ಜಿಎಸ್ಟಿ ವಂಚನೆ ಆರೋಪ: ಚಿತ್ರದುರ್ಗ - ಹೊಳಲ್ಕೆರೆಯಲ್ಲಿ ತೆರಿಗೆ ಅಧಿಕಾರಿಗಳಿಂದ ದಾಳಿ
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 10 : ಜಿಎಸ್ಟಿ ಅಧಿಕಾರಿಗಳು ಚಿತ್ರದುರ್ಗ ಹಾಗೂ ಹೊಳಲ್ಕೆರೆಯಲ್ಲಿ ಕ್ಲಬ್ ಗಳ ಮೇಲೆ ದಾಳಿ ಮಾಡಿದ್ದಾರೆ. ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಎಲ್ಲಾ ಪರಿಶೀಲನೆಯ ಬಳಿಕ ದಾಖಲೆಗಳನ್ನು ಹಿಂತಿರುಗಿಸಿದ್ದಾರೆ.
ಸೂಕ್ತ ದಾಖಲೆಗಳೇ ಇಲ್ಲದೆ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಮಾಹಿತಿಯನ್ನು ಕಲೆ ಹಾಕಿದ್ದ ಜಿಎಸ್ ಟಿ ಅಧಿಕಾರಿಗಳು ಇಂದು ಚಿತ್ರದುರ್ಗದ 2, ಹೊಳಲ್ಕೆರೆಯ 4ಕ್ಲಬ್ ಗಳ ಮೇಲೆ ದಾಳಿ ನಡೆಸಿದ್ದಾರೆ. ವಾಣಿಜ್ಯ ವ್ಯವಹಾರಕ್ಕೆ ಸಂಬಂಧ ಪಟ್ಟಂತ ಯಾವುದೇ ಸರಿಯಾದ ದಾಖಲಾತಿಗಳು ಈ ಕ್ಲಬ್ ಮಾಲೀಕರ ಬಳಿ ಇರಲಿಲ್ಲ ಎನ್ನಲಾಗಿದೆ. ಹೀಗಾಗಿಯೇ ದಾಳಿ ನಡೆದಿದೆ ಎನ್ನಲಾಗಿದೆ.
ಜಿಎಸ್ಟಿ ಅಧಿಕಾರಿಗಳು ಬೆಂಗಳೂರಿನಿಂದ ಚಿತ್ರದುರ್ಗ ಹಾಗೂ ಹೊಳಲ್ಕೆರೆಗೆ ಆಗಮಿಸಿದ್ದರು. ದಾಳಿ ವೇಳೆ ದಾಖಲೆಗಳನ್ನು ವಶ ಪಡಿಸಿಕೊಂಡ ಅಧಿಕಾರಿಗಳು, ದಾಖಲೆ ಪರಿಶೀಲಿಸಿ ದಂಡ ವಿಧಿಸಲು ತೀರ್ಮಾನ ಮಾಡಿದ್ದಾರೆ ಎನ್ನಲಾಗುತ್ತಿದೆ.
ಈ ಸಂಬಂಧ ಚಿತ್ರದುರ್ಗ ಪೊಲೀಸ್ ಇಲಾಖೆಯಿಂದ ಜಿಎಸ್ಟಿ ಇಲಾಖೆಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಬಂದಿದ್ದ ಅಧಿಕಾರಿಗಳು 6 ಕ್ಲಬ್ ಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆಯೇ ಒಂದಷ್ಟು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಸದ್ಯ ಎಲ್ಲಾ ರೀತಿಯ ಪ್ರೊಸಿಜರ್ ಮುಗಿದಿದ್ದು, ದಾಖಲೆಗಳನ್ನು ವಾಪಾಸ್ ನೀಡಿದ್ದಾರೆ ಎನ್ನಲಾಗಿದೆ. ಆದರೆ ದಂಡ ವಿಧಿಸಿರುವ ಬಗ್ಗೆ ಅಧಿಕೃತವಾದ ಮಾಹಿತಿ ಇನ್ನು ಲಭ್ಯವಾಗಿಲ್ಲ. ಕ್ಲಬ್ ಗಳ ಮೇಲೆ ಯಾವ ರೀತಿಯ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಸಲಿದೆ.