For the best experience, open
https://m.suddione.com
on your mobile browser.
Advertisement

ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕದ ದಲಿತ ಚಳುವಳಿಗೆ ಐವತ್ತು ವರ್ಷಗಳ ಸಂಭ್ರಮ | ಜೂನ್ 09 ರಂದು ಅರಮನೆ ಮೈದಾನದಲ್ಲಿ ಜನ್ಮದಿನ ಆಚರಣೆ

05:35 PM Feb 17, 2024 IST | suddionenews
ಪ್ರೊ ಬಿ ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕದ ದಲಿತ ಚಳುವಳಿಗೆ ಐವತ್ತು ವರ್ಷಗಳ ಸಂಭ್ರಮ   ಜೂನ್ 09 ರಂದು ಅರಮನೆ ಮೈದಾನದಲ್ಲಿ ಜನ್ಮದಿನ ಆಚರಣೆ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ,ಫೆ.17 : ಸಂವಿಧಾನ ಜಾರಿಗೊಳಿಸುವ ಜಾಗದಲ್ಲಿ ಮನುವಾದಿಗಳು ಕುಳಿತಿರುವುದರಿಂದ ಅಪಾಯದಲ್ಲಿರುವ ಸಂವಿಧಾನವನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಶಿವಮೊಗ್ಗದ ಎಂ.ಗುರುಮೂರ್ತಿ ದಲಿತರನ್ನು ಜಾಗೃತಿಗೊಳಿಸಿದರು.

Advertisement

ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕದ ದಲಿತ ಚಳುವಳಿಗೆ ಐವತ್ತು ವರ್ಷಗಳ ಸಂಭ್ರಮವನ್ನು ತ.ರಾ.ಸು.ರಂಗಮಂದಿರದಲ್ಲಿ ಶನಿವಾರ ಉದ್ಗಾಟಿಸಿ ಮಾತನಾಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಹುಟ್ಟುಹಾಕುವ ಮುನ್ನ ಪ್ರೊ.ಬಿ.ಕೃಷ್ಣಪ್ಪ ಸಮಾಜವಾದದಲ್ಲಿದ್ದರು. ಅಂಬೇಡ್ಕರ್‍ರವರ ವಾದದಿಂದ ಮಾತ್ರ ದಲಿತರ ಉದ್ದಾರ ಸಾಧ್ಯ ಎನ್ನುವುದನ್ನು ಅರಿತು 1974 ರಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಹುಟ್ಟುಹಾಕಿದರು. ಅಂದಿನಿಂದ ಜೀವಿತದ ಕೊನೆಯುಸಿರಿರುವತನಕ ದಲಿತರು, ಹಿಂದುಳಿದವರು, ಶೋಷಿತರು, ಅಲ್ಪಸಂಖ್ಯತಾರ ಪರವಾಗಿ ಹೋರಾಟ ಮಾಡಿಕೊಂಡು ಬಂದ ಪರಿಶುದ್ದ ನಾಯಕ ಪ್ರೊ.ಬಿ.ಕೃಷ್ಣಪ್ಪನವರ ಆಚಾರ, ವಿಚಾರ, ತತ್ವ ಸಿದ್ದಾಂತಗಳ ಮೇಲೆ ದಲಿತರು ನಡೆಯಬೇಕಿದೆ ಎಂದು ಕರೆ ನೀಡಿದರು.

