ದೇವಸ್ಥಾನಗಳನ್ನು ಕಟ್ಟುವುದು ಎಷ್ಟು ಮುಖ್ಯವೋ ಪಾವಿತ್ರತೆ ಕಾಪಾಡವುದು ಅಷ್ಟೇ ಮುಖ್ಯ : ಮಾದಾರ ಚನ್ನಯ್ಯ ಸ್ವಾಮೀಜಿ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್.04 : ದೇವಸ್ಥಾನಗಳನ್ನು ಕಟ್ಟುವುದು ಎಷ್ಟು ಮುಖ್ಯವೋ ಪಾವಿತ್ರತೆ ಕಾಪಾಡವುದು ಅಷ್ಠೆ ಮುಖ್ಯ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹುಲ್ಲೂರು ಗ್ರಾಮದಲ್ಲಿ ದುರ್ಗಾಂಬಿಕಾದೇವಿಯ ಉತ್ಸವ ಮೂರ್ತಿ ಹಾಗೂ ದೇವಸ್ಥಾನದ ಕಳಸ ಪ್ರತಿಷ್ಠಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾಜ ಒಂದು ಕುಟುಂಬ ಬದಲಾವಣೆಯಾಗಬೇಕಾದರೆ ಮಹಿಳೆಯರು ಮುಂದೆ ಬರಬೇಕು. ಪುರುಷರು ದುಡಿಯುವ ಹಣ ಹೆಣ್ಣು ಮಕ್ಕಳ ಕೈಗೆ ಬರುವಂತಾಗಬೇಕು. ದೇವಸ್ಥಾನಕ್ಕೆ ಹೋದರೆ ಮನಸ್ಸಿಗೆ ಶಾಂತಿ ಸಮಾಧಾನ ಸಿಗುತ್ತದೆ. ಮಠ
ಮಂದಿರ, ಚರ್ಚ್, ಮಸೀದಿ ದೇಶಕ್ಕೆ ಬೇಕು. ದೇವಸ್ಥಾನ ಜೀರ್ಣೋದ್ದಾರವಾದಂತೆ ಮನುಷ್ಯನ ಜೀವನ ಕೂಡ ಜೀರ್ಣೋದ್ದಾರವಾಗಬೇಕು ಎಂದು ತಿಳಿಸಿದರು.
ದಾರಿದ್ರ್ಯ ನಿವಾರಣೆಯಾಗಬೇಕಾದರೆ ಮಕ್ಕಳಿಗೆ ಶಿಕ್ಷಣ ಬೇಕು. ಎಲ್ಲಿಯವರೆಗೂ ಜೀವನದಲ್ಲಿ ಬದಲಾವಣೆಯಾಗುವುದಿಲ್ಲವೋ ಅಲ್ಲಿಯವರೆಗೂ ಗೌರವ ಸಿಗುವುದಿಲ್ಲ. ಜೀವನದಲ್ಲಿ ಸುಖವಾಗಿರಬೇಕಾದರೆ ಕಷ್ಟ ಪಡಬೇಕು ಎಂದು ಹುಲ್ಲೂರು ಗ್ರಾಮಸ್ಥರಿಗೆ ಹೇಳಿದರು.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ಅಯೋಧ್ಯೆಯಲ್ಲಿ ರಾಮ ಮಂದಿರ ಅಬುದಾಬಿಯಲ್ಲಿ ಹಿಂದೂ ದೇವಾಲಯವಾಗಿದೆ. ಸರ್ಕಾರದ ಹಣದಿಂದ ದೇವಸ್ಥಾನ ನಿರ್ಮಾಣವಾಗುವುದಕ್ಕಿಂತಲೂ ಮಿಗಿಲಾಗಿ ಭಕ್ತರು ನೀಡುವ ಹಣದಿಂದ ದೇವಾಲಯಗಳಾಗುತ್ತಿರುವುದು ಸಂತಸದ ಸಂಗತಿ. ದೇವಸ್ಥಾನ ಕಟ್ಟುವುದರ ಜೊತೆ ಮಕ್ಕಳಿಗೆ ಶಿಕ್ಷಣ ಕೊಡಿಸಿ. ಸಂವಿಧಾನದಡಿ ಎಲ್ಲರಿಗೂ ಸಮಾನವಾದ ಹಕ್ಕಿದೆ. ಪ್ರಯೋಜನ ಪಡೆದುಕೊಳ್ಳಬೇಕಷ್ಟೆ ಎಂದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡುತ್ತ ಜನಾಂಗದ ಹೆಸರೇಳಿಕೊಂಡು ಬೇಳೆ ಬೇಯಿಸಿಕೊಳ್ಳುವವರು ಜಾಸ್ತಿಯಿದ್ದಾರೆ. ರಾಜಕಾರಣದಲ್ಲಿ ಅಧಿಕಾರದಲ್ಲಿದ್ದಾಗ ಜನಾಂಗಕ್ಕೆ ಕಿಂಚಿತ್ತಾದರೂ ಸಹಾಯವಾಗುವಂತ ಕೆಲಸವಾಗಬೇಕು. ಸಮಾಜದ ಹೆಸರಿನಲ್ಲಿ ಸಿಕ್ಕ ಅಧಿಕಾರವನ್ನು ಸಮಾಜಕ್ಕೆ ಅರ್ಪಿಸಬೇಕು. ಜನಾಂಗದ ಗೌರವ ಕಳೆಯುವ ಕೆಲಸ ಮಾಡಬಾರದು. ಬೇರೆ ಜನಾಂದವರೊಂದಿಗೆ ಪ್ರೀತಿ ಸಹಭಾಳ್ವೆಯಿಂದ ಬದುಕಬೇಕು ಎಂದು ಹೇಳಿದರು.
ಒಳ್ಳೆಯ ರೀತಿಯಿಂದ ಏನು ಬೇಕಾದರೂ ಸಾಧನೆ ಮಾಡಬಹುದು. ಪ್ರೀತಿಯಿಂದ ಇದ್ದರೆ ಯಾರು ಯಾರನ್ನು ದ್ವೇಷಿಸುವುದಿಲ್ಲ. ಎಲ್ಲರೊಳಗೊಂದಾಗಿ ಬದುಕುವುದನ್ನು ಕಲಿಯಬೇಕು. ಅದಕ್ಕಾಗಿ ಸರಿಯಾದ ಮಾರ್ಗದಲ್ಲಿ ಸಾಗಬೇಕು. ಬಡತನವಿದೆಯೆಂದು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬೇಡಿ. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಎಲ್ಲಾ ಜಾತಿ ಧರ್ಮದವರಿಗೂ ಸಮಾನತೆ ಕಲ್ಪಿಸಿದ್ದಾರೆ. ಸದುಪಯೋಗಪಡಿಸಿಕೊಳ್ಳಿ ಎಂದು ಹುಲ್ಲೂರು ಗ್ರಾಮಸ್ಥರಿಗೆ ಕರೆ ನೀಡಿದರು.
ಹುಲ್ಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜಪ್ಪ ಪಿ. ಸದಸ್ಯರುಗಳಾದ ರವಿಕುಮಾರ್, ದುಗ್ಗಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಸಮಾದಪ್ಪ, ಕಲ್ಲೇಶಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹುಲ್ಲೂರು ಕೃಷ್ಣಪ್ಪ, ಹುಲ್ಲೂರು ಕುಮಾರ್ ವೇದಿಕೆಯಲ್ಲಿದ್ದರು.