ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಖಂಡ ಕರ್ನಾಟಕ ರೈತ ಸಂಘ ಪ್ರತಿಭಟನೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.14 : ಸಕಾಲಕ್ಕೆ ಮಳೆಯಿಲ್ಲದೆ ರೈತರು ಸಂಕಷ್ಟದಲ್ಲಿರುವುದರಿಂದ ಎಲ್ಲಾ ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ರೈತರ ಸಾಲ ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಮೆಕ್ಕೆಜೋಳ, ಈರುಳ್ಳಿ, ರಾಗಿ, ಹತ್ತಿ ಹಾಗೂ ದ್ವಿದಳ ಧಾನ್ಯಗಳು ನಾಶವಾಗಿರುವುದರಿಂದ ಎಲ್ಲಾ ಬೆಳೆಗಳಿಗೆ ಎಕರೆಗೆ ಇಪ್ಪತ್ತೈದು ಸಾವಿರ ರೂ.ಗಳ ಪರಿಹಾರ ನೀಡಬೇಕು. ರೈತರ ಪಂಪ್‍ಸೆಟ್‍ನ ಟಿಸಿ.ಗಳು ಸುಟ್ಟರೆ ಮೊದಲು ಸರ್ಕಾರ ಉಚಿತವಾಗಿ ಕೊಡುತ್ತಿತ್ತು. ಈಗಿನ ಸರ್ಕಾರ ಟಿಸಿ.ಗಳು ಸುಟ್ಟರೆ ರೈತರೆ ರಿಪೇರಿ ಮಾಡಿಸಿಕೊಳ್ಳುವಂತೆ ಆದೇಶಿಸಿದೆ. ಈ ಕ್ರಮವನ್ನು ಹಿಂದಕ್ಕೆ ಪಡೆಯಬೇಕು.
ಎಲ್ಲಾ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿ ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು.
ಪ್ರತಿ ಗ್ರಾಮಗಳಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಆರಂಭಿಸಬೇಕು.
ಬಸ್‍ನಲ್ಲಿ ಓಡಾಡುವ ಎಲ್ಲಾ ಮಕ್ಕಳಿಗೆ ಉಚಿತ ಬಸ್ ಪಾಸ್ ವಿತರಿಸಬೇಕು.
ಸ್ಪಿಂಕ್ಲರ್ ಸೆಟ್‍ಗಳಿಗೆ ನಾಲ್ಕು ಸಾವಿರ ರೂ. ನಿಗಧಿಪಡಿಸಿ ರೈತರಿಗೆ ಗಾಯದ ಮೇಲೆ ಬರೆ ಎಳೆಯುತ್ತಿರುವ ಸರ್ಕಾರ ತನ್ನ ನಿರ್ಧಾರ ಕೈಬಿಟ್ಟು ರೈತರ ನೆರವಿಗೆ ಧಾವಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದವರು ಅಪರ ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಎಲ್.ಬಸವರಾಜಪ್ಪ, ಎಸ್.ಎಂ.ಶಿವಕುಮಾರ್, ಎಂ.ಸಿದ್ದಪ್ಪ, ಜಿ.ಪರಮೇಶ್ವರಪ್ಪ, ಗೌಡ್ರು ಪರಮಶಿವಣ್ಣ, ನಿರಂಜನಮೂರ್ತಿ, ವೀರಣ್ಣ, ಆರ್.ಶಾಂತಕುಮಾರ್, ಗಿರೀಶ್‍ರೆಡ್ಡಿ, ಎ.ಎಸ್.ಗುರುಸಿದ್ದಪ್ಪ, ಕುಬೇರಮ್ಮ, ಕುರುಬರಹಳ್ಳಿ ಶಿವಣ್ಣ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.