ದೇಶದ ಸಾಂಸ್ಕೃತಿಕ ರಾಯಭಾರಿಗಳಾದ ಕಲಾವಿದರು ಮೂಲೆಗುಂಪು : ಕೆ.ಪಿ.ಎಮ್.ಗಣೇಶಯ್ಯ ಬೇಸರ
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 08 : ಕಲಾವಿದರು ದೇಶದ ಸಾಂಸ್ಕೃತಿಕ ರಾಯಭಾರಿಗಳಾಗಿದ್ದಾರೆ. ಕಲಾವಿದರಿಗೆ ಯಾವುದೇ ಸೌಲಭ್ಯ ಇಲ್ಲದೆ, ಕಲೆಯನ್ನು ನಂಬಿ ಬದುಕಲಾಗದೆ, ಅನ್ಯ ದುಡಿಮೆಯ ಮಾರ್ಗ ಕಂಡುಕೊಂಡು ಬದುಕು ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಸಂಪ್ರದಾಯಸ್ಥ ಕಲಾವಿದರು ಮೂಲೆಗುಂಪಾಗಿದ್ದಾರೆ ಎಂದು ರಂಗ ನಿರ್ದೇಶಕ ಕೆ.ಪಿ.ಎಮ್.ಗಣೇಶಯ್ಯ ಬೇಸರ ವ್ಯಕ್ತಪಡಿಸಿದರು.
ನಗರದ ಒನಕೆ ಓಬವ್ವ ಸ್ಟೇಡಿಯಂ ಮುಂಭಾಗದ ಆವರಣದಲ್ಲಿ ಶನಿವಾರ ಸಂಜೆ ಶ್ರೀ ಸಿರಿಸಂಪಿಗೆ ಸಾಂಸ್ಕೃತಿಕ ಶೈಕ್ಷಣಿಕ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸಾಂಸ್ಕೃತಿಕ ಸೌರಭ ಹಾಗೂ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನಿಮಿತ್ತ ನೃತ್ಯ, ಗಾಂಧಾರ ವಿದ್ಯೆ, ಜನಪದ, ಸುಗಮ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲಾವಿದರಿಗೆ, ಸಂಘ ಸಂಸ್ಥೆಗಳಿಗೆ ತ್ವರಿತವಾಗಿ ಅನುದಾನಗಳನ್ನು ಬಿಡುಗಡೆಗೊಳಿಸಬೇಕು. ಕಲಾವಿದರಿಗೆ ಹಾಗೂ ಕಲೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದ ಹಾಸ್ಯಸಾಹಿತಿ, ನಿವೃತ್ತ ಶಿಕ್ಷಕ ಪರಮೇಶ್ವರಪ್ಪ ಕುದುರಿ ಮಾತನಾಡಿ ಪ್ರತಿಭೆಗಳು ಶೂನ್ಯವಿದ್ದರೂ ಪ್ರಭಾವದಿಂದ ದೊಡ್ಡವರಾದವರು ಬಹಳಷ್ಟು ಜನ ಇದ್ದಾರೆ ಅದರಲ್ಲಿ ಪ್ರತಿಭಾವಂತರನ್ನು ಹುಡುಕಿ ಪುರಸ್ಕರಿಸುವುದು ಬಹಳ ವಿರಳ. ಶ್ರೀಸಿರಿ ಸಂಪಿಗೆ ಸಂಸ್ಥೆ ಪ್ರತಿವರ್ಷ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮವಾದ ಕೆಲಸ ಎಂದರು.