ಪ್ರಗತಿಪರರು, ಬುದ್ದಿಜೀವಿಗಳು ಎನಿಸಿಕೊಂಡ ರಾಜಕಾರಣಿಗಳೆ ಶಿಸ್ತುಬದ್ದ ಸಂಘಟನೆ ಕಟ್ಟಿದ ಪ್ರೊ.ಬಿ.ಕೃಷ್ಣಪ್ಪನವರ ಚಳುವಳಿಯನ್ನು ಹೊಡೆದು ಹಾಕಿದರು. ನಾಲ್ಕು ಜನರನ್ನು ತುಳಿದು ಬೆಳೆಯುವವನು ನಾಯಕನಾಗುವುದಿಲ್ಲ. ನಾಲ್ಕು ಜನರನ್ನು ಬೆಳೆಸಿ ಬೆಳೆಯುವವನು ನಿಜವಾದ ನಾಯಕ. ಅಂತಹ ಸಾಲಿಗೆ ಸೇರಿದ ಪ್ರೊ.ಬಿ.ಕೃಷ್ಣಪ್ಪನವರಲಿತಾಕತ್ತು, ಗಟ್ಟಿ ಗುಂಡಿಗೆಯಿತ್ತು. ವೈಯಕ್ತಿಕ ಬದುಕನ್ನು ಬದಿಗೊತ್ತಿ ಹೋರಾಟವನ್ನೆ ತಮ್ಮ ಉಸಿರಾಗಿಸಿಕೊಂಡು ಬಂಡವಾಳಶಾಹಿಗಳು, ಭೂ ಮಾಲೀಕರುಗಳಲ್ಲಿ ನಡುಕ ಹುಟ್ಟಿಸಿದರು. ದಲಿತರಿಗೆ ನ್ಯಾಯ ಕೊಡಿಸಬೇಕೆಂದು ಅನೇಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡರು. ಕೋಲಾರದ ಹುಣಸೆಕೋಟೆಯ ಅನುಸೂಯಮ್ಮನ ಮೇಲೆ ಅತ್ಯಾಚಾರವಾದಾಗ ಹುಣಸೆಕೋಟೆಯಿಂದ ವಿಧಾನಸೌಧದವರೆಗೆ ಪಾದಯಾತ್ರೆ ನಡೆಸಿದರು.

ಚಂದ್ರಗುತ್ತಿಯಲ್ಲಿನ ದಲಿತ ಹೆಣ್ಣು ಮಕ್ಕಳ ಬೆತ್ತಲೆ ಸೇವೆಯನ್ನು ತಡೆದು ಬಟ್ಟೆ ತೊಡಿಸಿ ಮಾನ ಕಾಪಾಡಿದ ಕೀರ್ತಿ ಪ್ರೊ.ಬಿ.ಕೃಷ್ಣಪ್ಪನವರಿಗೆ ಸಲ್ಲಬೇಕು. ಒಂದುವರೆ ವರ್ಷಗಳ ಕಾಲ ನಿರಂತರ ಹೋರಾಟ ನಡೆಸಿ ಪಿ.ಟಿ.ಸಿ.ಎಲ್. ಐತಿಹಾಸಿಕ ಕಾಯಿದೆ ಜಾರಿಗೆ ಕಾರಣಕರ್ತರಾದವರು. ಅಂತಹ ಮಹನೀಯರ ಹೆಜ್ಜೆ ಗುರುತಿನಲ್ಲಿ ದಲಿತರು ಸಾಗಬೇಕಿದೆ ಎಂದು ಹೇಳಿದರು.

ಬಗರ್‍ಹುಕುಂ ಪದವನ್ನು ಪರಿಚಯಿಸಿದ್ದೆ ಪ್ರೊ.ಬಿ.ಕೃಷ್ಣಪ್ಪ ಎನ್ನುವುದನ್ನು ದಲಿತರು ಮರೆಯಬಾರದು. ವಿದ್ಯಾವಂತರಾಗಿದ್ದ ಅವರು ಹೃದಯವಂತರಾಗಿದ್ದರು. ಅಧಿಕಾರದ ಆಸೆಗೆ ಚಳುವಳಿಯನ್ನು ಬಲಿಕೊಡಲಿಲ್ಲ. ಹೆಂಡ ಬೇಡ ಹೋಬಳಿಗೊಂದು ವಸತಿ ಶಾಲೆಯನ್ನು ತೆರೆಯಿರಿ ಎಂದು ಸರ್ಕಾರದ ಕಣ್ಣು ತೆರೆಸಿದ್ದರು. ನಮ್ಮ ಮಕ್ಕಳು ಈಗ ಓದುತ್ತಿದ್ದಾರೆಂದರೆ ಅದು ಡಿ.ಎಸ್.ಎಸ್.ಕೊಟ್ಟ ಬಳುವಳಿ. ಹೆಂಡತಿ ಶೀಲ ಅನುಮಾನಿಸಿ ಕಾಡಿಗಟ್ಟಿದವನಿಗೆ ಜೈಕಾರ ಹಾಕುವ ವಂಶ ನಮ್ಮದಲ್ಲ. ಮನುಸ್ಮøತಿ ಸುಟ್ಟುಹಾಕಿ ಸಂವಿಧಾನ ಬರೆದ ಡಾ.ಬಿ.ಆರ್.ಅಂಬೇಡ್ಕರ್ ವಂಶ ನಮ್ಮದು. ಗಂಟೆ ಭಾರಿಸುವವರ ಮಕ್ಕಳು ಸಂವಿಧಾನ ಬದಲಾಯಿಸುವುದಾಗಿ ಹೇಳುತ್ತಿದ್ದಾರೆ. ಸಂವಿಧಾನ ರಕ್ಷಣೆ ಮಾಡಬೇಕಾಗಿರುವವರ ಮಕ್ಕಳು ಗಂಟೆ ಬಾರಿಸುತ್ತಿದ್ದಾರೆ. ಸಂವಿಧಾನ ಕೇವಲ ಮನುಷ್ಯರಿಗಾಗಿ ಅಷ್ಟೆ ಅಲ್ಲ. ಗಿಡ, ಮರ, ಪ್ರಾಣಿ, ಪಕ್ಷಿಗಳಿಗೂ ಬದುಕುವ ಹಕ್ಕಿದೆ ಎಂದು ಸಂವಿಧಾನದಲ್ಲಿ ಹೇಳಿದೆ.

