ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿ ಗಣತಿಯನ್ನು ಮುಚ್ಚಿಡಬಾರದು : ನಾಗರಾಜು
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ.27 : : ವಾಸಿಸಲು ಸ್ವಂತ ಮನೆಗಳಿಲ್ಲದೆ ಅಲೆಮಾರಿ, ಅರೆಅಲೆಮಾರಿ ಜನಾಂಗ ಟೆಂಟ್‍ಗಳಲ್ಲಿ ಜೀವನ ಸಾಗಿಸುತ್ತಿದ್ದು, ಭೂ ಒಡೆತನ ಸ್ಕೀಂ ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರ ವಸತಿ ಸೌಲಭ್ಯ ಒದಗಿಸಬೇಕೆಂದು ಅಲೆಮಾರಿ ಸಂಘಟನೆ ಜಿಲ್ಲಾಧ್ಯಕ್ಷ ನಾಗರಾಜು ಕೆ.ಎಂ. ಒತ್ತಾಯಿಸಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2016-17 ರಲ್ಲಿ ಅಲೆಮಾರಿ ಕೋಶವನ್ನು ರಚಿಸಿದ ರಾಜ್ಯ ಸರ್ಕಾರ 102 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಮೀಸಲಿಟ್ಟಿತ್ತು. 72 ಜಾತಿಗಳು ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗಕ್ಕೆ ಸೇರ್ಪಡೆಯಾದ ನಂತರ ಕೊರಚ, ಕೊರಮ ಜನಾಂಗವನ್ನು ಅಲೆಮಾರಿ ಅರೆಅಲೆಮಾರಿ ಜನಾಂಗಕ್ಕೆ ಸೇರಿಸಿತೆ ವಿನಃ ಜನಸಂಖ್ಯೆಗನುಗುಣವಾಗಿ ಅನುದಾನ ಹೆಚ್ಚಿಸಲಿಲ್ಲ. ರಾಜ್ಯದಲ್ಲಿ ಎರಡರಿಂದ ನಾಲ್ಕು ಲಕ್ಷದಷ್ಟು ಅಲೆಮಾರಿಗಳಿದ್ದು, ಸಂಕಷ್ಟದಲ್ಲಿ ಜೀವಿಸುತ್ತಿದ್ದಾರೆ. ನಿರ್ಧಿಷ್ಟವಾದ ಸ್ಥಳವಿಲ್ಲ. ರಾಜ್ಯ ಸರ್ಕಾರ ಅಲೆಮಾರಿ, ಅರೆಅಲೆಮಾರಿಗಳ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿದರು.
ಕೊರಚ ಜನಾಂಗದ ಜಿಲ್ಲಾಧ್ಯಕ್ಷ ವೈ.ಕುಮಾರ್ ಮಾತನಾಡಿ 2011 ರ ಜಾತಿಗಣತಿಯನ್ನು ಮಾನದಂಡವಾಗಿಟ್ಟುಕೊಂಡು ರಾಜ್ಯ ಸರ್ಕಾರ ಅಲೆಮಾರಿ ಮತ್ತು ಅರೆಅಲೆಮಾರಿಗಳನ್ನು ವಂಚಿಸುತ್ತ ಬರುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿ ಗಣತಿಯನ್ನು ಮುಚ್ಚಿಡಬಾರದು. ಬಹಿರಂಗಪಡಿಸಬೇಕು. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿರುವ ಈ ಜನಾಂಗಕ್ಕೆ ಸರ್ಕಾರ ವಸತಿ ಸೌಲಭ್ಯ ನೀಡಲಿ ಎಂದು ಆಗ್ರಹಿಸಿದರು.
ಅಲಕ್ಷಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ತಿಪ್ಪೇಸ್ವಾಮಿ ಸಂಪಿಗೆ ಮಾತನಾಡುತ್ತ ಅಲೆಮಾರಿ ಮತ್ತು ಅರೆಅಲೆಮಾರಿಗಳಿಗೆ ಶಾಶ್ವತ ನೆಲೆ ಬೇಕಾಗಿದೆ. ಎಲ್ಲಿ ಐವತ್ತು ಕುಟುಂಬಗಳು ವಾಸಿಸುತ್ತಿವೆಯೋ ಅಂತಹ ಪ್ರದೇಶವನ್ನು ಗುರುತಿಸಿ ಪ್ರತ್ಯೇಕ ಕಾಲೋನಿಯನ್ನಾಗಿಸಬೇಕು. ಮೂಲಭೂತ ಸೌಲಭ್ಯಗಳು ಸರ್ಕಾರದಿಂದ ಸಿಕ್ಕಾಗ ಮಾತ್ರ ಈ ಜನಾಂಗ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಹೇಳಿದರು.
ಸುಡುಗಾಡು ಸಿದ್ದ ಜನಾಂಗದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಮಾತನಾಡಿ ವಸತಿಗಾಗಿ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಜನಾಂಗದಲ್ಲಿನ ಸಮಸ್ಯೆಗಳನ್ನು ಕೇಳಲು ಯಾರು ಶಾಸಕರಾಗಲಿ, ಸಂಸದರಾಗಲಿ ಇಲ್ಲ. ಶೋಷಿತ ವರ್ಗಕ್ಕೆ ಸೇರಿದ ನಮ್ಮನ್ನು ಹೇಳುವವರು ಕೇಳುವವರೆ ಇಲ್ಲದಂತಾಗಿದ್ದಾರೆ. ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಶ್ವತ ನೆಲೆ ಒದಗಿಸಲಿ ಎಂದು ವಿನಂತಿಸಿದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡುತ್ತ ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯ ಜಿಲ್ಲೆಯಲ್ಲಿ ಐವತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಮೂಲಭೂತ ಸೌಲಭ್ಯಗಳಿಂದ ಮೊದಲಿನಿಂದಲೂ ವಂಚಿತವಾಗಿದೆ. ಭೂಮಿ, ವಸತಿ, ಶಿಕ್ಷಣ, ಸಾಮಾಜಿಕ ಸ್ಥಾನಮಾನ, ರಾಜಕೀಯದಲ್ಲಿ ಅಧಿಕಾರ ಯಾವುದು ಸಿಕ್ಕಿಲ್ಲ. ಸರ್ಕಾರ ಅಲೆಮಾರಿ ಅರೆಅಲೆಮಾರಿಗಳ ಬೇಡಿಕೆಗಳನ್ನು ಕೂಡಲೆ ಈಡೇರಿಸಬೇಕೆಂದು ಮನವಿ ಮಾಡಿದರು.
ಸಿಳ್ಳಕ್ಯಾತ ಮುಖಂಡ ಮಾರಿಕಾಂಬ ಕೃಷ್ಣಪ್ಪ, ಚನ್ನದಾಸ ಜನಾಂಗದ ಅಧ್ಯಕ್ಷ ರಂಗಪ್ಪ, ಜಯಣ್ಣ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.