ಪ್ರಾಸ್ತಾವಿಕ ನುಡಿಗಳನ್ನು ಸಂಸ್ಥೆಯ ಕಾರ್ಯದರ್ಶಿ ಡಿ .ಶ್ರೀಕುಮಾರ್ ಮಾತನಾಡಿ ಕಲೆಯನ್ನೇ ನಂಬಿ ಜೀವನ ನಿರ್ವಹಿಸಲು ಸಾಧ್ಯವಿಲ್ಲ. ಜೀವನದಲ್ಲಿ ಬದುಕಲು ಕಲೆ ಬೇಕು ಬಾಲಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಕೊಟ್ಟು ಹೊಸ ಪ್ರತಿಭೆಗಳನ್ನು ಹುಡುಕುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಕಲೆ ಉಳಿಯಬೇಕೆಂದರೆ ಕಲಾವಿದರು ಬೇಕು ಎಂದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿಂಧು. ಶಾಸ್ತ್ರೀಯ ನೃತ್ಯ, ಜನಪದ ನೃತ್ಯ ಹರ್ಷಿಣಿ, ಗಾನಶ್ರೀ ಜನಪದ ನೃತ್ಯ. ಶ್ರೀಮತಿ ಕೆ ಪವಿತ್ರ ಮತ್ತು ತಂಡದವರಿಂದ ಸುಗಮ ಸಂಗೀತ ಪವನ್ ಕುಮಾರ್ ಮತ್ತು ಸಂಗಡಿಗರಿಂದ ಜನಪದ ಗೀತೆ, ವಿಶಿಷ್ಟ ಬಾಲ ಪ್ರತಿಭೆ ಹೊಂದಿರುವ ಮದಕರಿಪುರದ ಸೈಯದ್ ಅಯಾನ್ ಅವರಿಂದ ಸಂವಿಧಾನ ಪೀಠಿಕೆ , ರಾಜ್ಯದ ಮುಖ್ಯಮಂತ್ರಿ, ವಿಧಾನಸಭಾ ಕ್ಷೇತ್ರಗಳು ಗ್ರಾಮಗಳು. ನದಿಗಳು ಹಾಗೂ ನಕ್ಷತ್ರಗಳನ್ನು ಯಾವುದನ್ನೂ ನೋಡಿಕೊಳ್ಳದೆ ನೆನಪಿನ ಶಕ್ತಿಯಿಂದ ನಿರರ್ಗಳವಾಗಿ ಮಾತನಾಡಿದರು. ಬಾಲಕ ಹನೀಶ್ ಪಾಟೀಲ್ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ವಿವಿಧ ವಸ್ತುಗಳನ್ನು ಗುರುತಿಸುವ ಕಲೆಯನ್ನು ಪ್ರದರ್ಶಿಸಿದರು. ಎಲ್ಲಾ ಮಕ್ಕಳಿಗೂ ಸನ್ಮಾನಿಸಲಾಯಿತು. 2024 ನೇ ಸಾಲಿನ ಶ್ರೀಸಿರಿ ಸಂಪಿಗೆ ಪುರಸ್ಕಾರವನ್ನು ಗಾಯಕ ಜನಪದ ಕಲಾವಿದ ಗೌಸ್ ಪೀರ್ ಇವರಿಗೆ ನೀಡಿ ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ ಮೋಹಿದ್ದಿನ್ ಖಾನ್ ರವರಿಗೆ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಪೋಷಕರಾದ ಶ್ರೀಮತಿ ಕೆಂಚಮ್ಮ ಆರಕ್ಷಕ ಇಲಾಖೆಯ ಬಾಬು, ಯೋಗ ಶಿಕ್ಷಕಿ ಶ್ರೀಮತಿ ಹೇಮಲತಾ, ಜೈ ಭೀಮ್ ಕಾರ್ಯಕಾರಿ ಸಮಿತಿಯ ಮುರುಗನ್, ಶಿಲ್ಪಿ ಶಿವಕುಮಾರ್ ಉಪಸ್ಥಿತರಿದ್ದರು. ಪವನ್ ಕುಮಾರ್ ಪ್ರಾರ್ಥಿಸಿದರು. ಸಂಸ್ಥೆಯ ನಿರ್ದೇಶಕರಾದ ಕೆ.ಪವಿತ್ರ ಸ್ವಾಗತಿಸಿದರು. ಡಿ ಶ್ರೀಕುಮಾರ್ ಕಾರ್ಯಕ್ರಮ ಸಂಯೋಜಿಸಿ, ನಿರೂಪಿಸಿ, ವಂದಿಸಿದರು.