For the best experience, open
https://m.suddione.com
on your mobile browser.
Advertisement

ಭದ್ರಾ ಮೇಲ್ದಂಡೆ ಯೋಜನೆ |  ಹಣಕಾಸು ತೊಂದರೆಯಾದರೆ ಬಾಂಡ್ ಮೂಲಕ ಸಂಗ್ರಹಿಸಲಿ : ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ  ಸಲಹೆ

07:40 PM Mar 08, 2024 IST | suddionenews
ಭದ್ರಾ ಮೇಲ್ದಂಡೆ ಯೋಜನೆ    ಹಣಕಾಸು ತೊಂದರೆಯಾದರೆ ಬಾಂಡ್ ಮೂಲಕ ಸಂಗ್ರಹಿಸಲಿ   ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ  ಸಲಹೆ
Advertisement

ಚಿತ್ರದುರ್ಗ, ಮಾರ್ಚ್.08 : ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಸಂಪನ್ಮೂಲಗಳ ಕೊರತೆ ಎದುರಿಸುತ್ತಿದ್ದರೆ ಕೃಷ್ಣ ಜಲಭಾಗ್ಯ ಮಾದರಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಡಿ  ಬಾಂಡ್ ಗಳ ಬಿಡುಗಡೆ ಮಾಡಿ ಸಾರ್ವಜನಿಕ ವಲಯದಿಂದ ಸಂಪನ್ಮೂಲ ಕ್ರೋಡೀಕರಣ ಮಾಡಿಕೊಂಡು ಯೋಜನೆ ಪೂರ್ಣಗೊಳಿಸುವಂತೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಲಹೆ ಮಾಡಿದೆ.

