ರಕ್ತದಾನದಿಂದ ಹೃದಯಾಘಾತದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ : ಡಾ.ಬಸಪ್ಪರೆಡ್ಡಿ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂ.14 : ಎಲ್ಲಾ ದಾನಕ್ಕಿಂತಲೂ ರಕ್ತದಾನ ಶ್ರೇಷ್ಠದಾನ. ಒಬ್ಬರ ರಕ್ತದಿಂದ ನಾಲ್ವರ ಪ್ರಾಣ ಉಳಿಸಬಹುದು ಎಂದು ಬಸಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಬಸಪ್ಪರೆಡ್ಡಿ ಹೇಳಿದರು.
ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಚಿತ್ರದುರ್ಗ, ಬಸಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ರೋಟರಿ ಕ್ಲಬ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ತುರುವನೂರು ರಸ್ತೆಯಲ್ಲಿರುವ ಬಸಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಶುಕ್ರವಾರ ಏರ್ಪಡಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಗಾಟಿಸಿ ಮಾತನಾಡಿದರು.
ಇಪ್ಪತ್ತರಿಂದ ಅರವತ್ತು ವರ್ಷದ ಆರೋಗ್ಯವಂತರೆಲ್ಲರೂ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ನಿಶ್ಯಕ್ತಿಯಾಗುವುದಿಲ್ಲ. ಹೃದಯಾಘಾತದಂತ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ರಮೇಶ್ ಮಾತನಾಡಿ ರಕ್ತದ ಅವಶ್ಯಕತೆ ತುಂಬಾ ಇದೆ. ರಕ್ತದಾನ ಶ್ರೇಷ್ಟದಾನ. ಆದುದರಿಂದ ನಮ್ಮ ಕಾರ್ಯಕರ್ತರು ಪ್ರತಿ ವರ್ಷವೂ ರಕ್ತದಾನ ಮಾಡುತ್ತಿರುತ್ತಾರೆ. ಅಪಘಾತ, ಆಪರೇಷನ್, ಹೆರಿಗೆ ಸಮಯದಲ್ಲಿ ರಕ್ತ ಬೇಕಾಗುತ್ತದೆ. ಎಲ್ಲರೂ ರಕ್ತದಾನ ಮಾಡುವಲ್ಲಿ ಮುಂದಾಗಿ ಎಂದು ಮನವಿ ಮಾಡಿದರು.
ರೆಡ್‍ಕ್ರಾಸ್ ಸಂಸ್ಥೆ ಸಭಾಪತಿ ಗಾಯತ್ರಿ ಶಿವರಾಂ ಮಾತನಾಡುತ್ತ ಶೇ.75 ರಷ್ಟು ಕೂಡ ರಕ್ತ ನಮಗೆ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಎರಡು ಹೈವೇಗಳು ಹಾದು ಹೋಗಿರುವುದರಿಂದ ಅಪಘಾತಗಳು ಸಂಭವಿಸುತ್ತಲೆ ಇರುತ್ತವೆ. ಅಂತಹ ಸಮಯದಲ್ಲಿ ರಕ್ತದ ಅವಶ್ಯತೆ ಇರುತ್ತದೆ. ಪ್ರತಿಯೊಬ್ಬ ಆರೋಗ್ಯವಂತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಸಾವು-ಬದುಕಿನ ನಡುವೆ ಹೋರಾಡುತ್ತಿರುವವರ ಪ್ರಾಣ ಉಳಿಸಿ ಎಂದು ವಿನಂತಿಸಿದರು.
ರೋಟರಿ ಕ್ಲಬ್ ಚಿತ್ರದುರ್ಗ ಅಧ್ಯಕ್ಷ ಕನಕರಾಜ್ ಮಾತನಾಡಿ ರಕ್ತಕ್ಕೆ ಬೇರೆ ಯಾವುದು ಪರ್ಯಾಯವಿಲ್ಲ. ಅತ್ಯವಶ್ಯಕವಾಗಿರುವ ರಕ್ತ ಬೇಕೆಂದಾಗ ಸಿಗಲ್ಲ. ಹಾಗಾಗಿ ಎಲ್ಲರೂ ತಮ್ಮ ತಮ್ಮ ರಕ್ತದ ಗುಂಪುಗಳನ್ನು ತಿಳಿದುಕೊಂಡಿರಬೇಕು. ತುರ್ತು ಸಂದರ್ಭಗಳಲ್ಲಿ ರಕ್ತ ನೀಡಿ ಅಮೂಲ್ಯವಾದ ಜೀವ ಉಳಿಸುವುದು ಮಾನವೀಯತೆ ಎಂದರು.
ಡಾ.ರವಿಕುಮಾರ್, ಡಾ.ಚೈತ್ರ, ಡಾ.ನವೀನ್ ವೇದಿಕೆಯಲ್ಲಿದ್ದರು.
ರೆಡ್‍ಕ್ರಾಸ್ ಸಂಸ್ಥೆಯ ಉಪ ಸಭಾಪತಿ ನಲವತ್ತು ಬಾರಿ ರಕ್ತದಾನ ಮಾಡಿರುವ ಈ.ಅರುಣ್‍ಕುಮಾರ್, ಕಾರ್ಯದರ್ಶಿ ಮಜಹರ್‍ವುಲ್ಲಾ, ರೊ.ಮಧುಪ್ರಸಾದ್, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಜಿ.ಎನ್.ವೀರಣ್ಣ, ಕಾರ್ಯದರ್ಶಿ ಕುರುಬರಹಳ್ಳಿ ಶಿವಣ್ಣ, ಶಾರದ ಬ್ರಾಸ್ ಬ್ಯಾಂಡ್‍ನ ಗುರುಮೂರ್ತಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿದ್ದರು.