ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ರೊಚ್ಚುಗೆದ್ದ ಬಲಿಜಾ ಸಮುದಾಯ : ಕಾರಣವೇನು ಗೊತ್ತಾ..?
ಬೆಂಗಳೂರು: ಕೋಟಿ ಕೋಟಿ ವಂಚನೆ ಆರೋಪ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮೇಲೆ ಬಂದಿದೆ. ಈ ಕಾರಣಕ್ಕೆ ಬಲಿಜ ಸಮುದಾಯದವರು ತಿರುಗಿ ಬಿದ್ದಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಬೋಗಸ್ ದಾಖಲೆ, ಅಕ್ರಮವಾಗಿ ಟ್ರಸ್ಟ್ ಗೆ ಸೇರಿದ ಜಾಗವನ್ನು ಕಬಳಿಸುವ ಹುನ್ನಾರ ಮಾಡಿದ್ದು, ಈ ಮೂಲಕ ಕೋಟಿ ಕೋಟಿ ರೂಪಾಯಿ ವಂಚನೆ ಆರೋಪದಲ್ಲಿ ಬಲಿಜ ಸಮುದಾಯದ ಕೋಪಕ್ಕೆ ಗುರಿಯಾಗಿದ್ದಾರೆ. ಸಂಸದರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಚಾಮರಾಜಪೇಟೆಯಲ್ಲಿರುವ ಆನೇಕಲ್ ತಿಮ್ಮಯ್ಯ ಚಾರಿಟಬಲ್ ಟ್ರಸ್ಟ್ ನ ದತ್ತಿ ಸಂಸ್ಥೆಗೆ ಸೇರಿದ್ದ ಜಾಗವನ್ನು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎನ್ನಲಾಗಿದೆ. ಎಂ ಎಸ್ ರಾಮಯ್ಯ ವಿದ್ಯಾ ಸಮೂಹ ಸಂಸ್ಥೆಗಳ ಛೇರ್ಮನ್ ಎಂ.ಆರ್.ಜಯರಾಂ ಅವರ ನೇತೃತ್ವದಲ್ಲಿ ತಿಮ್ಮಯ್ಯ ಚಾರಿಟಬಲ್ ಟ್ರಸ್ಟ್ ಮುಂಭಾಗ ಪ್ರತಿಭಟನೆ ಮಾಡಲಾಗಿದೆ. ಕಪ್ಪು ಪಟ್ಟಿ ಧರಿಸಿ ಶಿವರಾಮೇಗೌಡರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಶಿವರಾಮೇಗೌಡ ತೊಲಗು ಎಂಬ ಭಿತ್ತಿ ಪತ್ರಗಳನ್ನು ಹಂಚಿದ್ದಾರೆ. ರಾಜ್ಯದ ಮೂಲೆಮೂಲೆಯಿಂದಲೂ ಆಗಮಿಸಿ ಪ್ರತಿಭಟನೆಯಲ್ಲಿ ಜನ ಭಾಗವಹಿಸಿದ್ದರು. ಯಾವುದೇ ಕಾರಣಕ್ಕೂ ಸಮುದಾಯದ ಜಾಗವನ್ನು ಬಿಟ್ಟುಕೊಡುವುದಿಲ್ಲ. ಮುಂದೆ ಯಾವುದೇ ರೀತಿಯ ಹೋರಾಟಕ್ಕೂ ನಾವೆಲ್ಲ ಸಿದ್ಧರಿದ್ದೇವೆ. ಸಮುದಾಯದ ಮುಂಚೂಣಿ ನಾಯಕರಿಗೆ ಸಹಕಾರ ನೀಡುತ್ತೇವೆ ಎಂದಿದ್ದಾರೆ.
ಇನ್ನು ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಕೆಂಚಣ್ಣ ಶ್ರೀನಿವಾಸನ್ ಹೇಳುವ ಪ್ರಕಾರ, ಮಾಜಿ ಸಂಸದ ಶಿವರಾಮೇಗೌಡ, ಆತನ ಗೂಂಡಾಗಳು, ಸಹಚರರು, ಬೌನ್ಸರ್ ಗಳು, ಗನ್ ಮ್ಯಾನ್ ಗಳು ನಿರಂತರವಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ಖಾಲಿ ಜಾಗವನ್ನು ಆಕ್ರಮಿಸಲು ಯತ್ನಿಸುತ್ತಿದ್ದಾರೆ. ಕಾನೂನು ಪ್ರಕಾರವೇ ಹೋರಾಟನಡೆಸುತ್ತಿದ್ದೇವೆ ಎಂದಿದ್ದಾರೆ.