ಪಾಪ ವಿಮೋಚನೆ ಮಾಡಿಕೊಳ್ಳಲು ಬಿಜೆಪಿ ಮತ್ತು ಜೆಡಿಎಸ್ ಬೂಟಾಟಿಕೆ ಪಾದಯಾತ್ರೆ ನಡೆಸುತ್ತಿವೆ : ಗೀತಾನಂದಿನಿಗೌಡ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 08 : ಬಡವರ ಭಾಗ್ಯದಾತ, ಅಹಿಂದಾ ನಾಯಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ನೀಡಿರುವ ಐದು ಉಚಿತ ಗ್ಯಾರೆಂಟಿಗಳನ್ನು ಸಹಿಸಿಕೊಳ್ಳಲು ಆಗದೆ ಬಿಜೆಪಿ ಮತ್ತು ಜೆಡಿಎಸ್ ನವರು ಇಲ್ಲಸಲ್ಲದ ಆರೋಪ ಹೊರಿಸಿ ಬೆಂಗಳೂರಿನಿಂದ ಮೈಸೂರು ಚಲೋ ಪಾದಯಾತ್ರೆ ಹೊರಟಿರುವುದರಲ್ಲಿ ಹುರುಳಿಲ್ಲ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾನಂದಿನಿಗೌಡ ತಿರುಗೇಟು ನೀಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಗುರುವಾರ ಬಿಜೆಪಿ. ಮತ್ತು ಜೆಡಿಎಸ್. ಅಧಿಕಾರದಲ್ಲಿದ್ದಾಗ ನಡೆದಿರುವ ಹಗರಣಗಳ ಪೋಸ್ಟರ್‍ಗಳನ್ನು ಪ್ರದರ್ಶಿಸಿ ಮಾತನಾಡಿದರು.
ಮುಡಾ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರವಿಲ್ಲದಿದ್ದರೂ ರಾಜೀನಾಮೆ ನೀಡಬೇಕೆಂದು ಕೇಳುವ ನೈತಿಕತೆ ಬಿಜೆಪಿ ಜೆಡಿಎಸ್ ನವರಿಗಿಲ್ಲ. ಪಾಪ ವಿಮೋಚನೆ ಮಾಡಿಕೊಳ್ಳಲು ಬೂಟಾಟಿಕೆ ಪಾದಯಾತ್ರೆ ನಡೆಸುತ್ತಿದ್ದಾರೆ. ಶೋಷಿತ ಸಮುದಾಯ, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೆಂಬಲವಾಗಿದ್ದಾರೆಂದು ಹೇಳಿದರು.
ಸಂವಿಧಾನವನ್ನು ಬುಡಮೇಲುಗೊಳಿಸಲು ಹೊರಟಿರುವ ಬಿಜೆಪಿ. ಮತ್ತು ಜೆಡಿಎಸ್.ನವರು ಮೊದಲು ತಮ್ಮ ತಮ್ಮ ಅಧಿಕಾರವಧಿಯಲ್ಲಿ ನಡೆಸಿರುವ ಹಗರಣಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ಅದನ್ನು ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತಲೆದಂಡಕ್ಕೆ ಪಾದಯಾತ್ರೆ ನಡೆಸುತ್ತಿರುವುದು ಯಾವ ಪುರಷಾರ್ಥಕ್ಕೆ ಎಂದು ಖಾರವಾಗಿ ಪ್ರಶ್ನಿಸಿದರು.
ಬಿಜೆಪಿ ಅಧಿಕಾರವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ಮಕ್ಕಳ ಮೊಟ್ಟೆಯಲ್ಲಿ ಕಮೀಷನ್ ಹೊಡೆದಿದ್ದು, ಆರ್.ಅಶೋಕ್ ಬಗರ್‍ಹುಕುಂ, ಆಶ್ರಯ ಯೋಜನೆಗಳಡಿ ಅಧಿಕಾರಿಗಳಿಂದ ಲಂಚ ಪಡೆದಿದ್ದು, ಬಿ.ಸಿ.ಪಾಟೀಲ್ ಕೃಷಿ ಸಚಿವರಾಗಿದ್ದಾಗ ನಡೆದ ಹಗರಣಗಳ ತನಿಖೆಯಾಗಲಿ. ಅದನ್ನು ಬಿಟ್ಟು ಯಾವುದೇ ಕಪ್ಪುಚುಕ್ಕೆಯಿಲ್ಲದೆ ರಾಜ್ಯವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ವಿನಾ ಕಾರಣ ಗೂಬೆ ಕೂರಿಸುವ ಪಿತೂರಿ ನಡೆಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ನಾವುಗಳು ಜನಾಂದೋಲನ ಮೂಲಕ ಹಗರಣಗಳ ಸರಮಾಲೆಯನ್ನು ರಾಜ್ಯದ ಜನತೆ ಮುಂದಿಡುತ್ತೇವೆಂದು ವಿರೋಧಿಗಳಿಗೆ ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ನಜ್ಮತಾಜ್, ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಪಿ.ಕೆ.ಮೀನಾಕ್ಷಿ, ಆಶ್ರಯ ಕಮಿಟಿ ಸದಸ್ಯೆ ಮುನಿರಾ ಎ.ಮಕಾಂದಾರ್, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮೋಕ್ಷರುದ್ರಸ್ವಾಮಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ಭಾಗ್ಯಮ್ಮ, ಚಂದನ, ಶ್ವೇತ ಈ ಸಂದರ್ಭದಲ್ಲಿದ್ದರು.