1987 ರಲ್ಲಿ ಚಿತ್ರದುರ್ಗಕ್ಕೆ ಬಂದಿದ್ದ ಅಪರ್ಣಾ : ನಿರೂಪಕಿಯ ಮುಂದೆಯೇ ನಿರೂಪಣೆ ಮಾಡಿದ್ದ ಆರ್.ಶೇಷಣ್ಣ ಕುಮಾರ್ : ಅಂದಿನ ದಿನ ನೆನಪು ಮಾಡಿಕೊಂಡು ಅವರು ಹೇಳಿದ್ದೇನು..?
ಸುದ್ದಿಒನ್, ಚಿತ್ರದುರ್ಗ, ಜುಲೈ. 12 : ಇಂದು ಸುಮಧುರ ಕಂಠದ ಅಪರ್ಣಾ ನೆನಪು ಮಾತ್ರ. ಆದರೆ ಅವರೊಟ್ಟಿಗೆ ಕಳೆದ ನೆನಪುಗಳು ಅದೆಷ್ಟೋ ಜನರಿಗೆ ಈಗಲು ಹಚ್ಚ ಹಸಿರಾಗಿವೆ. ಚಿತ್ರದುರ್ಗದ ಸಮಾಜ ಸೇವಕ, ರಂಗಕರ್ಮಿ ಆರ್.ಶೇಷಣ್ಣ ಕುಮಾರ್ ಅವರು 1987 ರಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಿತ್ರದುರ್ಗಕ್ಕೆ ಬಂದಿದ್ದ ಅಪರ್ಣಾ ಅವರನ್ನು ನೆನೆಪು ಮಾಡಿಕೊಂಡು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು ಹೀಗೆ....
'ಸ್ನೇಹಿತರೇ.,1987-88 ರ ಕಾಲದ ನಮ್ಮ ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಆವರಣದ ವೇದಿಕೆಯಲ್ಲಿರುವ ಭಾವಚಿತ್ರವಿದು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಜರುಗಿದ ಅದ್ದೂರಿ ಸಾರ್ವಜನಿಕ ಕಾರ್ಯಕ್ರಮವಿದು.
ವೇದಿಕೆಯಲ್ಲಿ ಆಸೀನರಾಗಿರುವವರು ಕನ್ನಡ ಚಲನಚಿತ್ರ ರಂಗದ ಖ್ಯಾತನಟರಾಗಿದ್ದ ಕಾಶೀನಾಥ್ ರವರು, ಸುರೇಶ್ ಹೆಬ್ಳೀಕರ್ ರವರು, ಅಪರ್ಣಾರವರು, ವನಿತಾವಾಸುರವರು ಹಾಗೂ ಸ್ಥಳೀಯ ಗಣ್ಯರು.
(ಎಡದಿಂದ ಬಲಕ್ಕೆ : ಅಪರ್ಣಾ, ಕಾಶೀನಾಥ್, ವನಿತಾವಾಸು ಮತ್ತು ಅಂದಿನ ಕಾರ್ಯಕ್ರಮ ನಿರೂಪಣೆ ಮಾಡಿದ್ದ ಆರ್. ಆರ್.ಶೇಷಣ್ಣ ಕುಮಾರ್ )
ಆಗಿನ್ನೂ ಅಪರ್ಣಾರವರು ಕನ್ನಡ ಚಲನಚಿತ್ರರಂಗಕ್ಕೆ ಪ್ರವೇಶಿಸಿದ್ದ ಪ್ರಾರಂಭದ ದಿನಗಳವು. ಬಹುಶಃ ಆಗಿನ್ನೂ ಕು.ಅಪರ್ಣಾರವರು ನಿರೂಪಕರಾಗಿರಲಿಲ್ಲ. ಬಟ್ ಸ್ಥಳೀಯವಾಗಿ ಅಂದಿನ ದಿನಮಾನಗಳಲ್ಲಿ ಹಲವಾರು ಕಾರ್ಯಕ್ರಮಗಳ ಸಂಘಟನೆಯ ಜೊತೆ ಜೊತೆಗೆ ನಿರೂಪಣೆಯ ಜವಾಬ್ದಾರಿಗಳಲ್ಲಿಯೂ ಸ್ವ-ಇಚ್ಚೆಯಿಂದ ಆಗಾಗ ತೊಡಗಿಸಿಕೊಳ್ಳುವುದು ನನ್ನ ಹವ್ಯಾಸಗಳಲ್ಲೊಂದಾಗಿತ್ತು. ಸಹಜವಾಗಿಯೇ ಆಸಕ್ತ ಸಾರ್ವಜನಿಕರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದ ಆ ದಿನದ ರಾಜ್ಯೋತ್ಸವ ಕಾರ್ಯಕ್ರಮದ ನಿರೂಪಣಾ ಜವಾಬ್ದಾರಿಯನ್ನೂ ಸಹ ಸಂಘಟಕರು ಮಾಮೂಲಿನಂತೆ ನನಗೇ ವಹಿಸಿದ್ದರು.
