ಬಿ.ಎನ್.ಚಂದ್ರಪ್ಪ ಗೆಲುವು ಚಿತ್ರದುರ್ಗದ ಸಮಗ್ರ ಅಭಿವೃದ್ಧಿಗೆ ಸಹಕಾರಿ : ಸತೀಶ್ ಜಾರಕಿಹೊಳಿ
ಚಿತ್ರದುರ್ಗ, ಏ. 24 : ವೀರ ಮದಕರಿ ನಾಯಕ ನಾಡಿನ ಎಲ್ಲ ಜಾತಿ ಜನರ ಪ್ರೀತಿ ಗಳಿಸಿರುವ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಗೆಲುವು ಚಿತ್ರದುರ್ಗದ ಸಮಗ್ರ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ವಾಲ್ಮಿಕಿ ನಾಯಕ, ಪರಿಶಿಷ್ಟ ಜಾತಿ, ಯಾದವರು, ಕುರುಬರು, ಲಿಂಗಾಯತರು, ಒಕ್ಕಲಿಗರು ಸೇರಿ ಅನೇಕ ಜಾತಿ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಎಲ್ಲ ವರ್ಗದ ಜನರು ಚಂದ್ರಪ್ಪ ಕುರಿತು ಅಭಿಮಾನ ಹೊಂದಿರುವುದನ್ನು ಕಣ್ಣಾರೆ ಕಂಡಿದ್ದೇನೆ. ನನ್ನ ರಾಜಕೀಯ ಅನುಭವದ ಮೇಲೆ ಹೇಳುವುದಾದರೆ ಚಂದ್ರಪ್ಪ ಕನಿಷ್ಠ ಎರಡೂವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಖಚಿತ ಎಂದಿದ್ದಾರೆ.
ಮದಕರಿ, ಒನಕೆ ಓಬವ್ವ ನಾಡಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚು ಇದೆ. ಇವರೆಲ್ಲರೂ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಆಗಿದ್ದು, ಪಕ್ಷದ ಕುರಿತು ಹೆಚ್ಚು ಒಲವು ಹೊಂದಿದ್ದಾರೆ. ಪ್ರಿಯಾಂಕಾ ಗಾಧಿ, ಸಿದ್ದರಾಮಯ್ಯ ಏ.23ರಂದು ದುರ್ಗದಲ್ಲಿ ಪ್ರಚಾರ ನಡೆಸಿದಾಗ ಅಲ್ಲಿ ಸೇರಿದ್ದ ಜನರೇ ಚಂದ್ರಪ್ಪ ಅವರ ಗೆಲುವನ್ನು ಸಾಬೀತುಪಡಿಸಿದೆ.
ಈಚೆಗೆ ಚಂದ್ರಪ್ಪ ಪರವಾಗಿ ನಾಯಕನಹಟ್ಟಿ, ಚಳ್ಳಕೆರೆಯಲ್ಲಿ ಬಹಿರಂಗ ಪ್ರಚಾರ ಹಾಗೂ ಕೆಲ ಹಳ್ಳಿಗಳಿಗೆ ನಾನು ಮತ್ತಿತರ ನಾಯಕರು ಭೇಟಿ ನೀಡಿದಾಗ ಚಂದ್ರಪ್ಪ ನಮ್ಮ ನಿರೀಕ್ಷೆಗೂ ಮೀರಿ ದಾಖಲೆ ಮಟ್ಟದಲ್ಲಿ ಮತ ಪಡೆಯಲಿದ್ದಾರೆ ಎಂಬುದು ಅರಿವಿಗೆ ಬಂದಿದೆ. ಎಲ್ಲ ಜಾತಿಯ ಜನರ ಪ್ರೀತಿ ಅಷ್ಟೋಂದು ಗಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸಂಸದರಾಗಿದ್ದ ಸಂದರ್ಭ ಬಿ.ಎನ್.ಚಂದ್ರಪ್ಪ, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತಕ್ಕೆ ಶ್ರಮಿಸಿದ ರೀತಿ ಜನರು ನೆನಪು ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಸೋಲು ಕಂಡರೂ ಕ್ಷೇತ್ರದ ಜನರೊಂದಿಗೆ ಒಡನಾಟ ಹೊಂದಿದ್ದು ಅವರು ಗೆಲ್ಲಲು ಬಹುದೊಡ್ಡ ಸಹಕಾರಿ ಆಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸರಳ, ಸಜ್ಜನಿಕೆಯ ರಾಜಕಾರಣಿ ಚಂದ್ರಪ್ಪ, ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಬಹಳ ಕಠಿಣ ವ್ಯಕ್ತಿ. ನಾನು ಸೇರಿದಂತೆ ಅನೇಕ ಸಚಿವರು, ಮುಖ್ಯಮಂತ್ರಿಗಳ ಬಳಿ ತೆರಳಿ ಚಿತ್ರದುರ್ಗ ಜಿಲ್ಲೆಗೆ ಇಂತಹ ಕೆಲಸ ಆಗಲೇಬೇಕು ಎಂದು ಹಠಕ್ಕೆ ಬಿದ್ದು ಮಂಜೂರು ಮಾಡಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೋಟ್ಯಂತರ ಹಣ, ಚಿತ್ರದುರ್ಗಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜ್ ಘೋಷಣೆ, ಕೇಂದ್ರೀಯ ವಿದ್ಯಾಲಯ ಹೀಗೆ ಅನೇಕ ಕಾರ್ಯಕ್ರಮಗಳು ಘೋಷಣೆಯಾಗಲು ಜಿಲ್ಲೆಯ ಕಾಂಗ್ರೆಸ್ ಶಾಸಕರ ಜೊತೆ ಚಂದ್ರಪ್ಪ ಅವರ ಶ್ರಮ ಅಧಿಕವಾಗಿದೆ ಎಂದಿದ್ದಾರೆ.
ಮದಕರಿ ನಾಡನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕೆಂಬ ದೂರದೃಷ್ಟಿ ಹೊಂದಿರುವ ಚಂದ್ರಪ್ಪ ಗೆಲುವು ಚಿತ್ರದುರ್ಗಕ್ಕೆ ಹೆಮ್ಮೆ ತಂದುಕೊಡಲಿದೆ. ಈಗಾಗಲೇ ಒಮ್ಮೆ ನಾನು ಕ್ಷೇತ್ರದಲ್ಲಿ ಚಂದ್ರಪ್ಪ ಪರ ಪ್ರಚಾರ ನಡೆಸಿದಾಗ ಅವರು ಕ್ಷೇತ್ರದ ಜನರ ಪ್ರೀತಿ ಗಳಿಸಿರುವುದು ಗೆಲವು ಖಚಿತ ಎಂಬುದು ಸ್ಪಷ್ಟಪಡಿಸಿದೆ.
ಚಂದ್ರಪ್ಪ ಗೆದ್ದು, ರಾಜ್ಯದ ಪರ ಧ್ವನಿಯಾಗಿ ದೆಹಲಿಯಲ್ಲಿ ಕೆಲಸ ಮಾಡಲಿದ್ದಾರೆ. ಆದ್ದರಿಂದ ಅವರ ಗೆಲುವು ಚಿತ್ರದುರ್ಗ ಜಿಲ್ಲೆಗಷ್ಟೇ ಅಲ್ಲದೆ ರಾಜ್ಯದ ಹಿತಕ್ಕೂ ಅಗತ್ಯವಿದೆ ಎಂದು ತಿಳಿಸಿದ್ದಾರೆ.