ಬಡವರ ಬದುಕಿಗೆ ಬೆಳಕಾದ ಭೋವಿ ಒಡ್ಡರ ನಿಗಮ : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
ಸುದ್ದಿಒನ್, ಹೊಳಲ್ಕೆರೆ, ನವೆಂಬರ್. 15 : ಭೋವಿ ಒಡ್ಡರ ನಿಗಮ ಬಡವರ ಬದುಕಲ್ಲಿ ಬೆಳಕಾಗಲೀ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ತಿಳಿಸಿದರು.
ಅಂಗವಿಕಲ ಮಕ್ಕಳನ್ನು ಹೊಂದಿರುವ ಬೋರನಹಳ್ಳಿ ಗ್ರಾಮದ ಹುಲುಗಮ್ಮ ಕೋಂ ಚಂದ್ರಮ್ಮ ದಂಪತಿಗಳಿಗೆ ಭೋವಿ ಒಡ್ಡರ ನಿಗಮದಿಂದ ಮಂಜೂರಾದ ಮೂರು ಲಕ್ಷ ಸಹಾಯಧನದ ಕಾರ್ಯಾದೇಶ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ಹಾಗೂ ಶ್ರೀಗಳು ವಿತರಿಸಿದ ಸಂದರ್ಭದಲ್ಲಿ ಮಾತನಾಡಿದರು.
ಕಣ್ಣು, ಬಾಯಿ, ಮೂಗುಗಳ ಕಾರ್ಯನಿರ್ವಹಣೆ ಇಲ್ಲದೇ ಅಂಗವೈಕಲ್ಯಕ್ಕೆ ತುತ್ತಾಗಿರುವ ಮಕ್ಕಳ ಪೋಷಣೆಗಾಗಿ ಪೋಷಕರಿಗೆ ಅಭಿವೃದ್ಧಿ ನಿಗಮದಿಂದ ಸಹಾಯಧನ ನೀಡಿ ಅಂಗಡಿ ನಡೆಸುವ ಮೂಲಕ ಕುಟುಂಬ ಸಾಗಿಸುವ ಕೆಲಸಕ್ಕೆ ತುಂಬಾ ಸಹಕಾರಿಯಾಗಲಿದೆ. ಇಂತಹ ಕುಟುಂಬಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಗುರುತಿಸಿ ನಿಗಮದಿಂದ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.
ಅಲೆಮಾರಿ ಕುಟುಂಬ ವ್ಯವಸ್ಥೆ ಭೋವಿ ಒಡ್ಡರದಾಗಿದೆ, ಜೀವನಕ್ಕಾಗಿ ಅಲೆಯುವ ಕುಟುಂಬಗಳಿಗೆ ನಿಗಮದ ಯೋಜನೆಗಳು ಆಸರೆಯಾಗಬೇಕು. ಬಡ ಕುಟುಂಬಗಳು ವಲಸೆ ಜೀವನ ಬಿಟ್ಟು ಒಂದೆಡೆ ಸೇರಿ ಜೀವನ ನಡೆಸುವಂತಾಗಬೇಕೆAದು ತಿಳಿಸಿದರು.
ಭೋವಿ ನಿಗಮದ ಅಧ್ಯಕ್ಷರಾದ ರವಿಕುಮಾರ್ ಮಾತನಾಡಿ, ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಶ್ರೀಗಳು ಇಂತಹ ಕುಟುಂಬಗಳನ್ನು ಗುರುತಿಸಿ ತಿಳಿಸಿದಾಗ ಸೇವೆ ಮಾಡಲು ಸಾಧ್ಯವಾಗುತ್ತದೆ, ಬಡವರ ಪರವಾಗಿ ನಿಗಮ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಕತ್ತಲೆಯಲ್ಲಿರುವವರಿಗೆ ಬೆಳಕು ತೋರಿಸುವಂತಹ ಕಾರ್ಯ ಮಾಡುತ್ತಿದ್ದೇವೆ, ಬಡಕುಟುಂಬದಲ್ಲಿ ಈ ರೀತಿಯಾದ ಅಂಗವೈಕಲ್ಯ ಮಕ್ಕಳು ಇದ್ದಾಗ ಅವರ ಬದುಕಿನ ಬಗ್ಗೆ ಪೋಷಕರು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ಆದರೆ ಆರ್ಥಿಕ ಸಂಕಷ್ಟದಿAದ ಏನನ್ನು ಮಾಡಲು ಆಗುವುದಿಲ್ಲ, ಅಂತಹವರ ಕೈಹಿಡಿಯುವ ಕೆಲಸ ನಿಗಮ ಮಾಡುತ್ತದೆ ಎಂದು ತಿಳಿಸಿದರು.
ನಿಗಮದಿಂದ ನೇರವಾಗಿ ಅವರಿಗೆ ರೂ.3,00,000/-ಗಳ ಸಹಾಯಧನವನ್ನು ನೀಡಲಾಗಿದೆ, ಆ ಹಣದಿಂದ ಅಂಗಡಿ ನಿರ್ವಹಿಸುವುದರ ಮೂಲಕ ಕುಟುಂಬ ಸಾಗಿಸಬೇಕು. ಇದೇ ರೀತಿ ಇತರೆ ನಿಗಮಗಳು ಸಹ ಕಾರ್ಯನಿರ್ವಹಿಸಬೇಕು. ಸಮಾಜದಲ್ಲಿ ಆರ್ಥಿಕವಾಗಿ ಸಬಲರಿರುವವರು ಸಹ ಈ ರೀತಿಯ ಕುಟುಂಬಗಳಿಗೆ ಸಹಾಯಸ್ಥ ನೀಡಬೇಕು ಎಂದು ಹೇಳಿದರು.
ಭೋವಿ ಗುರುಪೀಠದಿಂದ ಕುಟುಂಬಕ್ಕೆ ಧವಸ ದಾನ್ಯಗಳನ್ನ ವಿತರಿಸಲಾಯಿತು. ಪೋಷಕರು ಮತ್ತು ಗ್ರಾಮಸ್ಥರು ಜಿಲ್ಲಾ ಭೋವಿ ನಿಗಮದ ಜಿಲ್ಲಾ ವ್ಯವಸ್ಥಾಪಕ ನಾಗರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.