ಜಾತಿ ಮೀರಿ ಅನೇಕ ಚಳುವಳಿಗಳು ರಾಜ್ಯದಲ್ಲಿ ನಡೆಯುತ್ತಿದೆ ಎಂದರೆ ಅದಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪಾಲು ದೊಡ್ಡದಿದೆ. ರೋಷ, ಆವೇಶ, ಸ್ವಾಭಿಮಾನದ ಕಿಚ್ಚನ್ನು ದಲಿತರು ಬೆಳೆಸಿಕೊಂಡಾಗ ಮಾತ್ರ ನಿಜವಾಗಿಯೂ ಪ್ರೊ.ಬಿ.ಕೃಷ್ಣಪ್ಪನವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಡಿ.ಎಸ್.ಎಸ್.ಜೊತೆ ಕೆಲಸ ಮಾಡುವುದೆಂದರೆ ಸಾವಿನ ಜೊತೆ ಸರಸವಾಡಿದಂತೆ. ಮಾಲೀಕರು, ಬಂಡವಾಳಶಾಹಿಗಳ ವಿರುದ್ದ ನಮ್ಮ ಹೋರಾಟ. ಅಂಬೇಡ್ಕರ್‍ರವರನ್ನು ರಾಜ್ಯದಲ್ಲಿ ಪರಿಚಯ ಮಾಡಿಸಿದ್ದೆ ಪ್ರೊ.ಬಿ.ಕೃಷ್ಣಪ್ಪ ಎಂದು ಸ್ಮರಿಸಿದರು.

ಜೂ.9 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಪ್ರೊ.ಬಿ.ಕೃಷ್ಣಪ್ಪನವರ ಜನ್ಮದಿನದಂದು ಅನೇಕ ಹಕ್ಕೊತ್ತಾಯಗಳನ್ನು ಸರ್ಕಾರಕ್ಕೆ ಮಂಡಿಸಲಾಗುವುದು. ಅದಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕರ್ನಾಟಕದ ದಲಿತ ಚಳುವಳಿಗೆ ಐವತ್ತು ವರ್ಷಗಳ ಸಂಭ್ರಮ ಆಚರಿಸುತ್ತಿದ್ದು, ಚಿತ್ರದುರ್ಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಭಾಗವಹಿಸುವಂತೆ ಮನವಿ ಮಾಡಿದರು.

ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡಿ ಪ್ರೊ.ಬಿ.ಕೃಷ್ಣಪ್ಪನವರಿಂದ ನನಗೆ ಹೋರಾಟದ ಕಿಚ್ಚು ಹುಟ್ಟಿತ್ತು. ಅಂದಿನಿಂದ ಎಂ.ಜಯಣ್ಣ, ಮುರುಘರಾಜೇಂದ್ರ ಒಡೆಯರ್ ಜೊತೆ ಸೇರಿಕೊಂಡು ಹೋರಾಟಕ್ಕಿಳಿದೆವು. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕೇವಲ ದಲಿತರಿಗಷ್ಠೆ ಸಂವಿಧಾನ ನೀಡಿಲ್ಲ. ಎಲ್ಲಾ ಜಾತಿ ಧರ್ಮದವರಿಗೂ ಸಮಾನತೆ ಕೊಟ್ಟಿದ್ದಾರೆ. ಚಿತ್ರದುರ್ಗ ಎಂದರೆ ಹೋರಾಟಗಾರರನ್ನು ಕೊಟ್ಟ ಊರು. ಮುಂದಿನ ಪೀಳಿಗೆ ಭವಿಷ್ಯ ರೂಪಿಸಿಕೊಳ್ಳಬೇಕೆಂದರೆ ಪ್ರೊ.ಬಿ.ಕೃಷ್ಣಪ್ಪನವರ ಹಾದಿಯಲ್ಲಿ ಎಲ್ಲರೂ ಸಾಗೋಣ ಎಂದು ಹೇಳಿದರು.

