For the best experience, open
https://m.suddione.com
on your mobile browser.
Advertisement

ಗ್ರಾಹಕರ ಮೋಸ ಹಾಗೂ ಶೋಷಣೆ ತಪ್ಪಿಸಲು ಕೃತಕ ಬುದ್ಧಿಮತ್ತೆ ಸಹಾಯಕ : ಜಿಲ್ಲಾ ನ್ಯಾಯಾಧೀಶೆ ಕೆ.ಬಿ.ಗೀತಾ ಅಭಿಮತ

06:55 PM Mar 19, 2024 IST | suddionenews
ಗ್ರಾಹಕರ ಮೋಸ ಹಾಗೂ ಶೋಷಣೆ ತಪ್ಪಿಸಲು ಕೃತಕ ಬುದ್ಧಿಮತ್ತೆ ಸಹಾಯಕ   ಜಿಲ್ಲಾ ನ್ಯಾಯಾಧೀಶೆ ಕೆ ಬಿ ಗೀತಾ ಅಭಿಮತ
Advertisement

ಚಿತ್ರದುರ್ಗ. ಮಾ.19:  ಇಂದಿನ ತಂತ್ರಜ್ಞಾನ ಯುಗದಲ್ಲಿ ಆನ್‍ಲೈನ್ ಮೂಲಕ ಗ್ರಾಹಕರಿಗೆ ವಂಚನೆಯಾಗುತ್ತಿದೆ. ಇದೇ ನಿಟ್ಟಿನಲ್ಲಿ ಗ್ರಾಹಕರಿಗೆ ಉಂಟಾಗುವ ಮೋಸ ಹಾಗೂ ಶೋಷಣೆ ತಪ್ಪಿಸಲು ಕೃತಕ ಬುದ್ಧಿಮತ್ತೆ ಸಹಾಯಕವಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ. ಗೀತಾ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement
Advertisement

ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ  ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಅಮೇರಿಕಾದ ಮಾಜಿ ರಾಷ್ಟ್ರಾಧ್ಯಕ್ಷ ಜಾನ್ ಎಫ್. ಕೆನಡಿ 1962 ಮಾರ್ಚ್ 15 ರಂದು ಅಮೇರಿಕಾದ ಸಂಸತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಗ್ರಾಹಕರ ಹಕ್ಕುಗಳ ಕುರಿತು ಧ್ವನಿ ಎತ್ತಿದರು. ಇದರ ನೆನಪಿಗಾಗಿ 1983 ರಿಂದ ಪ್ರತಿ ವರ್ಷ ಮಾರ್ಚ್ 15 ರಂದು ವಿಶ್ವ ಗ್ರಾಹಕರ ದಿನಾಚರಣೆ ಆಚರಿಸಲಾಗುತ್ತದೆ. ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಹಾಗೂ ವಿಶ್ವ ಗ್ರಾಹಕರ ದಿನಾಚರಣೆ ಎರಡು ಬೇರೆ ಬೇರೆಯಾಗಿವೆ. ಪ್ರತಿ ವರ್ಷ ವಿಶ್ವ ಗ್ರಾಹಕರ ದಿನದಂದು ಒಂದು ಧ್ಯೇಯ ವಾಕ್ಯ ಇರುತ್ತದೆ.

