ಬಿಜೆಪಿ ಅಭಿವೃದ್ಧಿ ಮಾಡದೇ ಅಪಪ್ರಚಾರ ಮಾಡುವ ಪಕ್ಷ : ಸಚಿವ ಡಿ ಸುಧಾಕರ್
ಸುದ್ದಿಒನ್, ಹಿರಿಯೂರು, ಮಾರ್ಚ್.02 : ಮನುಷ್ಯನಿಗೆ ಮುಖ್ಯವಾಗಿ ನೀರು, ವಸತಿ, ಶಿಕ್ಷಣ ಕಲ್ಪಿಸುವುದು ಪ್ರತಿಯೊಂದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ತಿಳಿಸಿದರು.
ತಾಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಏರ್ಪಡಿಸಿದ್ದ ಹರ್ತಿಕೋಟೆ ಮತ್ತು 37 ಹಳ್ಳಿಗಳ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಅತಿ ಹೆಚ್ಚು ಫ್ಲೋರೈಡ್ ಕುಡಿಯುವ ನೀರು ಇರುವುದು ಐಮಂಗಲ ಹೋಬಳಿಯಲ್ಲಿ, 2008ರ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರು ಕಲ್ಪಿಸಿ ಕೊಡಿ ಎಂದು ಈ ಭಾಗದ ಮಹಿಳೆಯರು ಕೇಳಿಕೊಂಡಿದ್ದರು. ನಾನು ಅಂದೇ ತಿರ್ಮಾನ ಮಾಡಿದ್ದೆ ವಾಣಿ ವಿಲಾಸ ಸಾಗರದಿಂದ ಐಮಂಗಳ ಹೋಬಳಿಗೆ ನೀರು ಕೊಡಬೇಕು ಎಂದು ಚಿಂತನೆ ಮಾಡಿ, ಅಂದೇ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಯೋಜನೆಯನ್ನು ಜಾರಿಗೆ ತರಲಾಯಿತು. ವಿವಿಧ ಕಾರಣಗಳಿಂದ ಹತ್ತು ವರ್ಷಗಳಿಂದ ಕಾಮಗಾರಿ ಆರಂಭವಾಗಲಿಲ್ಲ. 2018ರ ಚುನಾವಣೆಯಲ್ಲಿ ಆಕಸ್ಮಿಕ ಸೋಲಾಯಿತು. ಕಾಮಗಾರಿಯೂ ಸ್ಥಗಿತಗೊಂಡಿತು. ಇದೀಗ ನಾನು ಮಂತ್ರಿಯಾಗಿದ್ದೇನೆ. ಕಳೆದ 15 ದಿನಗಳಿಂದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ತಾಲೂಕಿನ ಪ್ರತಿಯೊಂದು ಹಳ್ಳಿಗೂ ವಿವಿ ಸಾಗರದ ನೀರನ್ನು ಕೊಡಲು ತೀರ್ಮಾನ ಮಾಡಿದ್ದೇನೆ. ಎಲ್ಲಾ ರೀತಿಯಲ್ಲಿ ಕಾಮಗಾರಿ ನಡಿಯುತ್ತಿದೆ ಕೇವಲ ಏಳೆಂಟು ತಿಂಗಳ ಒಳಗೆ ಎಲ್ಲೆಲ್ಲಿ ವಿವಿ ಸಾಗರ ಡ್ಯಾಂ ನೀರು ನೀರು ಬರುತ್ತಿಲ್ಲ, ಅಲ್ಲೆಲ್ಲ ಪರಿಶುದ್ಧವಾದ ಕುಡಿಯುವ ನೀರು ಬರುವಂತೆ ಮಾಡಲಾಗುತ್ತದೆ. ಐಮಂಗಲ ಭಾಗದಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ, ಇಲ್ಲಿಂದಲೇ ಹಳ್ಳಿಗಳಿಗೂ ನೀರು ಕೊಡಲಾಗುವುದು ಎಂದು ತಿಳಿಸಿದರು.
