ಬಾಳೆ ಹಣ್ಣು ಸಿಕ್ಕಾಪಟ್ಟೆ ರೇಟ್: ತಳ್ಳೊ ಗಾಡಿ ವ್ಯಾಪಾರಿಗಳಿಗೂ ಸಂಕಷ್ಟ
ಸುದ್ದಿಒನ್, ಚಿತ್ರದುರ್ಗ : ಹಬ್ಬ ಹರಿದಿನಗಳು ಬಂತು ಅಂದ್ರೆ ಹೂ,ಹಣ್ಣುಗಳ ದರ ಗಗನಕ್ಕೇ ಏರಿ ಬಿಡುತ್ತದೆ. ಜನ ಸಾಮಾನ್ಯರು ಕೊಂಡುಕೊಳ್ಳುವುದಕ್ಕೂ ಕಷ್ಟ. ಆದರೆ ಬಾಳೆ ಹಣ್ಣು ಹಬ್ಬಕ್ಕೂ ವಾರ ಮೊದಲೇ ಸಿಕ್ಕಾಪಟ್ಟೆ ಏರಿಕೆ ಕಂಡಿದೆ. ಇದರಿಂದ ಗ್ರಾಹಕರು ಕೊಂಡುಕೊಳ್ಳುವುದನ್ನು ಕಡಿಮೆ ಮಾಡಿದರೆ, ವ್ಯಾಪಾರಿಗಳು, ಅದರಲ್ಲೂ ಬಾಳೆಹಣ್ಣನ್ನೇ ನಂಬಿಕೊಂಡ ಸಣ್ಣ ಪುಟ್ಟ, ತಳ್ಳೋ ಗಾಡಿಯ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಹಣ್ಣು ಮಾರಾಟವಾಗದೆ, ಹಾಕಿದ ಬಂಡವಾಳವೂ ಹುಟ್ಟದೆ ಗೊಳೋ ಎನ್ನುತ್ತಿದ್ದಾರೆ.
ಮಧ್ಯವರ್ತಿಗಳು ಮತ್ತು ಬೆಳೆಗಾರರು ಆದಷ್ಟು ಸೌಹಾರ್ದತೆಯಿಂದ ವ್ಯವಹಾರ ಮಾಡಿ, ಜನಸಾಮಾನ್ಯರಿಗೆ ಕನಿಷ್ಠ ಪಕ್ಷ ಬಾಳೆಹಣ್ಣು ತಿನ್ನುವ ಭಾಗ್ಯವನ್ನಾದರೂ ಲಭಿಸಿಕೊಡಬೇಕೆಂದು ಎಂದು ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ ವಿನಂತಿಸಿಕೊಂಡಿದ್ದಾರೆ.
ಬೆಲೆ ಏರಿಕೆಯಿಂದಾಗಿ ರಸ್ತೆ ಬದಿಯಲ್ಲಿ ತಳ್ಳುವ ಗಾಡಿಯಲ್ಲಿ ಬಾಳೆಹಣ್ಣು ಮಾರುವವರು, ಹಣ್ಣಿನ ಮಾರಾಟವಾಗದೆ ಸಂಕಷ್ಟದಲ್ಲಿದ್ದಾರೆ. ಬಹಳಷ್ಟು ಸಾರಿ ಅವರು ನೂರು ರೂಪಾಯಿ ಕೆಜಿಗೆ ಮುಟ್ಟಿದಾಗ, ಮಾರಾಟವನ್ನು ಮಾಡಲಾಗದೆ, ಗಿರಾಕಿಗಳಿಗೂ ಸಹ ಉತ್ತರ ನೀಡಲಾರದೆ ಪರಿತಪಿಸುತ್ತಿರುತ್ತಾರೆ. ರೈತರಿಂದ ನೇರವಾಗಿ ಖರೀದಿ ಮಾಡಿ, ಮನೆಯಲ್ಲಿ ಹಣ್ಣುಗಳನ್ನು ಸಂಗ್ರಹಿಸಿ ಇಟ್ಟುಕೊಂಡು ನಂತರ ವ್ಯಾಪಾರ ಮಾಡುತ್ತಿರುವ ಬಾಳೆಹಣ್ಣಿನ ವ್ಯಾಪಾರಿಗಳು ಸಹ ಬಾಳೆ ಹಣ್ಣಿನ ದರ ಏರಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ದರ ಜಾಸ್ತಿಯಾದಂತೆ ಕೊಂಡುಕೊಳ್ಳುವವರ ಸಂಖ್ಯೆ ಕಡಿಮೆಯಾಗುವ ನೋವು ಅವರದ್ದು.
ಸೌತೆಕಾಯಿ ಸಹ 80 ರೂಪಾಯಿ ಕೆಜಿ ತನಕ ಬಂದು ನಿಂತಿದೆ. ಅಷ್ಟೇ ಅಲ್ಲ ಬಾಳೆಹಣ್ಣು, ದ್ರಾಕ್ಷಿ, ಸೀಬೆಕಾಯಿ, ಸೀಬೆಹಣ್ಣು, ಸೀತಾಫಲ, ಮಾವಿನಹಣ್ಣು, ಹಲಸಿನಹಣ್ಣು, ಮೋಸಂಬಿ, ಕಿತ್ತಲೆ ಹಣ್ಣಿನ ದರ ಕೂಡ ಏರಿಕೆಯಾಗಿದೆ. ಕೆಜಿಗೆ 100 ರಿಂದ 200 ರೂಪಾಯಿವರೆಗೂ ಏರಿಕೆಯಾಗಿದೆ. ಹೂವಿನ ರೇಟು, ತೆಂಗಿನಕಾಯಿ ರೇಟು, ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ದಿನಸಿ ಸಾಮಾನುಗಳ ರೇಟು ಏರಿಕೆ ಆಗಿದೆ. 10ಗೆ ಕೆಜಿ ಬಾಳೆಹಣ್ಣನ್ನು ಕೊಂಡುಕೊಳ್ಳುವ ಮುದ್ಯವರ್ತಿಗಳು 30 ರಿಂದ 40 ರೂಪಾಯಿ ಕೆಜಿಗೆ ಮಾರಾಟ ಮಾಡಿ ಹಣ ಗಳಿಸುತ್ತಾರೆ. ಇದು ರೈತರಿಗೆ ಬಹಳ ನಷ್ಟ ಉಂಟು ಮಾಡುತ್ತಿದೆ.
ಈಗ ಬೇರೆ ಶ್ರಾವಣ ಮಾಸ ಶುರುವಾಗಿದೆ. ಸಾಲು ಸಾಲು ಹಬ್ಬಗಳು ಬರುತ್ತಿವೆ. ಹೀಗಾಗಿ ಹಣ್ಣು, ತರಕಾರಿ, ಹೂಗಳಲ್ಲಿ ಬೆಲೆ ಏರಿಕೆ ಜಾಸ್ತಿಯಾಗಿದೆ.
ಡಾ. ಎಚ್. ಕೆ. ಎಸ್. ಸ್ವಾಮಿ, ಚಿತ್ರದುರ್ಗ, ಮೊ : 94830 49830