Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮಕ್ಕಳನ್ನು ಬಳಸಿಕೊಳ್ಳುವಂತಿಲ್ಲ, ಮದುವೆ ಮುಂತಾದ ಸಭೆಗಳಲ್ಲಿ ಪ್ರಚಾರ ಮಾಡುವಂತಿಲ್ಲ : ಹಾಗಾದರೆ ಚುನಾವಣಾ ಪ್ರಚಾರದ ನಿಯಮಗಳೇನು ? ರಾಜಕೀಯ ಪಕ್ಷಗಳಿಗೆ ಜಿಲ್ಲಾಧಿಕಾರಿ ಸೂಚನೆಯೇನು ? ಇಲ್ಲಿದೆ ಮಾಹಿತಿ...!

05:11 PM Mar 17, 2024 IST | suddionenews
Advertisement

ಚಿತ್ರದುರ್ಗ. ಮಾ.17:  ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ.  ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ಅನುಮತಿ ಪಡೆಯಲು ಸುವಿಧಾ ತಂತ್ರಾಂಶದ ಮೂಲಕವೇ ಅರ್ಜಿ ಸಲ್ಲಿಸಬೇಕು. ಅನುಮತಿಯನ್ನು ಸಹ ಸುವಿಧಾ ತಂತ್ರಾಂಶದಲ್ಲಿಯೇ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.  

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಪ್ರಚಾರ ಸಭೆ, ಪ್ರಚಾರಕ್ಕೆ ಬಳಸುವ ವಾಹನ ಸೇರಿದಂತೆ ಇತರೆ ವಿಷಯಗಳಿಗೆ ಅನುಮತಿ ಪಡೆಯಲು ಭೌತಿಕವಾಗಿ ಅರ್ಜಿ ಸಲ್ಲಿಸಲು ಯಾವುದೇ ಅವಕಾಶ ಇಲ್ಲ. ಸುವಿಧಾ ತಂತ್ರಾಂಶದ ಮೂಲಕವೇ ಅರ್ಜಿ ಸಲ್ಲಿಸಬೇಕು.  ಚುನಾವಣೆ ಪ್ರಚಾರ ಸಭೆಯ ಆಯೋಜನೆಯ 48 ಗಂಟೆಗಳ ಮುನ್ನ ಅರ್ಜಿ ಸಲ್ಲಿಸಿದರೆ ಅನುಮತಿ ನೀಡಲು ಅನುಕೂಲವಾಗಲಿದೆ. ಅರ್ಜಿ ಸಲ್ಲಿಸಿದ ಜೇಷ್ಠತೆಯ ಆಧಾರದಲ್ಲಿಯೇ ಅನುಮತಿಯನ್ನು ಸಹ ನೀಡಲಾಗುವುದು.  ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲು ಅನುಮತಿ ಲಭಿಸಲಿದೆ. ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ. ಎಲ್ಲಾ ಚುನಾವಣೆ ಕಾರ್ಯ ನಿಮಿತ್ತ, ಪೊಲೀಸ್, ಅಗ್ನಿಶಾಮಕ ಸೇರಿದಂತೆ ವಿವಿಧ ಇಲಾಖೆಗಳ ಅನುಮತಿಗಾಗಿ ಏಕಗವಾಕ್ಷಿ ವ್ಯವಸ್ಥೆ ಆರಂಭಿಸಿರುವುದಾಗಿ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

Advertisement

ಎಲೆಕ್ಟ್ರಾನಿಕ್ ಮಾಧ್ಯಮ ಮೂಲಕ ಬಿತ್ತರಿಸುವ ಜಾಹೀರಾತು ಸಂದೇಶ ವಿಷಯದ ಬಗ್ಗೆ ಮಾಧ್ಯಮ ಪ್ರಮಾಣೀಕರ ಸಮಿತಿಯ ಅನುಮೋದನೆ ಪಡೆಯಬೇಕು. ಅನ್ಯಧರ್ಮ, ಕೋಮು, ಜಾತಿ ಹಾಗೂ ವ್ಯಕ್ತಿಗಳ ಬಗ್ಗೆ ದ್ವೇಷ ಭಾಷಣ ಮಾಡುವುದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲಂಘನೆಯಾಗಿದೆ. ಇಂತಹ ಪ್ರಕರಣಗಳು ಕಂಡುಬಂದರೆ ಕೇಸು ದಾಖಲಿಸಲಾಗುವುದು. ಯಾವುದೇ ಕಾರಣಕ್ಕೂ ಧಾರ್ಮಿಕ ಕಾರ್ಯಗಳು, ಜಾತ್ರೆ, ಉತ್ಸವಗಳಲ್ಲಿ ಚುನಾವಣೆ ಪ್ರಚಾರ ಮಾಡಬಾರದು.

ಖಾಸಗಿ ಮದುವೆ ಮುಂತಾದ ಸಭೆಗಳಲ್ಲಿ ರಾಜಕೀಯ ಮುಖಂಡರು ಹಾಗೂ ಅಭ್ಯರ್ಥಿ ಪಾಲ್ಗೊಳ್ಳಲು ಯಾವುದೇ ನಿರ್ಬಂಧವಿಲ್ಲ. ಆದರೆ ಈ ಸ್ಥಳಗಳಲ್ಲಿ ಚುನಾವಣೆ ಪ್ರಚಾರ ಮಾಡುವಂತಿಲ್ಲ. ಒಂದು ವೇಳೆ ಚುನಾವಣೆ ಪ್ರಚಾರ ನಡೆಸಿರುವುದು ಕಂಡುಬಂದರೆ ಇಡೀ ಮದುವೆ ಖರ್ಚು ವೆಚ್ಚಗಳು ಅಭ್ಯರ್ಥಿಯ ಚುನಾವಣೆ ವೆಚ್ಚಕ್ಕೆ ಸೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ರಾಜಕೀಯ ಪಕ್ಷಗಳ ಸಹಮತಿಯೊಂದಿಗೆ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಬಳಸುವ ಎಲ್ಲಾ ವಸ್ತುಗಳ ದರಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಈ ಆಧಾರದಲ್ಲಿ ಚುನಾವಣೆ ಪ್ರಚಾರ ವೆಚ್ಚವನ್ನು ದಾಖಲು ಮಾಡಲಾಗುವುದು. ಅಭ್ಯರ್ಥಿಗಳು ಚುನಾವಣೆ ವೆಚ್ಚಕ್ಕೆ ಸಂಬಂಧಿಸಿದಂತೆ  ರಿಜಿಸ್ಟರ್ ನಿರ್ವಹಿಸಬೇಕು. ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣೆ ಅಧಿಕಾರಿಯೊಂದಿಗೆ ಸಮನ್ವಯ ಹಾಗೂ ಸಂಪರ್ಕಕ್ಕಾಗಿ ಅಧಿಕೃತ ಏಜೆಂಟರನ್ನು ನೇಮಕ ಮಾಡಬೇಕು. ಹೀಗೆ ನೇಮಿಸಿದ ಏಜೆಂಟರುಗಳಿಗೆ ಸುವಿಧಾ ತಂತ್ರಾಂಶ ಮೂಲಕ ಅರ್ಜಿ ಸಲ್ಲಿಸುವ ಬಗ್ಗೆ, ಚುನಾವಣೆ ವೆಚ್ಚ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಚುನಾವಣೆ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಒಂದು ವೇಳೆ ಮಕ್ಕಳ ಬಳಕೆ ಕಂಡುಬಂದರೆ ಬಾಲ ನ್ಯಾಯ ಕಾಯ್ದೆ ಹಾಗೂ ಜನಪ್ರತಿನಿಧಿಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಚುನಾವಣೆ ಅಕ್ರಮ ಹಾಗೂ ಉಚಿತ ಕೊಡುಗೆಗಳನ್ನು ನೀಡುವ ಅಂಶ ಕಂಡುಬಂದರೆ ಸಿ-ವಿಜಿಲ್ ಅಥವಾ ಸಹಾಯವಾಣಿ ಸಂಖ್ಯೆ 1950 ಮೂಲಕ ದೂರು ನೀಡಬಹುದು ಎಂದು ಹೇಳಿದರು.