ಬಿಜೆಪಿ ಅಪಪ್ರಚಾರದ ಪಕ್ಷ : ವಾಣಿ ವಿಲಾಸ ಜಲಾಶಯದಿಂದ ಡಿ ಸುಧಾಕರ್ ಚಳ್ಳಕೆರೆಗೆ ನೀರು ಕೊಂಡೊಯ್ದರು ಎಂದು ನನ್ನ ಮೇಲೆ ಅಪಪ್ರಚಾರ ಮಾಡಿದರು.ಆದರೆ ನೀರು ಸರಬರಾಜು ಆಗಿದ್ದು, ನಾಯಕನಹಟ್ಟಿ ಬಳಿ ಇರುವ ಡಿಆರ್ಡಿಓಗೆ. ಸುಧಾಕರ್ ಕೆರೆ ನೀರು ತಗೊಂಡು ಹೋದ್ರು ಎಂದು ಬಿಜೆಪಿ ಪಕ್ಷದವರು ನನ್ನ ಮೇಲೆ ಅಪಪ್ರಚಾರ ಮಾಡಿದರು. ಪ್ರಚಾರ ಮಾಡುವುದರಲ್ಲಿ, ಸುಳ್ಳು ಹೇಳುವುದರಲ್ಲಿ ಬಿಜೆಪಿ ನಂಬರ್ ಒನ್ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಸುಳ್ಳು ಯಾವುದು, ಸತ್ಯ ಯಾವುದು ಎಂದು ತೀರ್ಮಾನ ಮಾಡುವ ಶಕ್ತಿ ನಿಮ್ಮಲ್ಲಿದೆ. ನೀವುಗಳು ಹುಷಾರಾಗಿ ಇರಬೇಕು. ಬೆಂಗಳೂರು ಸೇರಿದಂತೆ ಕೆಲ ಭಾಗಗಳಲ್ಲಿ ಬಿಜೆಪಿ ಎಂದರೆ ಸುಳ್ಳಿನ ಪಕ್ಷ ಎಂದು ಮಾತನಾಡಿ ಕೊಳ್ಳುತ್ತಿದ್ದಾರೆ. ಬಿಜೆಪಿಯವರು ಹಿಂದೂ ಮುಸ್ಲಿಂ ಹಾಗೂ ಜನಾಂಗದ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡಿ, ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರು ಅಭಿವೃದ್ಧಿ ಪರವಾಗಿ ಇಲ್ಲ, ಬಡವರ ಪರವಾಗಿ ಒಂದು ರೂಪಾಯಿ ಕಾರ್ಯಕ್ರಮಗಳು ಜಾರಿಗೆ ಬರಲಿಲ್ಲ. ಅಭಿವೃದ್ಧಿ ಯೋಜನೆ ಬಗ್ಗೆ ಒಂದು ಉದಾಹರಣೆ ಕೊಡಲಿ, ನಾವು 100 ಉದಾರಣೆಗಳನ್ನ ಅಭಿವೃದ್ಧಿ ಕೆಲಸದ ಬಗ್ಗೆ ತೋರಿಸುತ್ತೇವೆ ಎಂದರು.
ಅನ್ನ ಭಾಗ್ಯ, ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹೀಗೆ ಅನೇಕ ಯೋಜನೆಗಳನ್ನು ನಾವು ಉಚಿತವಾಗಿ ಕೊಟ್ಟಿದ್ದೇವೆ. ಹಿಂದೆ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಅನೇಕ ಜನಪರ ಯೋಜನೆಗಳನ್ನ ನಾವು ಬಡವರಿಗೆ ತಲುಪಿಸಿದ್ದೇವೆ ಸಾಲ ಮನ್ನಾ ಮಾಡಿದ್ದೇವೆ. ಆದರೆ ಬಿಜೆಪಿ ಶ್ರೀಮಂತರ ಸಾಲ ಮನ್ನಾ ಮಾಡಿದೆ ಎಂದು ಲೇವಡಿ ಮಾಡಿದರು.
