ್ದರು.
ನೂರು ಶಾಲೆಗಳ ಮುಖ್ಯೋಪಾಧ್ಯಾಯರು, ನೋಡಲ್ ಅಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿಗಳು, ಸಿ.ಆರ್.ಪಿ. ಡಯಟ್‍ನ ಹಿರಿಯ ಉಪನ್ಯಾಸಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಿ.ಆರ್.ಪಿ.ಮಲ್ಲಿಕಾ ಪ್ರಾರ್ಥಿಸಿದರು. ಶಂಭುಲಿಂಗ ನಡುಮನಿ ಸ್ವಾಗತಿಸಿದರು. ಮಂಜುನಾಥ ಬೆಸ್ತರ್ ವಂದಿಸಿದರು.