For the best experience, open
https://m.suddione.com
on your mobile browser.
Advertisement

ಯುವ ಪೀಳಿಗೆಯವರಲ್ಲಿ ಭಾಷೆ ಉಳಿವಿಗಾಗಿ ಜಾಗೃತಿ ಮೂಡಿಸಬೇಕಿದೆ : ಪ್ರೊ.ಬಸವರಾಜ ಟಿ.ಬೆಳಗಟ್ಟ

04:51 PM Nov 30, 2023 IST | suddionenews
ಯುವ ಪೀಳಿಗೆಯವರಲ್ಲಿ ಭಾಷೆ ಉಳಿವಿಗಾಗಿ ಜಾಗೃತಿ ಮೂಡಿಸಬೇಕಿದೆ   ಪ್ರೊ ಬಸವರಾಜ ಟಿ ಬೆಳಗಟ್ಟ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವೆಂಬರ್.30 : ಕನ್ನಡ ನಾಡು, ನುಡಿ, ನೆಲ, ಜಲದ ಉಳಿವಿಗಾಗಿ ಹುಯಿಲಗೋಳ ನಾರಾಯಣ, ಆಲೂರು ವೆಂಕಟರಾಯರ ಪಾತ್ರ ಬಹಳವಿದೆ ಎಂದು ಹಿರಿಯೂರಿನ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಬಸವರಾಜ ಟಿ.ಬೆಳಗಟ್ಟ ಹೇಳಿದರು.

Advertisement

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯಿಂದ ಪತ್ರಕರ್ತರ ಭವನದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ, ಭಕ್ತ ಕನಕದಾಸರ ಜಯಂತಿ ಹಾಗೂ ತಿಂಗಳ ವಿಶೇಷ ವ್ಯಕ್ತಿ ಪರಿಚಯ, ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಕ್ತ ಕನಕದಾಸರು ಹಾಗೂ ಕನ್ನಡಾಂಭೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಗಾಟಿಸಿ ಮಾತನಾಡಿದರು.

ಕನ್ನಡ ನಾಡು, ನುಡಿ, ಭಾಷೆಯ ಬಗ್ಗೆ ವೇದಿಕೆ ಕಾರ್ಯಕ್ರಗಳಲ್ಲಿ ಭಾಷಣ ಮಾಡುವ ಬದಲು ಯುವ ಪೀಳಿಗೆಯವರಲ್ಲಿ ಭಾಷೆ ಉಳಿವಿಗಾಗಿ ಜಾಗೃತಿ ಮೂಡಿಸಬೇಕಿದೆ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿದಾಗ ಮಾತ್ರ ಕನ್ನಡ ಭಾಷೆಯನ್ನು ರಕ್ಷಿಸಿದಂತಾಗುತ್ತದೆ. ಆಂಗ್ಲ ಭಾಷೆ ಶಾಲೆಗಳಿಗೆ ಸರ್ಕಾರ ಹೆಚ್ಚು ಆದ್ಯತೆ ಕೊಡುವುದು ನಿಲ್ಲಬೇಕು. ಸಾಹಿತ್ಯ ಪರಂಪರೆಯಲ್ಲಿ ಕನಕದಾಸರ ಕೊಡುಗೆ ಅಪಾರ. ಕನಕದಾಸರು ದಂಡ ನಾಯಕರಾಗಿದ್ದರು ಜಾತಿಯಿಂದ ಹೊರ ಬಂದು ಸಮಾನತೆಯ ಸಂದೇಶವನ್ನು ಮನುಕುಲಕ್ಕೆ ಸಾರಿದ ಕೀರ್ತನಕಾರ ಎಂದು ಬಣ್ಣಿಸಿದರು.
ವಿಶ್ವಮಾನವರಾಗಿ ಬೆಳೆದ ಕನಕದಾಸರ ಜಯಂತಿಯನ್ನು ಆಚರಿಸಿ ಕುಣಿದು ಕುಪ್ಪಳಿಸುವ ಬದಲು ಅವರ ಆದರ್ಶ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾಗಿಯೂ ಅವರಿಗೆ ಸಲ್ಲಿಸುವ ಗೌರವ ಎಂದು ತಿಳಿಸಿದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ, ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಮಾತನಾಡಿ ಕನ್ನಡ ತುಂಬಾ ಪುರಾತನವಾದ ಭಾಷೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿದೆ. 1953 ರಲ್ಲಿ ಕರ್ನಾಟಕ ಏಕೀಕರಣವಾಯಿತು. ಹಿಂದೆ ವಿಶಾಲ ಮೈಸೂರು ಎಂದು ಕರೆಯಲಾಗುತ್ತಿತ್ತು. ಡಿ.ದೇವರಾಜ ಅರಸುರವರು ಮುಖ್ಯಮಂತ್ರಿಯಾಗಿದ್ದಾಗ 1973 ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದರು. ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದುಗೂಡಿಸುವಲ್ಲಿ ಅನೇಕ ಹಿರಿಯರು ಹೋರಾಡಿದ್ದಾರೆ ಎಂದು ನೆನಪಿಸಿದರು.
ಪರ್ಶಿಯನ್ ಭಾಷೆ, ತೆಲುಗಿನ ಕೆಲವು ಭಾಷೆಗಳು ಕನ್ನಡದಲ್ಲಿ ಸಮ್ಮಿಲನಗೊಂಡಿದೆ. ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಿದೆ. ಕನ್ನಡದಲ್ಲಿ ಶಿಕ್ಷಣ ಪಡೆದರೆ ಶೇ.5 ರಷ್ಟು ಮೀಸಲಾತಿ ಉದ್ಯೋಗದಲ್ಲಿ ಸಿಗುತ್ತದೆ. ಪ್ರವಾದಿ ಮಹಮದ್ ಪೈಗಂಬರ್, ಹನ್ನೆರಡನೆ ಶತಮಾನದ  ಬಸವಣ್ಣ ಇವರುಗಳೆಲ್ಲಾ ಮಾನವೀಯತೆಯ ಸಂದೇಶವನ್ನು ಸಾರಿದ್ದಾರೆಂದು ಹೇಳಿದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ.ಎಸ್.ಹೆಚ್.ಶಫಿವುಲ್ಲಾ(ಕುಟೀಶ) ಅಧ್ಯಕ್ಷತೆ ವಹಿಸಿದ್ದರು.
ತಿಂಗಳ ವಿಶೇಷ ವ್ಯಕ್ತಿಯಾಗಿ ಲೋಕೋಪಯೋಗಿ ಇಲಾಖೆಯ ಇ.ಅಶೋಕ್‍ಕುಮಾರ್ ಇವರನ್ನು ಕಾರ್ಯಕ್ರಮದಲ್ಲಿ ಪರಿಚಯಿಸಿ ಸನ್ಮಾನಿಸಲಾಯಿತು.
ಗಾಂಧಿವಾದಿ ಡಾ.ಹೆಚ್.ಎಸ್.ಕೆ.ಸ್ವಾಮಿ, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಉಪಾಧ್ಯಕ್ಷರುಗಳಾದ ಶೋಭ ಮಲ್ಲಿಕಾರ್ಜುನ್, ಶಿವರುದ್ರಪ್ಪ ಪಂಡರಹಳ್ಳಿ ಇವರುಗಳು ವೇದಿಕೆಯಲ್ಲಿದ್ದರು.
ಹದಿನೈದಕ್ಕು ಹೆಚ್ಚು ಕವಿಗಳು ತಮ್ಮ ಕವನಗಳನ್ನು ವಾಚಿಸಿದರು.

Tags :
Advertisement