ಬಜೆಟ್ ಕೇಳದೆ, ನೋಡದೆ ಬಿಜೆಪಿ ಪ್ರತಿಭಟನೆ ನಡೆಸಿದೆ : ಎಂಎಲ್ಸಿ ಸಲೀಂ ಅಹ್ಮದ್
ಸುದ್ದಿಒನ್, ಹಿರಿಯೂರು, ಫೆಬ್ರವರಿ. 18 : ಸಿಎಂ ಸಿದ್ದರಾಮಯ್ಯ ಅವರು ಇತ್ತಿಚೆಗಷ್ಟೇ ಬಜೆಟ್ ಮಂಡನೆ ಮಾಡಿದ್ದಾರೆ. ಗ್ಯಾರಂಟಿಗಳ ನಡುವೆಯೂ ಬಜೆಟ್ ಮಂಡನೆ ಮಾಡಲಾಗಿದೆ. ಈ ಸಂಬಂಧ ಬಿಜೆಪಿ ನಾಯಕರು ಬಜೆಟ್ ವಿರೋಧಿಸಿದ್ದಾರೆ. ಬಿಜೆಪಿಯವರ ನಡವಳಿಕೆಗೆ ಕಾಂಗ್ರೆಸ್ ಎಂಎಲ್ಸಿ ಸಲೀಂ ಅಹ್ಮದ್ ಕಿಡಿಕಾರಿದ್ದಾರೆ.
ತಾಲೂಕಿನ ಗುಯಿಲಾಳ್ ಟೋಲ್ ಬಳಿ ಸುದ್ದಿಗಾರರಿಗೆ ಮಾತನಾಡಿದ ಅವರು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ಬಜೆಟ್ ಮಂಡನೆ ಮಾಡಿದ್ದಾರೆ. ಆದರೆ ಬಜೆಟ್ ಮಂಡನೆಗೂ ಮೊದಲೇ ಬಿಜೆಪಿ ಬಜೆಟ್ ಕೇಳಿಲ್ಲ, ನೋಡಿಲ್ಲದೆ ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಸಿದೆ. ಲೋಕಸಭಾ ಚುನಾವಣೆಯ ಸೋಲಿನ ಭಯದಿಂದ ಕಾಂಗ್ರೆಸ್ ಪಕ್ಷದ ಖಾತೆಗಳನ್ನು ಸೀಜ್ ಮಾಡುವ ಮೂಲಕ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ, ಇದನ್ನು ದೇಶದ ಜನತೆ ಗಮನಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
ಈ ಹಿಂದೆ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಸರ್ಕಾರ ಜಾರಿಗೆ ಬಂದ ಕೂಡಲೇ ಎಂಟು ತಿಂಗಳಲ್ಲಿ ನುಡಿದಂತೆ ನಡೆಯುವ ಮೂಲಕ ಐದು ಐತಿಹಾಸಿಕ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನತೆಗೆ ತಲುಪಿಸುವಲ್ಲಿ ನಮ್ಮ ಸರ್ಕಾರ ಐತಿಹಾಸಿಕ ಸಾಧನೆ ಮಾಡಲಾಗಿದೆ. ಸುಮಾರು 150ಕೋಟಿ ಮಹಿಳೆಯರು ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಇಂತಹ ಕ್ರಾಂತಿಕಾರಿ ಯೋಜನೆಗಳಿಂದ ಜನತೆ ಸಂತೋಷವಾಗಿದ್ದಾರೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.