Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿ.ಎನ್.ಚಂದ್ರಪ್ಪನವರನ್ನು ಬಹುಮತಗಳಿಂದ ಗೆಲ್ಲಿಸಿ : ಮುಖ್ಯಮಂತ್ರಿ ಸಿದ್ದರಾಮಯ್ಯ

07:19 PM Apr 04, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

 

Advertisement

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 04  : ರಾಜ್ಯದಲ್ಲಿ ಐದು ವರ್ಷಗಳ ಕಾಲ ಅಧಿಕಾರ ನಡೆಸಿದ ಬಿಜೆಪಿ. ಸರ್ಕಾರದ ನಲವತ್ತು ಪರ್ಸೆಂಟ್ ಕಮೀಷನ್ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಆಯೋಗ ರಚಿಸಿದ್ದೇನೆಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇದೇ ತಿಂಗಳ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿ.ಎನ್.ಚಂದ್ರಪ್ಪನವರ ಪರ ಮತಯಾಚನೆಗಾಗಿ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಗುರುವಾರ ನಡೆದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.

ಮುಂಬಾಗಿಲಿನಿಂದ ಬಿಜೆಪಿ. ಎಂದಿಗೂ ಅಧಿಕಾರಕ್ಕೆ ಬಂದಿಲ್ಲ. ಕಳೆದ ವರ್ಷ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನ ಆಶೀರ್ವಾದ ಮಾಡಿದ್ದರಿಂದ 136 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ. 2008, 2019 ರಲ್ಲಿ ಬಿಜೆಪಿ. ಆಪರೇಷನ್ ಕಮಲದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಿತು. ಆಗ ಕೋಟಿಗಟ್ಟಲೆ ಹಣ ನೀಡಿ ಕಾಂಗ್ರೆಸ್ ಶಾಸಕರನ್ನು ಖರೀದಿಸಿದ ಕೋಮುವಾದಿ ಬಿಜೆಪಿ.ಗೆ ಹಣ ಎಲ್ಲಿಂದ ಬಂತು ಎಂದು ದೇಶದ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದರು.

 

ವಿದೇಶದಲ್ಲಿರುವ ಕಪ್ಪು ಹಣ ತಂದು ದೇಶದ ಪ್ರತಿ ಬಡವರ ಖಾತೆಗಳಿಗೆ ಹದಿನೈದು ಲಕ್ಷ ರೂ.ಗಳನ್ನು ಜಮ ಮಾಡುವುದಾಗಿ ನಂಬಿಸಿ ಮೋಸ ಮಾಡಿರುವ ಪ್ರಧಾನಿ ನರೇಂದ್ರಮೋದಿ ಪ್ರತಿ ವರ್ಷ ಎರಡು ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವುದಾಗಿ ಆಸೆ ಹುಟ್ಟಿಸಿ ಕೊಟ್ಟ ಮಾತು ಯಾವುದನ್ನು ಈಡೇರಿಸಲಿಲ್ಲ. ಇಂತಹ ಸುಳ್ಳುಗಾರರನ್ನು ಅಧಿಕಾರಕ್ಕೆ ತರುತ್ತೀರ? ರೈತರ ಆದಾಯ ದುಪ್ಪಟ್ಟಾಗಲಿಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ಬೆಲೆ ಜಾಸ್ತಿಯಾಗದಿದ್ದರೂ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರವನ್ನು ಹೆಚ್ಚಿಸಲಾಗಿದೆ. ರೈತರು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಕಾರ್ಮಿಕರು ಬದುಕುವಂತಿಲ್ಲ. ಎಂಟು ತಿಂಗಳಲ್ಲಿ ಐದು ಗ್ಯಾರೆಂಟಿಗಳನ್ನು ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ. ಅದಕ್ಕಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿ.ಎನ್.ಚಂದ್ರಪ್ಪನವರನ್ನು ಬಹುಮತಗಳಿಂದ ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿಕೊಡಿ ಎಂದು ಜನತೆಯಲ್ಲಿ ಸಿದ್ದರಾಮಯ್ಯ ವಿನಂತಿಸಿದರು.

ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ. ಸಂವಿಧಾನ ಅಪಾಯದಲ್ಲಿದೆ. ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆಂದರೆ ಅದಕ್ಕೆ ಸಂವಿಧಾನ ಕಾರಣ. ಸಂವಿಧಾನ ಬದಲಾವಣೆಯಾದರೆ ನಾವು ನೀವುಗಳೆಲ್ಲಾ ನಾಶವಾಗುತ್ತೇವೆ. ಹಾಗಾಗಿ ಪ್ರತಿ ಮನೆ ಮನೆಗೆ ಹೋಗಿ ಜನತೆಯನ್ನು ಜಾಗೃತಿಗೊಳಿಸುವ ಜವಾಬ್ದಾರಿ ನಿಮ್ಮಗಳ ಮೇಲಿದೆ. 165 ಭರವಸೆಗಳಲ್ಲಿ 158 ನ್ನು ಈಡೇರಿಸಿ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಇಲ್ಲಿಯವರೆಗೂ ಲೂಟಿ ಹೊಡೆದ ಕಾರಜೋಳರನ್ನು ಬಿಜೆಪಿ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಕೇಂದ್ರ ಮಂತ್ರಿಯಾಗಿದ್ದ ಎ.ನಾರಾಯಣಸ್ವಾಮಿ ಕ್ಷೇತ್ರಕ್ಕೆ ಮಾಡಿದ್ದೇನು? ಐದು ಗ್ಯಾರೆಂಟಿ ಯೋಜನೆಗಳಿಗಾಗಿ 36 ಸಾವಿರ ಕೋಟಿ ರೂ.ಗಳನ್ನು ಬಡವರಿಗಾಗಿ ಖರ್ಚು ಮಾಡಿದ್ದೇವೆ.

ಬಸವಾದಿ ಶರಣರ ಆದರ್ಶ ತತ್ವ, ಸಿದ್ದಾಂತಗಳ ಮೇಲೆ ನಂಬಿಕೆಯಿಟ್ಟು ಬಸವಣ್ಣನವರನ್ನು ಸಾಂಸ್ಕøತಿಕ ನಾಯಕ ಎಂದು ಘೋಷಿಸಿದ್ದೇನೆ. ರಾಜ್ಯದಲ್ಲಿ ಭೀಕರ ಬರಗಾಲವಿದೆ. ಜಾನುವಾರುಗಳಿಗೆ ಮೇವು ನೀರಿಗೆ ಅಭಾವವಿದೆ. ಜನರಿಗೆ ಕುಡಿಯಲು ನೀರಿಲ್ಲ. ಹಣ ಮಂಜೂರು ಮಾಡುವಂತೆ ಆರು ತಿಂಗಳಲ್ಲಿ ಮೂರು ಬಾರಿ ಕೇಂದ್ರಕ್ಕೆ ಮನವಿ ಮಾಡಿದ್ದೇನೆ. ನಾನೆ ಖುದ್ದು ದೇಶದ ಪ್ರಧಾನಿ ಮೋದಿ ಹಾಗೂ ಅಮಿತ್‍ಷಾರವರನ್ನು ಭೇಟಿ ಮಾಡಿದ್ದೇನೆ. ಇದುವರೆವಿಗೂ ನಯಾಪೈಸೆ ನೀಡಿಲ್ಲ. ಶಬರಿಯಂತೆ ಕಾಯುತ್ತಿದ್ದೇನೆ. ಐದುವರೆ ಲಕ್ಷ ಎಕರೆಗೆ ನೀರು ಕೊಡುವ ಅಪ್ಪರ್ ಭದ್ರಾ ಯೋಜನೆಯನ್ನು ಇನ್ನು ನಾಲ್ಕು ವರ್ಷದಲ್ಲಿ ಪೂರ್ಣಗೊಳಿಸುತ್ತೇನೆಂದು ಭರವಸೆ ನೀಡಿದರು.

ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ ಹಣ ನೀಡಿದ್ದೇನೆ. ಕೂಡ್ಲಿಗೆ, ಮೊಳಕಾಲ್ಮುರು, ಪಾವಗಡ, ಚಳ್ಳಕೆರೆ ತಾಲ್ಲೂಕುಗಳಿಗೆ ನೀರು ಕೊಡಲು ಪ್ರಾಜೆಕ್ಟ್ ತಯಾರಿಸಿ ಚಾಲನೆ ಕೊಟ್ಟಿದ್ದೇನೆ. ಹದಿನೆಂಟು ಸಾವಿರದ 171 ಕೋಟಿ ರೂ.ಗಳನ್ನು ಕೊಡುವಂತೆ ಕೇಂದ್ರಕ್ಕೆ ಕೇಳಿದ್ದೇನೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರ ಬೆಳೆ ಹಾನಿಯಾಗಿದೆ. 33 ಲಕ್ಷದ 25 ಸಾವಿರ ರೈತರಿಗೆ ಇನ್‍ಪುಟ್ ಕೊಟ್ಟಿದ್ದೇನೆ. 4 ಲಕ್ಷ 30 ಸಾವಿರ ಕೋಟಿ ತೆರಿಗೆ ವಸೂಲಾಗಿದೆ. ಬಿಜೆಪಿ.ಯ ಅನ್ಯಾಯ ಪ್ರಶ್ನಿಸಿದರೆ ನನ್ನನ್ನು ಶ್ರೀರಾಮನ ವಿರೋಧಿ ಎನ್ನುತ್ತಾರೆ. ನಾನು ಕೂಡ ಎರಡು ರಾಮನ ದೇವಸ್ಥಾನ ಕಟ್ಟಿಸಿದ್ದೇನೆ. ಭಾವನಾತ್ಮಕ ವಿಚಾರಗಳಿಂದ ದೇಶದ ಜನರ ಭಾವನೆ ಕೆರಳಿಸುತ್ತಿರುವ ಬಿಜೆಪಿ.ಯನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಅಧಿಕಾರದಿಂದ ಕೆಳಗಿಳಿಸುವ ಜವಾಬ್ದಾರಿ ಮತದಾರರ ಮೇಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ ರಾಜಕಾರಣದಲ್ಲಿ ಹಣ ಅಧಿಕಾರಕ್ಕಾಗಿ ಬರುವವರು ಜಾಸ್ತಿಯಿದ್ದಾರೆ. ಕಾಂಗ್ರೆಸ್‍ನಿಂದ ಮಾತ್ರ ಸಾಮಾಜಿಕ ನ್ಯಾಯ ನೀಡಲು ಸಾಧ್ಯ. ಅಪ್ಪರ್‍ಭದ್ರಾ ಯೋಜನೆ ಕೆಲಸ ಆರಂಭವಾಗಿದೆ. 8.5 ಟಿ.ಎಂ.ಸಿ. ಗೂ ಹೆಚ್ಚು ನೀರು ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ಸಿಕ್ಕಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಐದು ಗ್ಯಾರೆಂಟಿಗಳನ್ನು ನೀಡುತ್ತದೆ ಎಂದು ಹೇಳಿದರು.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ದೇಶಕ್ಕೆ ಸ್ವಾತಂತ್ರ್ಯ ತಂದಿದ್ದು, ಕಾಂಗ್ರೆಸ್. ಕೋಮುವಾದಿ ಬಿಜೆಪಿ. ಕೇಂದ್ರದಲ್ಲಿ ಅಧಿಕಾರ ಹಿಡಿದರೆ ದೇಶಕ್ಕೆ ದೊಡ್ಡ ಗಂಡಾಂತರವಿದೆ. ಜಾತಿ ಧರ್ಮವನ್ನು ಬಳಸುತ್ತಿದ್ದಾರೆ. ಪ್ರಜಾಪ್ರಭುತ್ವ ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಿ ಎಂದು ಜನತೆಯಲ್ಲಿ ಮನವಿ ಮಾಡಿದರು.

 

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕರುಗಳಾದ ಕೆ.ಸಿ.ವೀರೇಂದ್ರಪಪ್ಪಿ, ಎನ್.ವೈ.ಗೋಪಾಲಕೃಷ್ಣ, ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಪಾವಗಡ ಶಾಸಕ ವೆಂಕಟೇಶ್, ಮಾಜಿ ಶಾಸಕಿ ಪೂರ್ಣಿಮ ಶ್ರೀನಿವಾಸ್ ಇವರುಗಳು ಮಾತನಾಡಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ ಜನತೆಯಲ್ಲಿ ಮತ ಯಾಚಿಸಿದರು.

ಮಾಜಿ ಸಚಿವ ಹೆಚ್.ಆಂಜನೇಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲೇಶಪ್ಪ, ಶಾಸಕ ಬಸವಂತಪ್ಪ, ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಬಿ.ಯೋಗೇಶ್‍ಬಾಬು, ಶ್ರೀನಿವಾಸ್, ಸಾ.ಲಿಂಗಯ್ಯ, ಷಣ್ಮುಖಪ್ಪ, ವಿಧಾನಪರಿಷತ್ ಮಾಜಿ ಸದಸ್ಯೆ ಜಯಮ್ಮಬಾಲರಾಜ್, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿಗಳಾದ ವಿಜಯಕುಮಾರ್, ರಾಮಪ್ಪ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರುಗಳಾದ ಆರ್.ಕೆ.ಸರ್ದಾರ್, ಬಿ.ಟಿ.ಜಗದೀಶ್ ಇನ್ನು ಅನೇಕರು ವೇದಿಕೆಯಲ್ಲಿದ್ದರು.

Advertisement
Tags :
bengaluruBN ChandrappachitradurgaChitradurga Lok Sabha Electionsuddionesuddione newsಚಿತ್ರದುರ್ಗಚಿತ್ರದುರ್ಗ ಕ್ಷೇತ್ರಚಿತ್ರದುರ್ಗ ಲೋಕಸಭಾ ಚುನಾವಣೆಬಿ.ಎನ್.ಚಂದ್ರಪ್ಪಬೆಂಗಳೂರುಮುಖ್ಯಮಂತ್ರಿ ಸಿದ್ದರಾಮಯ್ಯಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article