Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬಯಲಾಟ ಪ್ರಾಚೀನ ಕಲೆ : ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಹೊಣೆಗಾರಿಕೆ ಎಲ್ಲರ ಮೇಲಿದೆ : ಡಾ.ಬಿ.ರಾಜಶೇಖರಪ್ಪ

06:56 PM Sep 12, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 12 : ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ ಸ್ಟೇಡಿಯಂ ಸಮೀಪವಿರುವ ಬಾಲಭವನದಲ್ಲಿ ಬಯಲಾಟ ಕಲಾವಿದರ ಜೊತೆ ಗುರುವಾರ ಸಂವಾದ ಏರ್ಪಡಿಸಲಾಗಿತ್ತು.

Advertisement

ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ದುರ್ಗಾದಾಸ್ ಸಂವಾದ ಉದ್ದೇಶಿಸಿ ಮಾತನಾಡುತ್ತ ಬಯಲಾಟ ಅತ್ಯಂತ ಪ್ರಾಚೀನ ರಂಗಕಲೆ. ಯಕ್ಷಗಾನ ಕರಾವಳಿಗೆ ಸೀಮಿತವಾಗಿದೆ. ಬಯಲಾಟಕ್ಕಿಂತ ಯಕ್ಷಗಾನ ಭಿನ್ನವಾದುದು. ಬಯಲಾಟದಲ್ಲಿರುವ ವಾದ್ಯಗಳೆ ಬೇರೆ, ಯಕ್ಷಗಾನದಲ್ಲಿನ ವಾದ್ಯಗಳೆ ಬೇರೆ, ಒಟ್ಟಾರೆ ಬಯಲಾಟಕ್ಕೂ ಯಕ್ಕಗಾನಕ್ಕೂ ವ್ಯತ್ಯಾಸವಿದೆ ಎಂದು ಹೇಳಿದರು.

ಬಯಲಾಟವೆಂದರೆ ಒಂದು ಕೋಣೆಯಲ್ಲಿ ಆಡುವುದಲ್ಲ. ಬಯಲಿನಲ್ಲಿ ಜನ ಇರುವ ಕಡೆ ಪ್ರದರ್ಶನವಾಗುವುದಕ್ಕೆ ಬಯಲಾಟ ಎಂಬ ಹೆಸರು ಬಂದಿದೆ. ಸಾಮಾಜಿಕ ಪುರಾಣದ ತಿಳುವಳಿಕೆ, ಸಂಗೀತ, ಕುಣಿತ, ವಿನಯ, ಶೃಂಗಾರವನ್ನು ಬಯಲಾಟ ಕಲಿಸುತ್ತದೆ. ಬಯಲಾಟ ಕಲಾವಿದರನ್ನು ಎತ್ತಿನಿಲ್ಲಿಸಿದೆಯಾದರೂ ಬಯಲಾಟ ಕುರಿತು ಬರೆಯುವ ಮಾತನಾಡುವ ವಿದ್ವಾಂಸರುಗಳು ಕಡಿಮೆಯಾಗಿದ್ದಾರೆ. ಹಾಗಾಗಿ ಬಯಲಾಟ ಕಲಾವಿದರ ಬದುಕು ಸುಧಾರಣೆ, ಸಾಧಕ ಬಾಧಕಗಳ ಕುರಿತು ಚರ್ಚಿಸಿ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ನಿಮ್ಮಗಳ ಜೊತೆ ಸಂವಾದ ನಡೆಸುತ್ತಿರುವ ಉದ್ದೇಶ ಎಂದು ತಿಳಿಸಿದರು.

ವಿಶ್ರಾಂತ ಪ್ರಾಚಾರ್ಯರು ಹಾಗೂ ಇತಿಹಾಸ ಸಂಶೋಧಕರಾದ ಡಾ.ಬಿ.ರಾಜಶೇಖರಪ್ಪ ಬಯಲಾಟ ಕಲಾವಿದರನ್ನುದ್ದೇಶಿಸಿ ಮಾತನಾಡುತ್ತ ಬಯಲಾಟ ಕಲಾವಿದರೆಂದರೆ ನಿರ್ಲಕ್ಷಿಸಬೇಕಿಲ್ಲ. ಸ್ವಾಭಿಮಾನದ ಬದುಕು ನಿಮ್ಮದು. ಸರ್ಕಾರ ಕೂಡ ನಿಮ್ಮ ಕಲೆಯನ್ನು ಉಳಿಸಿ ಬೆಳೆಸುವುದಕ್ಕಾಗಿ ಪ್ರೋತ್ಸಾಹ ನೀಡುತ್ತಿದೆ. ಬಯಲಾಟ ಎನ್ನುವುದು ಪ್ರಾಚೀನ ಕಲೆಯಾಗಿರುವುದರಿಂದ ಮುಂದಿನ ಪೀಳಿಗೆಗೆ ಈ ಕಲೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದರು.

ಬಯಲಾಟ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಕರ್ನಾಟಕ ಬಯಲಾಟ ಅಕಾಡೆಮಿ ಕಲಾವಿದರ ಬದುಕು, ಭವಣೆಯನ್ನು ಆಲಿಸಿ ಸರ್ಕಾರದಿಂದ ಸಿಗಬೇಕಾದ ಪ್ರೋತ್ಸಾಹ, ನೆರವು ಕಲ್ಪಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದೆ ಎಂದು ನುಡಿದರು.

ಶ್ರೀಮತಿ ಯಶೋಧ ಡಾ.ಬಿ.ರಾಜಶೇಖರಪ್ಪ ಸಂವಾದದಲ್ಲಿ ಭಾಗವಹಿಸಿ ಮಾತನಾಡುತ್ತ ನಾನು ಕಲಾವಿದೆಯಲ್ಲದಿದ್ದರೂ ಏಕಪಾತ್ರಾಭಿಯನ ಪ್ರದರ್ಶಿಸಿದ್ದೇನೆ. ಬಯಲಾಟ ಕಲಾವಿದರು ತಮ್ಮ ಹಿರಿಯರಿಂದ ಬಂದ ಕಲೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಸರ್ಕಾರ ಇಂತಹ ಕಲೆಯನ್ನು ಉಳಿಸಿ ಕಲಾವಿದರಿಗೆ ಶಕ್ತಿ ತುಂಬಬೇಕಿದೆ ಎಂದು ಸಲಹೆ ನೀಡಿದರು.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಸದಸ್ಯ ಡಾ.ಬಿ.ಎಂ.ಗುರುನಾಥ್ ಮಾತನಾಡಿ ಕರಾವಳಿ ಪ್ರದೇಶದಲ್ಲಿರುವ ಯಕ್ಷಗಾನ ದೇಶ ವಿದೇಶಗಳಲ್ಲಿ ಪ್ರಸಿದ್ದಿ ಪಡೆದಿದೆ. ನಮ್ಮ ಭಾಗದ ಬಯಲಾಟ ಇನ್ನು ಆ ಮಟ್ಟಕ್ಕೆ ತಲುಪಿಲ್ಲ. ಹಾಗಾಗಿ ವಾದ್ಯಗಾರರು, ವಿದ್ವಾಂಸರು, ಕಲಾವಿದರು ಒಟ್ಟಿಗೆ ಸೇರಿ ಬಯಲಾಟವನ್ನು ಉಳಿಸಿ ಬೆಳೆಸಬೇಕಿದೆ. ಬಯಲಾಟವನ್ನು ರಾತ್ರಿಯಿಡಿ ಗ್ರಾಮಗಳಲ್ಲಿ ಕುಳಿತು ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗಿದೆ. ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಬಯಲಾಟವನ್ನು ಮಾರ್ಪಾಡುಗೊಳಿಸಿಕೊಳ್ಳುವ ಅಗತ್ಯವಿದೆ. ಅಕ್ಷರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸಿದಾಗ ಮಾತ್ರ ಬಯಲಾಟ ಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬಹುದು ಎಂದು ಹೇಳಿದರು.

ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯರುಗಳಾದ ನಿಂಗಪ್ಪ, ಬಿ.ಮಾರನಾಯಕ, ಜಾನಪದ ವಿದ್ವಾಂಸ ಮೈಲಹಳ್ಳಿ ರೇವಣ್ಣ ವೇದಿಕೆಯಲ್ಲಿದ್ದರು.

ರೈತ ಮುಖಂಡ ಕೆ.ಪಿ.ಭೂತಯ್ಯ ಸೇರಿದಂತೆ ದಾವಣಗೆರೆ, ಜಗಳೂರು, ಕೂಡ್ಲಿಗಿ, ಮೊಳಕಾಲ್ಮುರು, ನಾಯಕನಹಟ್ಟಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಬಯಲಾಟ ಕಲಾವಿದರು ಸಂವಾದದಲ್ಲಿ ತಮ್ಮಲ್ಲಿನ ಕಲೆಯನ್ನು ಪ್ರದರ್ಶಿಸಿದರು. ಜಾನಪದ ವಿದ್ವಾಂಸ ಡಾ.ಚಿಕ್ಕಣ್ಣ ಎಣ್ಣೆಕಟ್ಟೆ ಸಂವಾದದಲ್ಲಿ ಪಾಲ್ಗೊಂಡಿದ್ದರು.

 

Advertisement
Tags :
Bayalata Ancient ArtbengaluruchitradurgaDr || B. Rajasekharappasuddionesuddione newsಚಿತ್ರದುರ್ಗಡಾ.ಬಿ.ರಾಜಶೇಖರಪ್ಪಬಯಲಾಟ ಪ್ರಾಚೀನ ಕಲೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article