Advertisement
Advertisement

ಈ ಬಾರಿ ಧ್ಯೇಯ ವಾಕ್ಯ “ಗ್ರಾಹಕರಿಗಾಗಿ ನ್ಯಾಯ ಹಾಗೂ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ” ಎಂಬುದಾಗಿದೆ. ಗ್ರಾಹಕರಿಗೆ ಆಗುವ ಮೋಸ, ಶೋಷಣೆ ತಪ್ಪಿಸುವ ಸಲುವಾಗಿ ಕೃತಕ ಬುದ್ಧಿಮತ್ತೆಯ ಬಳಕೆ ಎಲ್ಲೆಡೆ ಹೆಚ್ಚಾಗಲಿದೆ. ಗ್ರಾಹಕರಿಗೆ ಉತ್ತಮ ಸರಕು ಸೇವೆಗಳು ದೊರಕಬೇಕು. ಅನ್ಯಾಯ ಹಾಗೂ ತೊಂದರೆ ಉಂಟಾಗಬಾರದು. ಗ್ರಾಹಕರ ಹಿತರಕ್ಷಣೆಯೇ ಗ್ರಾಹಕರ ಕಾಯ್ದೆಯ ಮುಖ್ಯ ಅಂಶವಾಗಿದೆ. ಈ ಕಾರಣಕ್ಕಾಗಿ ದೇಶದಲ್ಲಿ ಗ್ರಾಹಕರ ಹಿತರಕ್ಷೆಣೆಯ ಕಾಯ್ದೆ ಜಾರಿ ಮಾಡಲಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಸಣ್ಣ ಪುಟ್ಟ ವಸ್ತುಗಳು, ತರಕಾರಿ ಖರೀದಿಸುವ ಸಮಯದಲ್ಲಿ ಚೌಕಾಸಿ ಮಾಡುತ್ತೇವೆ. ಆದರೆ ದೊಡ್ಡ ದೊಡ್ಡ ಉತ್ಪನ್ನಗಳ ಖರೀದಿಸುವಾಗ ಮೋಸ ಹೋಗುತ್ತೇವೆ. ಇತ್ತೀಚೆಗೆ ಸೈಬರ್ ವಂಚನೆಗಳು ಹೆಚ್ಚಾಗುತ್ತಿವೆ. ಆನ್‍ಲೈನ್ ಮೂಲಕ ವಸ್ತುಗಳನ್ನು ಖರೀದಿಸುವಾಗ ಹೆಚ್ಚು ಜಾಗರೂಕರಾಗಿರಬೇಕು. ದುಡಿದು ಗಳಿಸುವ ಪ್ರತಿಯೊಂದು ರೂಪಾಯಿಗೂ ಬೆಲೆಯಿದೆ. ವಸ್ತುಗಳನ್ನು ಖರೀದಿಸಿ ಮೊಸ ಹೋದರೆ ಶ್ರಮ ವ್ಯರ್ಥವಾದಂತೆ. ಮೊಸಹೋದ ಗ್ರಾಹಕರಿಗೆ ನೆರವು ನೀಡಲು ಜಿಲ್ಲಾ ಹಂತದಲ್ಲಿ ಜಿಲ್ಲಾ ಗ್ರಾಹರ ವೇದಿಕೆಗಳಿವೆ. ಕೊಂಡ ವಸ್ತುಗಳಿಗೆ ತಪ್ಪದೇ ಬಿಲ್ ಪಡೆಯಬೇಕು ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ. ವಿಜಯ್ ಮಾತನಾಡಿ, ತಂತ್ರಜ್ಞಾನದ ಈ ಯುಗದಲ್ಲಿ ಯಾವುದೇ ವಸ್ತುವನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು, ಕೊಂಡುಕೊಳ್ಳಬಹುದು. ಇ-ಕಾಮರ್ಸ್ ವಹಿವಾಟು ಹೆಚ್ಚಾಗಿದೆ. ಹಲವಾರು ಆನ್‍ಲೈನ್ ಪ್ಲಾಟ್ ಫಾರಂಗಳು ಆನ್‍ಲೈನ್ ಮೂಲಕ ಹಣ ಪಡೆದು ವಸ್ತುಗಳನ್ನು ಮನೆಬಾಗಿಲಿಗೆ ಮುಟ್ಟಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಗ್ರಾಹಕರ ಹಕ್ಕುಗಳಿಗೆ ಚ್ಯುತಿ ಬರಬಾರದು. ವಸ್ತುಗಳನ್ನು ಕೊಳ್ಳುವಾಗ ಉತ್ಪನ್ನದ ಗುಣಮಟ್ಟವನ್ನು ಪರೀಕ್ಷಿಸಿ ತಿಳಿದು ನಂತರ ವ್ಯವಹರಿಸಬೇಕು ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ. ತಿಪ್ಪೇಸ್ವಾಮಿ ಗ್ರಾಹಕರ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು. ರಂಗನಿರ್ದೇಶಕ  ಕೆ.ಪಿ.ಎಂ. ಗಣೇಶಯ್ಯ ಕಾರ್ಯಕ್ರಮ ನಿರೂಪಿಸಿದರು. ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ  ಕೆ.ಪಿ. ಮಧುಸೂಧನ್ ಸ್ವಾಗತಿಸಿದರು.

ಕಾನೂನು ಮಾಪನಾ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎಂ.ಗುರುಪ್ರಸಾದ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯ ನಿರ್ದೇಶಕ ಎಸ್.ಕೆ. ಮಲ್ಲಿಕಾರ್ಜುನ್, ಕಂದಾಯ ಇಲಾಖೆ ಶಿರಸ್ತೆದಾರ ವೀರಣ್ಣ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.

Advertisement
Tags :
Advertisement