ಸಂಭ್ರಮ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಣ್ಣ ಜೂ.9 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಪ್ರೊ.ಬಿ.ಕೃಷ್ಣಪ್ಪನವರ ಜನ್ಮದಿನದಂದು ದಲಿತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಬೇಕು. ಈಗಿನ ಯುವ ಪೀಳಿಗೆ ಪ್ರೊ.ಬಿ.ಕೃಷ್ಣಪ್ಪನವರ ಬಗ್ಗೆ ತಿಳಿಯುವುದು ಅತ್ಯವಶ್ಯಕ. ಆಗ ಮಾತ್ರ ಅವರು ಹುಟ್ಟುಹಾಕಿದ ಚಳುವಳಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ತಿಳಿಸಿದರು.

ನಿವೃತ್ತ ಪ್ರಾಂಶುಪಾಲರಾದ ಭದ್ರಾವತಿಯ ಶಿವಬಸಪ್ಪ ಮಾತನಾಡುತ್ತ ಕರ್ನಾಟಕ ದಲಿತ ಚಳುವಳಿಗೆ ಐವತ್ತು ವರ್ಷಗಳ ಸಂಭ್ರಮ ಹೆಮ್ಮೆ ಪಡುವ ವಿಚಾರ. ಪ್ರೊ.ಬಿ.ಕೃಷ್ಣಪ್ಪನವರು ಹುಟ್ಟು ಹಾಕಿದ ಚಳುವಳಿಯನ್ನು ಹೊಡೆದು ಹಾಕುವ ಕೆಲಸ ಕೆಲವರಿಂದ ನಡೆಯುತ್ತಿದೆ.

ಚಿತ್ರದುರ್ಗಕ್ಕೂ, ಕೃಷ್ಣಪ್ಪನವರಿಗೂ, ಡಿ.ಎಸ್.ಎಸ್.ಗೂ ಅವಿನಾಭಾವ ಸಂಬಂಧವಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸಿದ ಪ್ರೊ.ಬಿ.ಕೃಷ್ಣಪ್ಪ ಚಿತ್ರದುರ್ಗ ಜಿಲ್ಲೆಯವರು ಎನ್ನುವುದು ಮತ್ತೊಂದು ವಿಶೇಷ ಎಂದರು.
ಸಂಘಟನೆಗೆ ತ್ಯಾಗ ಮಾಡಿದವರ ದಿಕ್ಕು ತಪ್ಪಿಸುವ ಕುತಂತ್ರ ಕೆಲವರಿಂದ ನಡೆಯುತ್ತಿದೆ. ಅಧಿಕೃತ ಸಂಘಟನೆಗೆ ತೊಂದರೆ ಕೊಡುತ್ತಿರುವವರ ವಿರುದ್ದ ಎಚ್ಚರಿಕೆಯಿಂದಿರಬೇಕೆಂದು ದಲಿತರಲ್ಲಿ ಜಾಗೃತಿ ಮೂಡಿಸಿದರು.

ಶಿವಮೊಗ್ಗ ಜಿಲ್ಲಾ ಸಂಚಾಲಕ ಎಂ.ಏಳುಕೋಟಿ, ವೈ.ರಾಜಣ್ಣ, ಕೆ.ಮಲ್ಲೇಶ್, ಹುಲ್ಲೂರು ಕುಮಾರ್, ಶ್ರೀನಿವಾಸ್‍ಮೂರ್ತಿ, ವಿಜಯ್ ಇನ್ನು ಅನೇಕರು ವೇದಿಕೆಯಲ್ಲಿದ್ದರು.

Tags :
Advertisement