Advertisement
Advertisement

ಈ ಸಂಬಂಧ ಶುಕ್ರವಾರ ಹೇಳಿಕೆ ನೀಡಿರುವ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ,ಬೇರೆ ಕಡೆ ಸಾಲ ಮಾಡಿದರೆ ರಾಜ್ಯ ಸರ್ಕಾರ ಬಡ್ಡಿ ಕಟ್ಟಲೇ ಬೇಕು. ಬಾಂಡ್ ಬಿಡುಗಡೆ ಮಾಡಿದರೆ ಬಯಲು ಸೀಮೆ ಜನ  ಕೊಂಡು ಯೋಜನೆ ಸಾಕಾರ ಗೊಳಿಸಲು ಸಹಕರಿಸುತ್ತಾರೆ. ಬಾಂಡ್ ಕೊಳ್ಳಲು ಉದ್ಯಮಿಗಳು ಮುಂದೆ ಬರಬಹುದು. ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸುವಂತೆ ಮನವಿ ಮಾಡಿದ್ದಾರೆ.
ಅಬ್ಬಿನಹೊಳಲು ಭೂ ಸ್ವಾದೀನ ಪ್ರಕ್ರಿಯೆ ಆಡಳಿತ ವ್ಯವಸ್ಥೆ ಲೋಪವಾಗಿದ್ದು ಸರಿಪಡಿಸಿಕೊಳ್ಳಲಾಗಿದೆ. ಜನಪ್ರತಿನಿಧಿಗಳು ಹಾಗೂ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಸಮಸ್ಯೆ ಬಗೆ ಹರಿಸಿದ್ದೇವೆಂದು ಹೆಮ್ಮೆ ಪಟ್ಟುಕೊಳ್ಳದೆ  ಬಾಕಿ  ಉಳಿದ ಕಾಮಗಾರಿಗಳ ಕಡೆ ಗಮನ ಹರಿಸಬೇಕು.   ಮೊದಲ ಹಂತದಲ್ಲಿ ತುಂಗಾ ನದಿಯಿಂದ  ಭದ್ರಾ ಜಲಾಶಯಕ್ಕೆ 17.40 ಟಿಎಂಸಿ ನೀರನ್ನು  ಲಿಫ್ಟ್ ಮಾಡುವ  ಪ್ಯಾಕೇಜ್ 1 ರ ಕಾಮಗಾರಿ ಇಲಾಖಾ ದಾಖಲಾತಿಗಳಲ್ಲಿ ನಾಲ್ಕಾರು ವರ್ಷಗಳಿಂದ ಪ್ರಗತಿಯಲ್ಲಿದೆ ಎಂದು ನಮೂದಾಗಿದೆ. ಆದರೆ ಪ್ರಗತಿ ಪ್ರಮಾಣದಲ್ಲಿ ಯಾವುದೇ ಬಗೆಯ ಏರಿಕೆ ಕಂಡು ಬಂದಿಲ್ಲ. ಅನುದಾನದ ಅಲಭ್ಯತೆಯಿಂದಾಗಿ ಕುಂಟುತ್ತಾ ಸಾಗಿದೆ. ಪರಿಸರ ಮತ್ತು ಅರಣ್ಯ ಇಲಾಖೆಯ  ಕ್ಲಿಯರೆನ್ಸ್ ಬಾಕಿ ಉಳಿದಿರುವುದರಿಂದ ಕಾಮಗಾರಿಗೆ ಚುರುಕಿನ ವೇಗ ನೀಡಲು ಸಾಧ್ಯವಾಗದೇ ಹೋಗಿರುವುದು ವಿಷಾಧಕರ ಸಂಗತಿ.
ಭದ್ರಾ ಮೇಲ್ದಂಡೆಯಲ್ಲಿ ಅತಿ ಹೆಚ್ಚು ನೀರಿನ ಪಾಲು  ತುಂಗೆಯಲ್ಲಿದೆ. ಆದರೆ ಅಧಿಕಾರಿಗಳು ಭದ್ರಾ ಜಲಾಶಯದಿಂದ ಅಜ್ಜಂಪುರ ಸುರಂಗದವರೆಗೆ ನೀರನ್ನು ಲಿಫ್ಟ್ ಮಾಡುವ  ಮತ್ತು ಅಜ್ಜಂಪುರದ ಸುರಂಗ ನಿರ್ಮಾಣ ಮಾಡಿದ ಕಾಮಗಾರಿ ತೋರಿಸಿ ವಿವಿ ಸಾಗರಕ್ಕೆ ನೀರು ಹರಿಸಲಾಗಿದೆ ಎಂಬ ಭರವಸೆ ಮೂಡಿಸಿದ್ದಾರೆ. ಆದರೆ ಭದ್ರಾ ಮೇಲ್ದಂಡೆ ಕಾಮಗಾರಿ ಇದೊಂದೇ ಉದ್ದೇಶ ಹೊಂದಿಲ್ಲವೆಂಬ ಸಂಗತಿ ಸರ್ಕಾರ ಅರಿಯಬೇಕು.

