For the best experience, open
https://m.suddione.com
on your mobile browser.
Advertisement

ಸುಪ್ರೀಂಕೋರ್ಟ್ ತೀರ್ಪನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತುರ್ತಾಗಿ ಅನುಷ್ಠಾನ ಮಾಡಲಿ : ಹಿರಿಯ ವಕೀಲ ಎಂ.ಕುಂಬಯ್ಯ

06:28 PM Aug 03, 2024 IST | suddionenews
ಸುಪ್ರೀಂಕೋರ್ಟ್ ತೀರ್ಪನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತುರ್ತಾಗಿ ಅನುಷ್ಠಾನ ಮಾಡಲಿ   ಹಿರಿಯ ವಕೀಲ ಎಂ ಕುಂಬಯ್ಯ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 03  : ಒಳ ಮೀಸಲಾತಿ ನೀಡುವ ಸಂಬಂಧ ಆಯಾ ರಾಜ್ಯಗಳಿಗೆ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತುರ್ತಾಗಿ ಅನುಷ್ಠಾನಕ್ಕೆ ತರಬೇಕೆಂದು ಹೈಕೋರ್ಟ್ ಹಿರಿಯ ವಕೀಲ ಎಂ.ಕುಂಬಯ್ಯ ಒತ್ತಾಯಿಸಿದರು.

Advertisement

ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಂದ್ರದಲ್ಲಿ ಮಂದಿಕೃಷ್ಣ ಮಾದಿಗರವರು ಒಳ ಮೀಸಲಾತಿ ಜಾರಿಗಾಗಿ ಸುಪ್ರಿಂಕೋರ್ಟ್‍ನಲ್ಲಿ ಕೇಸು ಹಾಕಿ ಅನೇಕ ಹೋರಾಟಗಳನ್ನು ನಡೆಸಿದ್ದಾರೆ. ಅದೇ ರೀತಿ ಕರ್ನಾಟಕ, ತಮಿಳುನಾಡು, ಪಂಜಾಬ್ ಸೇರಿದಂತೆ ನಾನಾ ರಾಜ್ಯಗಳಲ್ಲಿ ನಡೆದ ಹೋರಾಟಕ್ಕೆ ಸುಪ್ರೀಂ ಕೋರ್ಟ್‍ನ ಮಹತ್ವದ ತೀರ್ಪು ಫಲ ನೀಡಿದೆ.

Advertisement

ತುಳಿತಕ್ಕೊಳಗಾದವರಿಗೆ ನ್ಯಾಯ ಒದಗಿಸುವುದಕ್ಕಾಗಿ ಕಾಂಗ್ರೆಸ್ ಸರ್ಕಾರ ಸದಾಶಿವ ಆಯೋಗ ರಚಿಸಿ ಕೇಂದ್ರಕ್ಕೆ ವರದಿ ಸಲ್ಲಿಸಿತ್ತು. ಈಗ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಒಳ ಮೀಸಲಾತಿಯನ್ನು ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಕಳೆದ ಮೂವತ್ತು ವರ್ಷಗಳಿಂದ ನಡೆದ ಹೋರಾಟಕ್ಕೆ ರಾಜ್ಯದಲ್ಲಿ ಐದು ಸಾವಿರಕ್ಕೂ ಹೆಚ್ಚು ಎಫ್.ಐ.ಆರ್.ಗಳಾಗಿರುವುದನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಬೇಕು. ಅನುಸೂಚಿತ ಆಯೋಗಕ್ಕೆ ಸರ್ಕಾರ ದಲಿತರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು.

