For the best experience, open
https://m.suddione.com
on your mobile browser.
Advertisement

ಫೆ.26 ಹಾಗೂ ಫೆ.27ರಂದು ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ | 500ಕ್ಕೂ ಅಧಿಕ ಖಾಸಗಿ ಕಂಪನಿಗಳು ಭಾಗಿ : 1 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ

06:48 PM Feb 20, 2024 IST | suddionenews
ಫೆ 26 ಹಾಗೂ ಫೆ 27ರಂದು ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ   500ಕ್ಕೂ ಅಧಿಕ ಖಾಸಗಿ ಕಂಪನಿಗಳು ಭಾಗಿ   1 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ
Advertisement

ಚಿತ್ರದುರ್ಗ. ಫೆ.20: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಫೆ.26 ಹಾಗೂ ಫೆ.27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. 500ಕ್ಕೂ ಅಧಿಕ ಖಾಸಗಿ ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ. 1 ಲಕ್ಷಕ್ಕೂ ಅಧಿಕ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರಕಲಿದೆ.

Advertisement

ಜಿಲ್ಲೆಯ ಎಲ್ಲಾ ವಿದ್ಯಾವಂತ ನಿರುದ್ಯೋಗಿ ಯುವಕ, ಯುವತಿಯರು ತಪ್ಪದೇ https://skillconnect.kaushalkar.com ವೆಬ್‍ಸೈಟ್‍ನಲ್ಲಿ ನೋಂದಣಿ ಮಾಡಿಕೊಂಡು, ಉದ್ಯೋಗ ಮೇಳದಲ್ಲಿ ಭಾಗವಹಿಸಿ, ವಿಫುಲ ಉದ್ಯೋಗವಕಾಶಗಳನ್ನು ಪಡೆದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕೌಶಲ್ಯ ಮಿಷನ್ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

Advertisement

ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶ ನೀಡುವ ಸದುದ್ದೇಶದಿಂದ ರಾಜ್ಯ ಸರ್ಕಾರ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸುತ್ತಿದೆ. 18 ವರ್ಷ ತುಂಬಿದ, ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಡಿಪ್ಲೊಮೋ, ಇಂಜಿನಿಯರಿಂಗ್ ಸೇರಿದಂತೆ ಎಲ್ಲಾ ವಿದ್ಯಾರ್ಹತೆಯುಳ್ಳ ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಪಾಲ್ಗೊಳ್ಳಬಹುದು.

ಸರ್ಕಾರ https://skillconnect.kaushalkar.com  ವೆಬ್‍ಸೈಟ್ ಆರಂಭಿಸಿದೆ. ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರು ಇದರಲ್ಲಿ ನೊಂದಣಿ ಮಾಡಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿಯೇ, 1800-599-9918 ಸಂಖ್ಯೆಯ ಸಹಾಯವಾಣಿ ಆರಂಭಿಸಲಾಗಿದೆ. ಬೆಂಗಳೂರು ಚಿತ್ರದುರ್ಗ ಜಿಲ್ಲೆಗೆ ಹತ್ತಿರವಿದ್ದು, ಉತ್ತಮ ಸಾರಿಗೆ ಸೌಲಭ್ಯವಿದೆ. ಯುವನಿಧಿಯಡಿ ಜಿಲ್ಲೆಯ ನೊಂದಣಿ ಮಾಡಿಕೊಂಡ ಅಭ್ಯರ್ಥಿಗಳಿಗೆ ಉದ್ಯೋಗ ಪಡೆಯಲು ಇದೊಂದು ಸದಾವಕಾಶವಾಗಿದೆ ಎಂದು ಅಪರ ಜಿಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ವ್ಯಾಪಕ ಪ್ರಚಾರ ನೀಡಲು ಸೂಚನೆ:

ಜಿಲ್ಲೆಯ ಪದವಿ ಪೂರ್ವ, ಪದವಿ, ಐಟಿಐ, ಜಿ.ಟಿ.ಟಿ.ಸಿ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಸೇರಿದಂತೆ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಈಗಾಗಲೇ ತೇರ್ಗಡೆ ಹೊಂದಿದ ಹಾಗೂ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳ ವಿವರವನ್ನು ಸ್ಕಿಲ್ ಕನೆಕ್ಟ್ ಫೋರ್ಟೆಲ್‍ನಲ್ಲಿ ನೋಂದಾಯಿಸಬೇಕು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ತ್ಯಾಜ್ಯ ವಿಲೇವಾರಿ ವಾಹನಗಳಲ್ಲಿ ಉದ್ಯೋಗ ಮೇಳ ಕುರಿತಾದ ಜಿಂಗಲ್ಸ್ ಹಾಗೂ ಆಡಿಯೋ ರೆಕಾರ್ಡಿಂಗ್‍ಗಳನ್ನು ಹಾಕುವ ಮೂಲಕ ವ್ಯಾಪಕ ಪ್ರಚಾರ ನೀಡುವಂತೆ ಅಪರ ಜಿಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ನೀಡಿದರು.

ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳದ ಕುರಿತು ಮಾಹಿತಿ ನೀಡುವಂತೆ ಹಾಗೂ ಮೇಳದಲ್ಲಿ ಪಾಲ್ಗೊಳ್ಳಲು ಪ್ರೆರೇಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೀದಿಬದಿ ವ್ಯಾಪಾರಿಗಳ ಕೌಟುಂಬಿಕ ಸಮೀಕ್ಷೆ:
ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ್ ಯೋಜನೆಯಡಿ ನೋಂದಣಿಯಾಗಿ ಸಾಲ ಪಡೆದ ಫಲಾನುಭವಿಗಳ ಕುಟುಂಬಗಳ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು ಶೀಘ್ರವೇ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಳ್ಳಬೇಕು. ಈ ಕುಟುಂಬಗಳಿಗೆ ಸ್ವನಿಧಿ ಸಮೃದ್ಧ್ ಯೋಜನೆಯಡಿ, ಪ್ರಧಾನ ಮಂತ್ರಿ ಸುರಕ್ಷಾ ಬೀಮಾ, ಜೀವನ್ ಜ್ಯೋತಿ ಬೀಮಾ, ಶ್ರಮಯೋಗಿ ಮನ್ ಧನ್ ಯೋಜನೆ, ಒನ್ ನೇಷನ್ ಒನ್ ರೇಷನ್ ಕಾರ್ಡ್, ಜನಧನ್, ಜನನಿ ಸುರಕ್ಷಾ, ಮಾತೃ ವಂದನಾ ಹಾಗೂ ಲೇಬರ್ ಕಾರ್ಡ್ ಹಣಕಾಸು ಸೌಲಭ್ಯಗಳನ್ನು ಸಮೀಕ್ಷೆ ಆಧಾರದಲ್ಲಿ ನೀಡಲಾಗುವುದು ಎಂದು ಅಪರ ಜಿಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಸಭೆಯಲ್ಲಿ ಪಿ.ಎಂ ವಿಶ್ವಕರ್ಮ, ಡೇ ನಲ್ಮ್ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ವೇಮಣ್ಣ, ಕೌಶಲ್ಯ ಮಿಷನ್ ಅಭಿಯಾನ ವ್ಯವಸ್ಥಾಪಕ ಅತಿಕ್ ರೆಹಮಾನ್, ಲೀಡ್ ಬ್ಯಾಂಕ್ ಮಾನೇಜರ್ ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಕೈಗಾರಿಕಾ ತರಬೇತಿ ಸಂಸ್ಥೆಯ ಮುಖ್ಯಸ್ಥರು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tags :
Advertisement