ಸರ್ಕಾರ ಜಾರಿಗೆ ಬಂದು 8 ತಿಂಗಳು ಕಳೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಭಿವೃದ್ಧಿಯ ದಾಪುಗಾಲು ಮುನ್ನುಗುತ್ತಿದೆ. ನಾವು ಸರ್ಕಾರ ಕೈಗೆ ತಗೊಂಡಾಗ ಬಿಜೆಪಿ ಐದು ಲಕ್ಷ ಕೋಟಿ ಸಾಲ ಮಾಡಿ ಹೋಗಿದ್ದಾರೆ. ಅವರು ಮಾಡಿದ ಸಾಲ ತೀರಿಸುವ ಜೊತೆಗೆ ಸುಮಾರು 60 ಸಾವಿರ ಕೋಟಿ ನಾವು ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನತೆಗೆ ಕೊಡುವ ಮೂಲಕ ಮಾತಿನಂತೆ ನಡೆದುಕೊಂಡಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷ ಬಡವರ ಪರವಾಗಿ ಚಿಂತನೆ ಮಾಡುವ ಪಕ್ಷವಾಗಿದೆ. ಬಿಜೆಪಿಯ ಸುಳ್ಳಿಗೆ ಮರುಳಾಗಬೇಡಿ, ಅವರು ಒಂದು ರೂಪಾಯಿಯು ಎಸ್ಸಿ, ಎಸ್ಟಿ, ಪರವಾಗಿ, ಹಿಂದುಳಿದ ಪರವಾಗಿ, ದಲಿತರಿಗೆ ಕೊಡುವುದಿಲ್ಲ, ಯಾರ ಪರವಾಗಿ ಕೆಲಸ ಮಾಡಿಲ್ಲ, ಮಾಡುವುದು ಇಲ್ಲ ಅದರಿಂದ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಗಟ್ಟಿಯಾಗಿ ನಿಲ್ಲಬೇಕು. ನಿಮ್ಮ ಆಶೀರ್ವಾದ ಕಾಂಗ್ರೆಸ್ ಪಕ್ಷಕ್ಕೆ ಸದಾ ಇರಲಿ. ಮೂರ್ನಾಲ್ಕು ವರ್ಷಗಳಲ್ಲಿ ಈ ತಾಲೂಕಿಗೆ ಏನೇನು ಅಭಿವೃದ್ಧಿ ಅವಶ್ಯಕತೆ ಇದೆ ಎಂಬುದನ್ನ ಪಟ್ಟಿ ಮಾಡಿ ಅಭಿವೃದ್ಧಿ ಕೆಲಸಗಳನ್ನು ಮುಗಿಸುವುದರ ಮೂಲಕ ನಾನು ಕಂಕಣ ಬದ್ದವಾಗಿದ್ದೇನೆ ಎಂದು ಭರವಸೆ ನೀಡಿದರು.
ಶಕ್ತಿ ಯೋಜನೆಯಿಂದ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಬಸ್ ಗಳಲ್ಲಿ ಜನ ಹೆಚ್ಚು ಇದ್ದರಿಂದ ಬಸ್ ನಿಲ್ಲಿಸಿದೆ ಹೋದಾಗ ಯರಬಳ್ಳಿ ಗ್ರಾಮದ ಮಹಿಳೆಯರು ಬಸ್ ನಿಲ್ಲಿಸುತ್ತಿಲ್ಲವೆಂದು ನನ್ ಮೇಲೆ ಸಿಟ್ಟಾಗಿದ್ದಾರೆಂದು ನಗೆ ಚಟಾಕಿ ಹಾರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಾಜೇಶ್ ಕುಮಾರ್, ತಾಲೂಕ್ ಪಂಚಾಯತಿ ಕಾರ್ಯನಿರ್ವಣಾಧಿಕಾರಿ ಸತೀಶ್ ಕುಮಾರ್, ಗ್ರಾಮೀಣ ಕುಡಿಯುವ ನೀರು ಸಹಾಯಕ ಇಂಜಿನಿಯರ್ ಹಸನ್ ಭಾಷ, ಮುಖಂಡರಾದ ಸೂರಗನಹಳ್ಳಿ ಕೃಷ್ಣಮೂರ್ತಿ, ಕಂದಿಕೆರೆ ಜಗದೀಶ್, ಜಿ ಎಲ್ ಮೂರ್ತಿ ದಯಾನಂದ, ಪ್ರತಾಪ್ ಸಿಂಹ, ಪರಮೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು