ಚಿತ್ರದುರ್ಗ ಎಸ್ಪಿಯಾಗಿದ್ದ ಸಿ.ಚಂದ್ರಶೇಖರ್ ಅವರಿಗೆ ಪೊಲೀಸರಿಂದ ಕೃತಜ್ಞತೆ ಸಮರ್ಪಣೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 23 : ಪೊಲೀಸ್ ಪೇದೆಗಳನ್ನು ನೇಮಕ ಮಾಡಿಕೊಳ್ಳುವ ಪವಿತ್ರವಾದ ಜವಾಬ್ದಾರಿಯನ್ನು ಸರ್ಕಾರ ನೀಡಿದ್ದರಿಂದ ಯಾರಿಗೂ ವಂಚನೆ ಮೋಸವಾಗಬಾರದೆಂದು ಪಾರದರ್ಶಕವಾಗಿ ಆಯ್ಕೆ ಮಾಡಿದರೂ ಸಾಕಷ್ಟು ದುಃಖ ನೋವು ಅನುಭವಿಸಿದ್ದೇನೆಂದು ಸಿ.ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.
1993 ರಲ್ಲಿ ಚಿತ್ರದುರ್ಗ ರಕ್ಷಣಾಧಿಕಾರಿಯಾಗಿದ್ದ ಸಂದರ್ಭದಲ್ಲಿ ನೇಮಕಗೊಳಿಸಿದ 96 ಪೊಲೀಸರಿಂದ ಜೋಗಿಮಟ್ಟಿ ಗಿರಿಧಾಮದಲ್ಲಿ ಶುಕ್ರವಾರ ಕೃತಜ್ಞತೆ ಸ್ವೀಕರಿಸಿ ಮಾತನಾಡಿದರು.
ಮೊದಲು ಎಸ್ಪಿ.ಯಾಗಿ ಚಿತ್ರದುರ್ಗದಲ್ಲಿ ಕೆಲಸ ಮಾಡಿದೆ. ಆದರೆ ಇಲ್ಲಿಗೆ ನಾನು ಖುಷಿಯಿಂದ ಬರಲಿಲ್ಲ. ಕಲ್ಲು ಬಂಡೆಗಳ ಊರು ಎಂದು ಬೇಸರಪಟ್ಟುಕೊಂಡಿದ್ದೆ. ಎಲ್ಲಾದರೂ ಹಚ್ಚ ಹಸಿರಿರುವ ಜಿಲ್ಲೆಗೆ ಹೋಗಿದ್ದರೆ ಚೆನ್ನಾಗಿತ್ತು ಎಂದುಕೊಂಡೆ. ಆಗ ಸರ್ಕಾರ ಪೊಲೀಸ್ ಪೇದೆಗಳನ್ನು ನೇಮಕ ಮಾಡುವ ಜವಾಬ್ದಾರಿಯನ್ನು ಎಸ್ಪಿ.ಗಳಿಗೆ ನೀಡಿತ್ತು. ಬೇರೆ ಬೇರೆ ಜಿಲ್ಲೆಗಳಲ್ಲಿ ನೇಮಕದಲ್ಲಿ ಸಾಕಷ್ಟು ಅನಾಚಾರಗಳು ನಡೆದಿದ್ದನ್ನು ಕೇಳಿದ್ದೆ. ಸಾರ್ವಜನಿಕರಿಗೆ ನೇರವಾಗಿ ಸಂಬಂಧಪಡುವ ಇಲಾಖೆ ಯಾವುದಾದರೂ ಇದ್ದರೆ ಅದು ಪೊಲೀಸ್ ಇಲಾಖೆ ಎನ್ನುವುದು ಮನಸ್ಸಿಗೆ ಬಂದಿದ್ದರಿಂದ ನಿಸ್ಪಕ್ಷಪಾತ, ಪ್ರಾಮಾಣಿಕವಾಗಿ ಪೊಲೀಸರನ್ನು ನೇಮಕ ಮಾಡಿದ ತೃಪ್ತಿಯಿದೆ. ಆದರೂ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ದೊಡ್ಡ ಮಟ್ಟದಲ್ಲಿ ವಿಚಾರಣೆ ನಡೆಸಿದಾಗ ನೇಮಕಾತಿಯಲ್ಲಿ ಯಾವುದೇ ಅಕ್ರಮವಾಗಿಲ್ಲ ಎನ್ನುವುದು ಸಾಬೀತಾಯಿತು ಎಂದು ಹೇಳಿದರು.
ಪೊಲೀಸ್ ನೇಮಕಾತಿಯಲ್ಲಿ ಎರಡು ಸಂಘರ್ಷಗಳನ್ನು ಎದುರಿಸಿದೆ. ಒಂದು ಕಾನೂನು ಮತ್ತೊಂದು ವ್ಯಕ್ತಿಗತ. ನೇಮಕಾತಿ ವಿರುದ್ದ 41 ರಿಟ್ ಪಿಟಿಷನ್‍ಗಳಾಯಿತು. ಯಾರ ಫೋನ್‍ಗೂ ಸಿಗದೆ ಗೆಸ್ಟ್‍ಹೌಸ್‍ನಲ್ಲಿ ಕುಳಿತು ಪಟ್ಟಿ ಸಿದ್ದಪಡಿಸಿದೆ. ಸರ್ಕಾರ ಆದೇಶ ಕಾನೂನು ಮೀರಿ ನೇಮಕ ಮಾಡಿಕೊಳ್ಳಲಿಲ್ಲ. ಯಾರಿಗೂ ಅನ್ಯಾಯ ಮಾಡಿಲ್ಲ ಎನ್ನುವ ಆತ್ಮತೃಪ್ತಿಯಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.
ನಿವೃತ್ತ ಡಿ.ವೈ.ಎಸ್ಪಿ. ಭೀಮರೆಡ್ಡಿ ಮಾತನಾಡಿ ಸಿ.ಚಂದ್ರಶೇಖರ್‍ರವರು ಚಿತ್ರದುರ್ಗ ಎಸ್ಪಿ.ಯಾಗಿದ್ದಾಗ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಪ್ರಾಮಾಣಿಕತೆಯಿಂದ ಪೊಲೀಸ್ ಪೇದೆಗಳನ್ನು ನೇಮಕ ಮಾಡಿಕೊಂಡು 96 ಮಂದಿಗೆ ಅನ್ನದಾತರಾದರು. ಆಗ ನೇಮಕಗೊಂಡವರೆಲ್ಲಾ ಈಗ ಕುಟುಂಬದೊಂದಿಗೆ ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾರೆಂದು ಸಿ.ಚಂದ್ರಶೇಖರ್‍ರವರ ಪ್ರಾಮಾಣಿಕತೆಯನ್ನು ಗುಣಗಾನ ಮಾಡಿದರು.
ನಿವೃತ್ತ ಡಿ.ವೈ.ಎಸ್ಪಿ. ಬಸವರಾಜ್ ಮಾತನಾಡುತ್ತ ಆಸೆ ಆಮಿಷಗಳಿಗೆ ಬಲಿಯಾಗದೆ ನಿಸ್ಪಕ್ಷಪಾತವಾಗಿ ಸಿ.ಚಂದ್ರಶೇಖರ್‍ರವರು 96 ಪೊಲೀಸರನ್ನು ನೇಮಕ ಮಾಡಿಕೊಂಡರು. ಆತ್ಮ ಮನಸ್ಸಿಗೆ ಮೋಸ ಮಾಡಿಕೊಂಡರೆ ಅದಕ್ಕಿಂತಲೂ ನೀಚ ಕೆಲಸ ಮತ್ತೊಂದಿಲ್ಲ. ಅವರ ಕೈಕೆಳಗೆ ಕೆಲಸ ಮಾಡಿ ಶಹಬ್ಬಾಸ್‍ಗಿರಿ ಪಡೆದುಕೊಂಡಿರುವುದು ನನ್ನ ಪುಣ್ಯ ಎಂದು ಹರ್ಷ ವ್ಯಕ್ತಪಡಿಸಿದರು.
ಮತ್ತೊಬ್ಬ ನಿವೃತ್ತ ಡಿ.ವೈ.ಎಸ್ಪಿ. ಟಿ.ಹೆಚ್.ರಾಜಪ್ಪ ಮಾತನಾಡಿ 96 ಪೊಲೀಸ್ ಪೇದೆಗಳನ್ನು ನೇಮಕ ಮಾಡಿಕೊಂಡು ಜೀವನಕ್ಕೆ ದಾರಿ ಮಾಡಿಕೊಟ್ಟಂತ ಸಿ.ಚಂದ್ರಶೇಖರ್‍ರವರ ಪ್ರಾಮಾಣಿಕತೆಯನ್ನು ಗುರುತಿಸಿ ಸನ್ಮಾನಿಸುತ್ತಿರುವುದು ನಿಜಕ್ಕೂ ಅಪರೂಪವಾದುದು. ಇಂತಹ ಕಾರ್ಯಕ್ರಮವನ್ನು ನನ್ನ ಸೇವಾವಧಿಯಲ್ಲಿ ನೋಡಿಲ್ಲ. ಜಿಲ್ಲಾ ರಕ್ಷಣಾಧಿಕಾರಿಗಳಾಗಿದ್ದ ಸಿ.ಚಂದ್ರಶೇಖರ್ ಚಿತ್ರದುರ್ಗದಿಂದ ಬೆಂಗಳೂರಿಗೆ ಸರ್ಕಾರಿ ಬಸ್‍ನಲ್ಲಿ ಹೋಗುತ್ತಿದ್ದರೆಂದರೆ ಅವರಲ್ಲಿ ಎಂತಹ ಸರಳತೆ ಇತ್ತು ಎನ್ನುವುದನ್ನು ಊಹಿಸಿಕೊಳ್ಳಬಹುದು ಎಂದು ಹೇಳಿದರು.
ಶ್ರೀಮತಿ ರೂಪ ಚಂದ್ರಶೇಖರ್ ವೇದಿಕೆಯಲ್ಲಿದ್ದರು.
ಪೊಲೀಸ್ ಪೇದೆಗಳಾಗಿ ನೇಮಕಗೊಂಡು ಸಬ್ ಇನ್ಸ್‌ಪೆಕ್ಟರ್ ಹಾಗೂ ಇನ್ಸ್ಪೆಕ್ಟರ್ ಗಳಾಗಿರುವ ಅನೇಕರು ಸಿ.ಚಂದ್ರಶೇಖರ್‍ರವರ ದಕ್ಷತೆ ಪ್ರಾಮಾಣಿಕತೆ ಕುರಿತು ಅನಿಸಿಕೆಗಳನ್ನು ತಿಳಿಸಿದರು.