For the best experience, open
https://m.suddione.com
on your mobile browser.
Advertisement

ನವೆಂಬರ್ 30 ರಂದು ಅದ್ದೂರಿ ಕನಕದಾಸರ ಜಯಂತಿ ಆಚರಣೆ : ಶ್ರೀರಾಮ್

02:30 PM Nov 28, 2023 IST | suddionenews
ನವೆಂಬರ್ 30 ರಂದು ಅದ್ದೂರಿ ಕನಕದಾಸರ ಜಯಂತಿ ಆಚರಣೆ   ಶ್ರೀರಾಮ್
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ನ.28 : ಇದೇ ನವೆಂಬರ್ 30 ರಂದು ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿರುವ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಕುರುಬರ ಸಂಘವು ಪಾಲ್ಗೊಂಡು ಅದ್ದೂರಿಯಾಗಿ ಆಚರಿಸಲು ನಗರವನ್ನು ವಿದ್ಯುತ್ ಅಲಂಕರಾದಿಂದ ಸಿಂಗರಿಸುವ ಮೂಲಕ ಸಕಲ ಸಿದ್ದತೆ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎಸ್.ಶ್ರೀರಾಮ್ ಹೇಳಿದ್ದಾರೆ.

Advertisement

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಕದಾಸರ ಕೇವಲ ಕುರುಬ ಸಮಾಜಕ್ಕೆ ಸೀಮಿತವಾದವರಲ್ಲ. ಎಲ್ಲಾ ಸಮಾಜಕ್ಕೂ ಮಾರ್ಗದರ್ಶಕರಾದ ಮಹಾನ್ ವ್ಯಕ್ತಿ. ಅವರ ಕೀರ್ತನೆಗಳಿಂದ ಸಕಲ ಸಮಾಜವನ್ನು ತಿದ್ದುವ ಕಾರ್ಯ ಮಾಡಿದ್ದಾರೆ. ಆಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನು ಎಲ್ಲಾ ಸಮುದಾಯಗಳ ಜನರು ಸೇರಿಕೊಂಡು ಆಚರಣೆ ಮಾಡಬೇಕಿದೆ. ಇದಕ್ಕಾಗಿ ಎಲ್ಲಾ ವರ್ಗದ ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಅದೇ ರೀತಿ ವಿವಿಧ  ಕ್ಷೇತ್ರಗಳಲ್ಲಿ ಸಾಧನೆ ಹಾಗೂ ಜನಸೇವೆ ಮಾಡಿರುವಂತಹ ಆರೋಗ್ಯ ಇಲಾಖೆಯ ಮಲ್ಲಣ್ಣ, ಸಮಾಜ ಸೇವಕರಾದ ದುರುಗೇಶಪ್ಪ, ಮಹ್ಮದ್ ನೂರುಲ್ಲಾ, ಸಿದ್ದೇಶ್ ಜೋಗಿ, ದೀಪು ಅವರಿಗೆ ಕನಕ ಶ್ರೀ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ಮಾತನಾಡಿ, ರಾಜ್ಯ ಸರ್ಕಾರ ಶಾಶ್ವತ ಹಿಂದುಳಿದ ಆಯೋಗ  ಕಾಂತರಾಜ್ ನೇತೃತ್ವದಲ್ಲಿ ನಡೆಸಿರುವ ಶೈಕ್ಷಣಿಕ, ಸಮಾಜಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಯನ್ನು ಸ್ವೀಕರಿಸಿ, ಅಂಗೀಕರಿಸಬೇಕು ಎಂದು ಒತ್ತಾಯಿಸಿದರು.

ಕನಕ ಜಯಂತಿ ಅಂಗವಾಗಿ 29 ರಂದು ಬೆಳಗ್ಗೆ 9.30 ಕ್ಕೆ ಬೈಕ್ ರಾಲಿಯನ್ನು ನಡೆಸಲಾಗುವುದು. 30 ರಂದು ಕನಕದಾಸರ ಪ್ರತಿಮೆಯೊಂದಿಗೆ ನಗರದ ಪ್ರಮುಖ ಬೀದಿಯಲ್ಲಿ ಅದ್ದೂರಿ ಮೆರವಣೆಗೆ ಮಾಡಲಾಗುವುದು ಎಂದು ಹೇಳಿದ ಅವರು, ಕಾರ್ಯಕ್ರಮದಲ್ಲಿ ಸಮಾಜದ ಸಾಧಕರಾದ ನಿಶಾನಿ ಎಂ.ಜಯ್ಯಣ್ಣ, ವೈದ್ಯರಾದ ಡಾ.ದೇವರಾಜ್, ಚತ್ತಿಸ್‍ಘಡದ ಶರತ್ ಬಿ.ಶ್ರೀನಿವಾಸ್ ಕೋರಿ, ಕೃಷಿ ಕ್ಷೇತ್ರದಲ್ಲಿ ಬಿ.ಹೆಚ್.ಹನುಮಂತಪ್ಪ ಗೌಡ, ಎಂ.ಕಾಂ.ನಲ್ಲಿ ಬಂಗಾರದ ಪದಕ ಪಡೆದಿರುವ ಚೈತನ್ಯ ಸಿ.ಎಂ. ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.

ಸಂಜೆ 6.30 ಕ್ಕೆ ಕನಕ ವೃತ್ತದಲ್ಲಿ ಜೀಕನ್ನಡ ವಾಹಿನಿಯ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ, ಮಾಜಿ ಸದಸ್ಯ ರವಿಶಂಕರ್ ಬಾಬು, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಓಂಕಾರಪ್ಪ, ಮಲ್ಲಿಕಾರ್ಜುನ್, ಪುಷ್ಪವಲ್ಲಿ, ರಾಜ್ಯ ಸಂಘದ ಉಪಾಧ್ಯಕ್ಷರಾದ ಲೇಪಾಕ್ಷಿ, ನಿಶಾನಿ ಶಂಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags :
Advertisement