ವಿಶೇಷವೆಂದರೆ ಅಂದಿನ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುವ ಕಾರಣಕ್ಕಾಗಿಯೇ ನಾನು ಪ್ರಪ್ರಥಮ ಬಾರಿಗೆ ಫುಲ್ ಹಸಿರು ಬಣ್ಣದ ಷರ್ಟಿನ ಬಟ್ಟೆಯನ್ನು ಜೊತೆಗೆ ಕಪ್ಪು ಬಣ್ಣದ ಪ್ಯಾಂಟಿನ ಬಟ್ಟೆಯನ್ನೂ ಕೊಂಡುಕೊಂಡು ನಮ್ಮೂರಿನ ನೆಚ್ಚಿನ ಫೇಮಸ್ ಶಾಲಿಮಾರ್ ಟೈಲರ್ ಬಾಬಣ್ಣನವರತ್ರ ವಿನಂತಿಯ ಮೇರೆಗೆ ಎರಡು ದಿನಗಳ ಅಲ್ಪಾವದಿಯಲ್ಲಿ ಸ್ಪೆಷಲ್ಲಾಗಿ ಸ್ಟಿಚ್ ಮಾಡಿಸಿಕೊಂಡಿದ್ದ ವಿಷಯ ಅಂದು ಸ್ನೇಹವಲಯದ ಚರ್ಚೆಗೆ ಕಾರಣವಾಗಿತ್ತು. ಫಿಲಂ ಆಕ್ಟರ್ಸ್ ಗಳೆದುರು ನಿರೂಪಕ ಕಮ್ ಮುಖ್ಯ ಸಂಘಟಿಕರಲ್ಲಿ ಒಬ್ಬನಾಗಿದ್ದ ನನಗೆ ಅವರೆದುರು ಟಿಪ್ ಟಾಪ್ ಇರಬೇಕೆಂಬ ಸದುದ್ದೇಶವಿರುವ ನೆನಪು ಇಂದಿಗೂ ನೆನಪಾಗೇ ಉಳಿದಿದೆ.
ಅಂದಹಾಗೆ....ಇತ್ತೀಚೆಗೆ ಶ್ರೀ ಮುರುಘಾಮಠದ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ನಿಮಿತ್ತ ಶ್ರೀಮಠಕ್ಕೆ ಶ್ರೀಮತಿ ಅಪರ್ಣಾರವರು ಆಗಮಿಸಿದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ನನ್ನ ವಿವರವನ್ನೇಳಿ ಪರಿಚಯಿಸಿಕೊಂಡ ನಂತರ 1987 ರ ಅವರು ಅಂದು ಕುಮಾರಿ ಅಪರ್ಣಾರವರಾಗಿ ಕಾಶೀನಾಥ್ ಹಾಗೂ ವನಿತಾವಾಸುರವರೊಂದಿಗೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೇದಿಕೆಯಲ್ಲಿ ಆಸೀನರಾಗಿದ್ದ, ಜೊತೆಗೆ ನಾನೂ ನಿರೂಪಕನಾಗಿದ್ದ ಫೋಟೋ(ನನ್ನ ಮೊಬೈಲ್ನಲ್ಲಿ ಶೇಖರಿಸಿಟ್ಟುಕೊಂಡ)ವನ್ನು ತೋರಿಸಿ ನಂತರ ಹಾಗೆಯೇ ನಿರೂಪಣೆಗಾಗಿಯೇ ನಾನು ಹಸಿರು/ಕಪ್ಪು ಬಣ್ಣದ ವಿಶೇಷ ಡ್ರಸ್ಸಿನ ವಿಚಾರವನ್ನೂ ಅವರೊಂದಿಗೆ ಹಂಚಿಕೊಂಡಾಗ ಅವರು ತುಂಬಾನೇ ಖುಷಿಯಾಗಿ, ಸುಮಾರು 