ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ : ಸಂಸದ ಗೋವಿಂದ ಕಾರಜೋಳ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 11 : ಮೈಸೂರಿನ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿರುವ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಕ್ರಮದಲ್ಲಿ ಭಾಗಿಯಾಗಿರುವ ಸಹೋದ್ಯೋಗಿಗಳು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು. ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿಯೂ ತನಿಖೆಗೆ ಆಯೋಗ ರಚಿಸಿ ನಿವೃತ್ತ ನ್ಯಾಯಮೂರ್ತಿಯನ್ನು ನೇಮಿಸುವಂತೆ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳರವರು ಒತ್ತಾಯಿಸಿದರು.
ಬಿಜೆಪಿ.ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1992 ರಲ್ಲಿ ಮೂರು ಎಕರೆ 16 ಗುಂಟೆ ಜಮೀನು ಡೀನೋಟಿಫಿಕೇಷನ್ ಮಾಡಿ ಸಿದ್ದರಾಮಯ್ಯನವರು ಪತ್ನಿಗೆ ಡೊನೇಟ್ ಮಾಡಿದ್ದಾರೆ. ಇದರಲ್ಲಿ ಭಾರಿ ಭ್ರಷ್ಠಾಚಾರವಾಗಿದೆ. ಕೇಂದ್ರ ಸರ್ಕಾರ ಇಡಿ, ಐಟಿ, ಸಿಬಿಐ. ಸಂಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪದೆ ಪದೆ ಆಪಾದನೆ ಹೊರಿಸುತ್ತಿರುವ ಕಾಂಗ್ರೆಸ್‍ನವರು ಈಗೇಕೆ ರಾಜಿನಾಮೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು?
ಕರ್ನಾಟಕ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ 187 ಕೋಟಿ ರೂ.ಗಳ ಅವ್ಯವಹಾರವಾಗಿದೆ. ಬೇನಾಮಿ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿರುವುದನ್ನು ತನಿಖೆಗೆ ಎಸ್.ಐ.ಟಿ.ಗೆ ವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ದ್ರೋಹವೆಸಗಿದ್ದಾರೆ. ಮೈಸೂರಿನ ಮೂಡಾದಲ್ಲಿ ಹಗರಣವೇ ನಡೆದಿಲ್ಲ ಎನ್ನುವುದಾದರೆ ಸಚಿವ ಭೈರತಿ ಬಸವರಾಜ್ ಅಧಿಕಾರಿಗಳನ್ನು ಏಕೆ ವರ್ಗಾವಣೆಗೊಳಿಸಿದರು.
ಕಡತಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿರುವುದರ ಹಿಂದೆ ನಾಶಪಡಿಸುವ ಹುನ್ನಾರವಿದೆ. ರೈಲ್ವೆ ಅಪಘಾತ, ಟೆಲಿಫೋಣ್ ಕದ್ದಾಲಿಕೆ ಆರೋಪ ಬಂದಾಗ ಲಾಲ್‍ಬಹದ್ದೂರ್‍ಶಾಸ್ತ್ರಿ, ರಾಮಕೃಷ್ಣಹೆಗಡೆ ಇವರುಗಳು ರಾಜಿನಾಮೆ ನೀಡಿ ಅಧಿಕಾರ ತ್ಯಜಿಸಿದರು. ಸಮಾಜವಾದಿಯಿಂದ ಬಂದವನು ಎಂದು ಹೇಳಿಕೊಳ್ಳುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಮೊದಲು ರಾಜಿನಾಮೆ ಕೊಡಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಯಿತು. ಭ್ರಷ್ಠಾಚಾರದಲ್ಲಿ ಮುಳುಗಿರುವುದೇ ಸಾಧನೆ. ಬೇರೆ ರಾಜಕಾರಣಿಗಳಿಗೆ ರೋಲ್ ಮಾಡಲ್ ಆಗಬೇಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಮೇಲೆ ಬಂದಿರುವ ಆರೋಪಕ್ಕೆ ಮೊದಲು ರಾಜಿನಾಮೆ ಕೊಡಲಿ ಎಂದರು.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಮೂಡಾದ ಅತಿ ದೊಡ್ಡ ಹಗರಣದಲ್ಲಿ ಭಾಗಿಯಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮೈಸೂರಿನಲ್ಲಿ ನಿವೇಶನಕ್ಕಾಗಿ 62 ಸಾವಿರ ಜನ ಸಲ್ಲಿಸಿರುವ ಅರ್ಜಿಗಳು ಇನ್ನು ಕೊಳೆಯುತ್ತಿವೆ. ನಿಜವಾಗಿಯೂ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಧ್ಯಮ ವರ್ಗದವರಿಗೆ ಸಿಗಬೇಕಾಗಿದ್ದ ನಿವೇಶನಗಳನ್ನು ತನ್ನ ಪತ್ನಿ ಹೆಸರಿಗೆ ಪಡೆದಿರುವುದು ಯಾವ ನ್ಯಾಯ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈ ನೇರವಾಗಿ ಮೂಡ ಹಗರಣದಲ್ಲಿ ಕೆಸರಾಗಿದೆ. ಇದೊಂದು ರಿಯಲ್ ಎಸ್ಟೇಟ್ ಹಗರಣ. ಪ್ರಧಾನಿ ನರೇಂದ್ರಮೋದಿ ಹಾಗೂ ಎನ್.ಡಿ.ಎ. ಬಗ್ಗೆ ಹಗರುವಾಗಿ ಮಾತನಾಡುವ ಸಿದ್ದರಾಮಯ್ಯನವರ ಭ್ರಷ್ಠಾಚಾರ ಪಾರ್ಲಿಮೆಂಟ್‍ನಲ್ಲಿ ಚರ್ಚೆಯಾಗಬೇಕು. ಕಾಂಗ್ರೆಸ್‍ನ ರಾಹುಲ್‍ಗಾಂಧಿ ತಮ್ಮ ಪಕ್ಷದ ಸಿದ್ದರಾಮಯ್ಯನವರ ಹಗರಣವನ್ನು ಸಂಸತ್‍ನಲ್ಲಿ ಬಹಿರಂಗಪಡಿಸಬೇಕು. ವಿಜಯನಗರ ಪೊಲೀಸ್ ಠಾಣೆ ಹಾಗೂ ಲೋಕಾಯುಕ್ತದಲ್ಲಿ ಈ ಸಂಬಂಧ ಕೇಸು ದಾಖಲಾಗಿದ್ದು, ನಿಸ್ಪಕ್ಷಪಾತ ತನಿಖೆಯಾಗಬೇಕೆಂದರು.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಬಿಜೆಪಿ. ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿಗಳಾದ ಜಿ.ಟಿ.ಸುರೇಶ್‍ಸಿದ್ದಾಪುರ, ಸಂಪತ್‍ಕುಮಾರ್, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್‍ಯಾದವ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.