For the best experience, open
https://m.suddione.com
on your mobile browser.
Advertisement

ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸಿ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

04:13 PM Sep 04, 2024 IST | suddionenews
ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸಿ   ಜಿಲ್ಲಾಧಿಕಾರಿ ಟಿ ವೆಂಕಟೇಶ್
Advertisement

Advertisement
Advertisement

ಚಿತ್ರದುರ್ಗ. ಸೆ.04: ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸಿ ನೈಸರ್ಗಿಕ ಜಲಸಂಪನ್ಮೂಲಗಳನ್ನು ಸಂರಕ್ಷಿಸಲು ಜಿಲ್ಲೆಯ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬ ಆಚರಿಸಲು ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಪರಿಸರ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಪಾಲಿಸಿ ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸುವಂತೆ ಜಿಲ್ಲೆಯ ಸಾರ್ವಜನಿಕರಲ್ಲಿ ಕೋರಿದ್ದಾರೆ.

Advertisement

ಪ್ರತಿ ವರ್ಷದಂತೆ ಈ ಬಾರಿಯು ಸ್ವರ್ಣ ಗೌರಿ ಹಾಗೂ ವರಸಿದ್ಧಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಒ.ಪಿ) ಮತ್ತು ಬಣ್ಣದ ವಿಗ್ರಹಗಳನ್ನು ಸ್ಥಾಪಿಸಿ ಪೂಜಿಸಿದ ನಂತರ ಕೆರೆ, ಬಾವಿ ಹಾಗೂ ಇನ್ನಿತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದರಿಂದ ನೈಸರ್ಗಿಕ ಜಲಮೂಲಗಳು ಕಲುಷಿತಗೊಂಡು ಇವುಗಳ ಭೌತಿಕ ಹಾಗೂ ರಾಸಾಯನಿಕ ಗುಣಗಳು ಮಾರ್ಪಟ್ಟು ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದಲ್ಲದೆ ಪ್ರಾಣಿ, ಪಕ್ಷಿ ಹಾಗೂ ಜಲಚರಗಳ ಜೀವಕ್ಕೆ ಅಪಾಯವಾಗುತ್ತದೆ. ಅಲ್ಲದೆ ಸಾರ್ವಜನಿಕ ಆರೋಗ್ಯಕ್ಕೂ ದಕ್ಕೆ ಉಂಟಾಗುತ್ತದೆ. ಹಾಗಾಗಿ ನೀರಿನ ಮೂಲಗಳಾದ ನದಿ, ತೊರೆ, ಹಳ್ಳ, ಬಾವಿ ಇವುಗಳು ಮಾಲಿನ್ಯಕ್ಕೊಳಗಾಗದಂತೆ ಸಂರಕ್ಷಿಸುವ ಉದ್ದೇಶದಿಂದ ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತಗೊಂಡಂತಹ ಯಾವುದೇ ರೀತಿಯ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ವಿಗ್ರಹಗಳ ಉತ್ಪಾದನೆ, ಮಾರಾಟ ಹಾಗೂ ಅವುಗಳನ್ನು ಮೇಲೆ ತಿಳಿಸಿದ ಯಾವುದೇ ನೀರಿನ ಮೂಲಗಳಲ್ಲಿ ವಿಸರ್ಜಿಸುವುದನ್ನು ಸಂರ್ಪೂಣವಾಗಿ ನಿಷೇಧಿಸಲಾಗಿದೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ತಯಾರಿಸಬಾರದೆಂದು ಹಾಗೂ ರಾಜ್ಯದ ಯಾವುದೇ ಜಲ ಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ರಾಸಾಯನಿಕಯುಕ್ತ ಬಣ್ಣ ಲೇಪಿತ ವಿಗ್ರಹಗಳನ್ನು ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಈ ಆದೇಶ ಉಲ್ಲಂಘಿಸಿದ್ದಲ್ಲಿ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಲಾಗುವುದು.
ಗೌರಿಗಣೇಶ ಹಬ್ಬದ ಸಂದರ್ಭದಲ್ಲಿ ಬಣ್ಣ ರಹಿತ ಮಣ್ಣಿನ, ನೈಸರ್ಗಿಕ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿ ತದನಂತರ ಗೌರಿಗಣೇಶ ಮೂರ್ತಿಗಳನ್ನು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ವತಿಯಿಂದ ನಿಗಧಿಪಡಿಸಿರುವ ಸ್ಥಳಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸುವುದು.
ಗೌರಿ ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸಂದರ್ಭದಲ್ಲಿ ಹಸಿ ಕಸ (ಹೂ, ಹಣ್ಣು, ಬಾಳೆ ಕಂಬ, ಮಾವಿನ ತೋರಣ ಇತ್ಯಾದಿ ಅಲಂಕಾರಿಕ ವಸ್ತುಗಳು) ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜಿಸದೇ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಯ ಕಸ ಸಂಗ್ರಹಣ ವಾಹನಕ್ಕೆ ನೀಡುವುದು. ಸಾರ್ವಜನಿಕವಾಗಿ ನಡೆಸುವ ಗಣೇಶ ಮೂರ್ತಿಯ ಉತ್ಸವದ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಿ, ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬಾರದು.

Advertisement

ಸಾರ್ವಜನಿಕವಾಗಿ ಗಣೇಶ ಹಬ್ಬದ ಸಮಯದಲ್ಲಿ ಶಬ್ದ ಮಾಲಿನ್ಯ (ನಿರ್ಬಂಧ ಮತ್ತು ನಿಯಂತ್ರಣ) ನಿಯಮಗಳು 2000 ಅಡಿಯಲ್ಲಿ ವ್ಯಾಖ್ಯಾನಿಸಲಾದ ನಿಯೋಜಿತ ಪ್ರಾಧಿಕಾರದಿಂದ ಲಿಖಿತ ಅನುಮತಿ ಪಡೆಯದ ಹೊರತು ಧ್ವನಿವರ್ಧಕ, ಸಾರ್ವಜನಿಕ ಗಣೇಶ ಪೆಂಡಾಲುಗಳಲ್ಲಿ ಬಳಸುವ ವಿದ್ಯುನ್ಮಾನ ಉಪಕರಣಗಳು ಮತ್ತು ಶಬ್ದ ಉಂಟು ಮಾಡುವ ಉಪಕರಣಗಳನ್ನು ಬಳಸಬಾರದು ಹಾಗೂ ಧ್ವನಿವರ್ಧಕಗಳ ಬಳಕೆಯನ್ನು ರಾತ್ರಿ 10 ಗಂಟೆಯಿAದ ಬೆಳಿಗ್ಗೆ 6 ಗಂಟೆಯವರೆಗೆ ಸಂರ್ಪೂಣವಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘನೆಯಾದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

Tags :
Advertisement