ಚಳ್ಳಕೆರೆ | ಒತ್ತುವರಿ ತೆರವುಗೊಳಿಸಿ ರಸ್ತೆ ನಿರ್ಮಾಣ ಕಾರ್ಯ ಆರಂಭ : ತಹಸೀಲ್ದಾರ್ ರೇಹಾನ್ ಪಾಷಾ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳೆಗೆರೆ, ಚಳ್ಳಕೆರೆ,
ಮೊ : 84314 13188
ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 24 : ಚಳ್ಳಕೆರೆ ನಗರದ ಬಳ್ಳಾರಿ ರಸ್ತೆ ಮಾರ್ಗದಲ್ಲಿ ನಿರಾಶ್ರಿತ ನೂರಾರು ಕುಟುಂಬಗಳಿಗೆ ಪ್ರತ್ಯೇಕವಾಗಿ ನಿರ್ಮಾಣ ಮಾಡಿರುವ ಅಭಿಷೇಕ ನಗರಕ್ಕೆ ರಸ್ತೆ ನಿರ್ಮಾಣ ಕಾಮಗಾರಿಗೆ ತೊಂದರೆ ಆಗಿದ್ದ ಒತ್ತುವರಿ ಜಾಗವನ್ನು ಕೋರ್ಟ್ ಆದೇಶದಂತೆ ಮಂಗಳವಾರ ತೆರವುಗೊಳಿಸಿ ರಸ್ತೆ ನಿರ್ಮಾಣ ಕಾರ್ಯ ಆರಂಭ ಮಾಡಲಾಗಿದೆ ಎಂದು ತಹಸೀಲ್ದಾರ್ ರೇಹಾನ್ ಪಾಷಾ ತಿಳಿಸಿದರು.
ನಗರದ ಹೆದ್ದಾರಿ ಮಾರ್ಗದಿಂದ ಅಭಿಷೇಕ ನಗರಕ್ಕೆ ಪ್ರಹ್ಲಾದ್ ಮತ್ತು ಚಿದಂಬರಂ ಎಂಬುವರ ಮಾಲೀಕತ್ವದ ಜಮೀನಿನಲ್ಲಿ ಕಾಲುದಾರಿ ಜಾಡಿನಲ್ಲಿ ಓಡಾಟ ಮಾಡಲಾಗುತ್ತಿತ್ತು. ಮಳೆಗಾಲದಲ್ಲಿ ಇಲ್ಲಿ ಹರಿಯುವ ಹಳ್ಳದಿಂದ ತೊಂದರೆಗೀಡಾಗುತ್ತಿದ್ದ ಜನರ ಅಪಾಯ ತಪ್ಪಿಸಲು ಡಾಂಬರೀಕರಣ ರಸ್ತೆ ಮಾಡಲು ಸಿದ್ಧತೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಜಮೀನು ಮಾಲೀಕರು ಕೋರ್ಟಿಗೆ ಹೋಗಲಾಗಿತ್ತು. ಕೋರ್ಟ್ ಆದೇಶದಂತೆ ರಸ್ತೆಯಿದ್ದ ಜಮೀನು ಮತ್ತು ಅಕ್ಕಪಕ್ಕದವರ ಜಮೀನು ಒಟ್ಟಾರೆಯಾಗಿ ಅಳತೆ ಮಾಡಿದಾಗ, ಪಕ್ಕದ ಜಮೀನಿನವರು ಪ್ರಹ್ಲಾದ್ ಮತ್ತು ಚಿದಂಬರ್ ಎಂಬುವರ ಜಮೀನನ್ನು ಸುಮಾರು ಒಂದು ಎಕರೆ ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಒತ್ತುವರಿ ತೆರವುಗೊಳಿಸಿದ ಜಮೀನಿನಲ್ಲಿ ರಸ್ತೆ ಮಾಡಲು ಪ್ರಹ್ಲಾದ್ ಮತ್ತು ಚಿದಂಬರಂ ಎಂಬುವರು ಸಂತೋಷವಾಗಿ ಒಪ್ಪಿರುವ ಕಾರಣ, ರಸ್ತೆ ಕಾಮಗಾರಿ ಆರಂಭ ಮಾಡಲಾಗಿದೆ ಎಂದು ತಿಳಿಸಿದರು.
ನಗರಸಭಾ ಸದಸ್ಯ ಟಿ. ಮಲ್ಲಿಕಾರ್ಜುನ ಮಾತನಾಡಿ, ಬೂದಿಹಳ್ಳಿ ಗ್ರಾಮದ ನಿರಾಶ್ರಿತರು ಸೇರಿದಂತೆ ಚಿಂದಿ ಆಯುವ ಮತ್ತು ಆಟಿಕೆ ಸಾಮಾನು ಮಾರಾಟ ಮಾಡುವ ದೊಂಬಿದಾಸರ ಕುಟುಂಬಗಳು ವೆಂಕಟೇಶ್ವರ ನಗರ ಕೆರೆಯಂಗಳದಲ್ಲಿ ಜೀವನ ಕಟ್ಟಿಕೊಳ್ಳಲಾಗಿತ್ತು. ಕೆರೆ ನೀರು ಅಪಾಯ ಮಟ್ಟ ತಲುಪಿದಾಗ ತುರ್ತಾಗಿ ಶಾಸಕರ ಸೂಚನೆಯಂತೆ ಅಭಿಷೇಕ ನಗರಕ್ಕೆ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಟೆಂಟ್ ಗುಡಿಸಲುಗಳಲ್ಲಿ ಜೀವನ ಮಾಡುತ್ತಿದ್ದಾರೆ. ಲಿಡ್ಕರ್ ನಿಗಮದಡಿ ವಸತಿ ಸೌಲಭ್ಯಕ್ಕೆ ಅನುಕೂಲ ಮಾಡಲಾಗಿದೆ. ನಗರದಿಂದ ಅಭಿಷೇಕ್ ನಗರಕ್ಕೆ ಸಂಪರ್ಕ ರಸ್ತೆಗೆ ದಾರಿ ಸಮಸ್ಯೆ ಆಗಿತ್ತು. ಈಗ ಕೋರ್ಟ್ ಆದೇಶದಂತೆ ಸಮಸ್ಯೆ ಬಗೆಹರಿದಿದೆ. ನಗರೋತ್ಥಾನ ನಾಲ್ಕನೇ ಹಂತದ ೧ ಕೋಟಿ ಅನುದಾನದಲ್ಲಿ ೮೧೮ ಅಡಿ ಉದ್ದ ೩೦ ಅಡಿ ಅಗಲ ಡಾಂಬರೀಕರಣ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಸರ್ವೆ ಎಡಿಎಲ್‌ಆರ್ ಬಾಬುರೆಡ್ಡಿ, ಕಂದಾಯ ನಿರೀಕ್ಷಕ ತಿಪ್ಪೇಸ್ವಾಮಿ, ಗ್ರಾಮಾಧಿಕಾರಿ ಪ್ರಕಾಶ, ಎ. ಪ್ರಸನ್ನ, ವಿನಯ್, ಎನ್. ಹೊನ್ನೂರುಸ್ವಾಮಿ, ಜಿ.ಎಂ. ಕೊಟ್ರೇಶ್, ಚಿದಂಬರಂ, ಪ್ರಹ್ಲಾದ್ ಮತ್ತಿತರರು ಇದ್ದರು.