Advertisement

ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣದ ಕಾಮಗಾರಿಯನ್ನು 1682 ಕೋಟಿ ರುಪಾಯಿ ವೆಚ್ಚದಲ್ಲಿ  12 ಪ್ಯಾಕೇಜ್ ಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು ಎಲ್ಲವೂ ಅರೆ ಬರೆಯಾಗಿವೆ. ತುಮಕೂರು ಶಾಖಾ ಕಾಲುವೆಯ ಐದು ಪ್ಯಾಕೇಜ್ ಕಾಮಗಾರಿಗಳ ಸರ್ವೆ ಕಾರ್ಯ ಬಾಕಿ ಇದೆ. ಜಗಳೂರು ತಾಲೂಕಿನ 13200  ಹೆಕ್ಟೇರು ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಕಲ್ಪಿಸುವ ಹಾಗೂ 9 ಕೆರೆಗಳ ತುಂಬಿಸುವ 1568 ಕೋಟಿ ರುಪಾಯಿ ವೆಚ್ಚದ ಎರಡು ಪ್ಯಾಕೇಜ್ ಗಳ  ಕಾಮಗಾರಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಯೇ ಇಲ್ಲ.ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳ ಪರಿಸ್ಥಿತಿ ಹೆಚ್ಚು ಕಡಿಮೆ ಹೀಗೆಯೇ ಇದೆ.
ಭದ್ರಾ ಮೇಲ್ದಂಡೆಗೆ ಒಟ್ಟು 8825 ಎಕರೆ ಭೂ ಸ್ವಾಧೀನವಾಗಬೇಕಿದ್ದು 5786 ಎಕರೆ ಮಾತ್ರ ಇದುವರೆಗೂ ಸಾಧ್ಯವಾಗಿದೆ. 3038 ಎಕರೆ ಭೂ ಸ್ವಾಧೀನವಾಗಬೇಕಿದೆ. ಭೂ ಸ್ವಾಧೀನಕ್ಕೆ ಇದುವರೆಗೂ  914 ಕೋಟಿ ರು ಬಿಡುಗಡೆಯಾಗಿದ್ದು ಇನ್ನೂ 565 ಕೋಟಿ ರು ಬೇಕಾಗಿದೆ. ಭೂ ಸ್ವಾಧೀನಕ್ಕೆ ಹಣಕಾಸು ಮುಗ್ಗಟ್ಟು ತೋರಿಸುವ ಸರ್ಕಾರ ನಿಗಧಿತ ಅವಧಿಯಲ್ಲಿ ಯೋಜನೆ ಮುಗಿಸುವ ಸಾಧ್ಯತೆಗಳು ಕ್ಷೀಣಿಸಿವೆ.  ಭದ್ರಾ ಮೇಲ್ದಂಡೆಗೆ ಇದುವರೆಗೂ 9112 ಕೋಟಿ ರುಪಾಯಿ ವೆಚ್ಚ ಮಾಡಲಾಗಿದ್ದು 12351 ಕೋಟಿ ರುಪಾಯಿ ಬೇಕಾಗಿದೆ. ರಾಜ್ಯ ಸರ್ಕಾರ ಕೇಂದ್ರದ ಮೇಲೆ ಅನುದಾನ ಬಿಡುಗಡೆ ಗೂಬೆ ಕೂರಿಸುತ್ತ ತನ್ನ ಜವಾಬ್ದಾರಿ ಮರೆತಿದೆ. ಕೇಂದ್ರ ಸರ್ಕಾರ 5300 ಕೋಟಿ ಕೊಟ್ಟರೂ ಏಳು ಸಾವಿರ ಕೋಟಿ ರುಪಾಯಿ ರಾಜ್ಯ ಸರ್ಕಾರ ಒದಗಿಸಬೇಕಾಗುತ್ತದೆ.
ತುಂಗಾ ನದಿಯ ಜಲಾವೃತ ಪ್ರದೇಶದಲ್ಲಿ 11 ಟವರ್ ಗಳ ಹೆಚ್ ಟಿ ಲೈನ್ ನಿರ್ಮಾಣಕ್ಕಾಗಿ ಅರಣ್ಯ ಇಲಾಖೆ ತೀರುವಳಿ ನೀಡಿಲ್ಲ.ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ರಾಜ್ಯ ಸರ್ಕಾರ ಭದ್ರಾ ಯೋಜನೆಯ ಹಗುರವಾಗಿ ತೆಗೆದುಕೊಂಡಿದೆ. ಇಲಾಖೆಗಳ ನಡುವೆ ಸಮನ್ವಯ ಸಾಧಿಸದೇ ಲೋಪವೆಸಗಿದೆ. ಜಲ ಸಂಪನ್ಮೂಲ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ತುರ್ತಾಗಿ ಇಲಾಖಾವಾರು ಸಮನ್ವಯ ಸಮಿತಿ ಸಭೆ ಕರೆದು ಭೂ ಸ್ವಾಧೀನ ಸೇರಿದಂತೆ ಅರಣ್ಯ ಇಲಾಖೆ ಕ್ಲಿಯರೆನ್ಸ್ ಪಡೆಯಬೇಕು. ಎತ್ತಿನಹೊಳೆ ಯೋಜನೆಗೆ ರಾಜ್ಯ ಸರ್ಕಾರ ತೋರುವ ಆಸಕ್ತಿಯ ಭದ್ರಾ ಮೇಲ್ದಂಡೆಗೂ ತೋರಿಸಲಿ ಎಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಲಿಂಗಾರೆಡ್ಡಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Advertisement
Advertisement

Advertisement
Tags :
Advertisement