ನ್ಯಾಯವಾದಿ ಬೀಸ್ನಳ್ಳಿ ಜಯಣ್ಣ ಮಾತನಾಡಿ ಒಳ ಮೀಸಲಾತಿಗಾಗಿ 1996 ರಲ್ಲಿ ಹೊಲೆಮಾದಿಗರ ಮೀಸಲಾತಿ ಹೋರಾಟ ಸಮಿತಿ ಆರಂಭಗೊಂಡಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಸೇರಿದಂತೆ ಅನೇಕ ಸಂಘಟನೆಗಳು ಒಳ ಮೀಸಲಾತಿಗಾಗಿ ಅನೇಕ ಹೋರಾಟ, ಪಾದಯಾತ್ರೆ, ಧರಣಿ, ಶಾಸಕರುಗಳ ನಿವಾಸದ ಎದುರು ಪ್ರತಿಭಟನೆ, ಜಾಥಗಳನ್ನು ನಡೆಸಿದ ಪರಿಣಾಮವಾಗಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿರುವುದರಿಂದ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ವಿಳಂಭ ಮಾಡದೆ ಜಾರಿಗೆ ತರಬೇಕು. ಇಲ್ಲವಾದಲ್ಲಿ ಮತ್ತೆ ಹೋರಾಟಕ್ಕೆ ಇಳಿಯಬೇಕಾಗುತ್ತದೆಂದು ಎಚ್ಚರಿಸಿದರು.

ಒಳ ಮೀಸಲಾತಿಯಿಂದ ನಮಗೆ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಮೀಸಲಾತಿ ದೊರಕುತ್ತದೆಯೇ ವಿನಃ ರಾಜಕೀಯವಾಗಿ ಅಲ್ಲ. ಹಾಗಾಗಿ ದಲಿತರು ರಾಜಕೀಯವಾಗಿ ಅಧಿಕಾರದಲ್ಲಿದ್ದರೆ ಅಭಿವೃದ್ದಿಯಾಗಲು ಸಾಧ್ಯ. ಹಾಗಾಗಿ ರಾಜಕೀಯವಾಗಿಯೂ ಮೀಸಲಾತಿ ಬೇಕೆಂದು ಕೋರಿದರು.

ವಕೀಲ ಜಿ.ಕೆ.ಮಲ್ಲಿಕಾರ್ಜುನಸ್ವಾಮಿ ಮತನಾಡುತ್ತ ಒಳ ಮೀಸಲಾತಿಯನ್ನು ಆಯಾ ರಾಜ್ಯ ಸರ್ಕಾರಗಳೆ ನೀಡಬಹುದೆಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿರುವುದರಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತುರ್ತಾಗಿ ಅನುಷ್ಟಾನಕ್ಕೆ ತರಬೇಕು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೇರಿದಂತೆ ಅನೇಕ ಸಂಘಟನೆಗಳು ನಡೆಸಿದ ಹೋರಾಟಕ್ಕೆ ಸಿಕ್ಕಿರುವ ಪ್ರತಿಫಲ. ಬೇಗನೆ ಸರ್ಕಾರ ಆದೇಶ ಹೊರಡಿಸಬೇಕೆಂದು ವಿನಂತಿಸಿದರು.

ನ್ಯಾಯವಾದಿ ವೆಂಕಟೇಶ್ ಮಾತನಾಡಿ ಕಳೆದ ಮೂವತ್ತು ನಲವತ್ತು ವರ್ಷಗಳಿಂದಲೂ ಒಳ ಮೀಸಲಾತಿಗಾಗಿ ಅನೇಕರು ಹೋರಾಟ ನಡೆಸಿಕೊಂದು ಬಂದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸಾಮಾಜಿಕ ನ್ಯಾಯ ಸಿಕ್ಕಂತಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೆ ಅನುಷ್ಠಾನಕ್ಕೆ ತರಬೇಕೆಂದರು.

ಹೈಕೋರ್ಟ್‍ನ ಹಿರಿಯ ವಕೀಲರಾದ ಮುನಿಯಪ್ಪ, ತುಳಸಿರಾಮ, ಎಂ.ಕೆ.ಲೋಕೇಶ್, ಹನುಮಂತಪ್ಪ, ಶಿವಣ್ಣ, ಸುರೇಶ್, ಎಸ್.ಮಲ್ಲಿಕಾರ್ಜುನ, ಗಿರೀಶ್, ಸಿ.ಬಾಬು, ಆರ್.ಟಿ.ಸ್ವಾಮಿ ಸೇರಿದಂತೆ ಇತರೆ ವಕೀಲರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tags :
Advertisement