ಚುನಾನಣಾ ವೇಳಾ ಪಟ್ಟಿಯಂತೆ ಮಾಚ್ 28 ರಂದು ಅಧಿಸೂಚನೆ ಹೊರಡಿಸಲಾಗುವುದು. ಏಪ್ರಿಲ್ 4 ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳ ಸಹಾಯಕ್ಕಾಗಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ತಂಡವನ್ನು ನೇಮಿಸಲಾಗುವುದು. ಏಪ್ರಿಲ್ 5 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏಪ್ರಿಲ್ 8 ರಂದು ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ.  ನಂತರ ನಮೂನೆ 7ಎ ಅಡಿಯಲ್ಲಿ ಕಣದಲ್ಲಿ ಇರುವ ಅಂತಿಮ ಅಭ್ಯರ್ಥಿಗಳ ಪಟ್ಟಿ ಘೋಷಿಸಲಾಗುವುದು. ನಾಮಪತ್ರ ಸಲ್ಲಿಸುವ ಮುಂಚೆ ನಡೆಸುವ ಪ್ರಚಾರದ ವೆಚ್ಚಗಳು ರಾಜಕೀಯ ಪಕ್ಷಗಳಿಗೆ ಹೊಂದಿಸಿದರೆ, ನಾಮಪತ್ರ ಸಲ್ಲಿಸಿದ ನಂತರ ಚುನಾವಣೆ ವೆಚ್ಚಗಳನ್ನು ಅಭ್ಯರ್ಥಿಗಳೊಂದಿಗೆ ಹೊಂದಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಸ್ಪಷ್ಟ ಪಡಿಸಿದರು.

ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಹೊಸದಾಗಿ ಕಚೇರಿ ತೆರೆಯಲು ಅನುಮತಿ ಪಡೆದುಕೊಳ್ಳಬೇಕು. ಮತಗಟ್ಟೆಗಳಿಗೆ ಪಕ್ಷದ ಏಜೆಂಟ್‍ರನ್ನು ನೇಮಕದಲ್ಲಿ ಯಾವುದೇ ಗೊಂದಲಕ್ಕೀಡು ಮಾಡದಂತೆ ಸಹಾಯಕ ಚುನಾವಣೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಅವರು ತಿಳಿಸಿದರು.

ಸಭೆಯಲ್ಲಿ ಜಿ.ಪಂ. ಸಿಇಓ ಹಾಗೂ ಎಂ.ಸಿ.ಸಿ ನೋಡಲ್ ಅಧಿಕಾರಿಗಳಾದ ಎಸ್.ಜೆ. ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಧಿಕಾರಿ ಎಂ.ಕಾರ್ತಿಕ್ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು, ಚುನಾವಣಾ ತಹಶೀಲ್ದಾರ್ ಎಲ್.ಜಯಣ್ಣ, ಜಿಲ್ಲಾ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಮಿತಿ ಸದಸ್ಯ ಯಶವಂತ್ ಕುಮಾರ್, ನರೇಂದ್ರ ಹೆಚ್., ಸಿಪಿಐ (ಎಂ) ಪಕ್ಷದ ಡಿಇಒ ಗೌಸ್‍ಪೀರ್, ಸಿಪಿಐ ಪಕ್ಷದ ಕೆ.ಇ. ಸತ್ಯಕೀರ್ತಿ, ಬಿಎಸ್‍ಪಿ ಜಿಲ್ಲಾ ಅಧ್ಯಕ್ಷ ಎನ್.ಪ್ರಕಾಶ್ ಸೇರಿದಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Advertisement
Tags :
bengalurucan't campaignCan't use childrenchitradurgaelection campaignHere is the informationpolitical partiessuddionesuddione newsಇಲ್ಲಿದೆ ಮಾಹಿತಿಚಿತ್ರದುರ್ಗಚುನಾವಣಾ ಪ್ರಚಾರಜಿಲ್ಲಾಧಿಕಾರಿ ಸೂಚನೆಪ್ರಚಾರ ಮಾಡುವಂತಿಲ್ಲಬೆಂಗಳೂರುಮಕ್ಕಳನ್ನು ಬಳಸಿಕೊಳ್ಳುವಂತಿಲ್ಲಮದುವೆ ಮುಂತಾದ ಸಭೆರಾಜಕೀಯ ಪಕ್ಷಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article