35 ವರ್ಷಗಳ ಹಿಂದಿನ ಫೋಟೋವನ್ನು ಹೇಗೆ ಕ್ರೂಡೀಕರಿಸಿಟ್ಟಿದ್ದೀರೆಂದು ನನ್ನನ್ನು ಪ್ರಶ್ನಿಸಿ ಆಶ್ಚರ್ಯ ವ್ಯಕ್ತಪಡಿಸಿದ್ದಲ್ಲದೇ, ತಮ್ಮ ಆತ್ಮೀಯರೆಲ್ಲರಿಗೂ ಈ ಫೋಟೋವನ್ನು ತೋರಿಸುವ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಲ್ಲದೇ ಇದಕಾಗೀ ನನಗೆ ಸ್ಪೆಷಲ್ ಥ್ಯಾಂಕ್ಸ್ ಅಂತಾ.....ಹೇಳುವ ಮೂಲಕ ನನಗೆ ವಿಶೇಷ ದನ್ಯವಾದಗಳನ್ನು ಸಲ್ಲಿಸಿದ್ದದ್ದೂ ಈಗಲೂ ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಉಳಿದಿದೆ.
ಬಹುಶಃ ಸಹೃದಯೀ ಕನ್ನಡಿಗರೆಲ್ಲರ ಬಾಯಲ್ಲಿ "ಅವರಿನ್ನೂ ಬದುಕಿರಬೇಕಿತ್ತು" ಎಂದೇಳುವ ಮೂಲಕವೇ ಅವರ ಅಪಾರ ಅಭಿಮಾನಿಗಳು ಅವರ ನಿಧನಕ್ಕೆ ತಮ್ಮ ಅತೀವ ದುಃಖದೊಂದಿಗೆ ಸಂತಾಪ ವ್ಯಕ್ತಪಡಿಸುತ್ತಿರುವುದು ಅವರಿಗಿದ್ದ ಅಭಿಮಾನಿಗಳು ಅವರ ಮೇಲಿಟ್ಟಿರುವ ಅತೀವ ಅಭಿಮಾನಕ್ಕೆ ಸಾಂಕ್ಷಿ ಎಂದರೆ ತಪ್ಪಾಗಲಾರದು.
ಎನಿಹೌ....ಇನ್ನೂ ಬಾಳಿ ಬದುಕಬೇಕಿದ್ದ ಸಹೃದಯೀ ಕನ್ನಡ ಕಲಾವಿದೆ ಇಂದು ನಮ್ಮನ್ನಗಲಿರುವುದು ಅತ್ಯಂತ ನೋವಿನ ಸಂಗತಿ.ಜಸ್ಟ್ ಅವರೊಂದಿಗೆ ಕಳೆದ ಹಳೆಯ ನೆನಪುಗಳನ್ನು ತಮ್ಮೆಲ್ಲರೊಂದಿಗಿಂದು ಹಂಚಿಕೊಂಡು ನಮ್ಮೂರಿನ ಅವೇ ನೆನಪುಗಳನ್ನು ಮೆಲುಕು ಹಾಕುವ ಮೂಲಕವೇ ಅವರಿಗೆ ಶ್ರದ್ದಾಂಜಲಿಯೊಡನೆ ಭಾವಪೂರ್ಣ ಅಂತಿಮ ನಮನಗಳು.
ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲೆಂದು ಭಗವಂತನಲ್ಲಿ ಪ್ರಾರ್ಥಿಸುವುದರೊಂದಿಗೆ..
ಅವರ ಅಭಿಮಾನಿಗಳಲ್ಲೊಬ್ಬನಾಗಿ..
-ಆರ್.ಶೇಷಣ್ಣ ಕುಮಾರ್ (ಎಲ್.ಐ.ಸಿ)
ಬ್ಯಾಂಕ್ ಕಾಲೋನಿ.
ಸಮಾಜಸೇವಕ. ಚಿತ್ರದುರ್ಗ
ಮೊಬೈಲ್ ಸಂಖ್ಯೆ : 7760379111