ಮುಂಜಾಗ್ರತೆ ಹಾಗೂ ಉತ್ತಮ ಜೀವನಶೈಲಿಯಿಂದ ಏಡ್ಸ್ ತಡೆಗಟ್ಟಲು ಸಾಧ್ಯ : ಡಾ.ಎಸ್.ಪಿ.ರವೀಂದ್ರ
ಚಿತ್ರದುರ್ಗ. ಡಿ.01: ಸಾಮಾಜಿಕ ಪಿಡುಗಾಗಿರುವ ಏಡ್ಸ್ ಕಾಯಿಲೆಯನ್ನು ಮುಂಜಾಗ್ರತೆ ಹಾಗೂ ಉತ್ತಮ ಜೀವನಶೈಲಿಯಿಂದ ಮಾತ್ರ ಏಡ್ಸ್ ಅನ್ನು ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಜಿ.ಆರ್.ಹಳ್ಳಿಯ ಜ್ಞಾನಗಂಗೋತ್ರಿ ಸ್ನಾತಕೋತ್ತರ ಕೇಂದ್ರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕ, ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ದಾವಣಗೆರೆ ವಿಶ್ವವಿದ್ಯಾನಿಲಯ ಜ್ಞಾನಗಂಗೋತ್ರಿ ಸ್ನಾತಕೋತ್ತರ ಕೇಂದ್ರ, ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಂಜಾಗ್ರತೆ ವಹಿಸಿದಲ್ಲಿ ಎಚ್‍ಐವಿ-ಏಡ್ಸ್ ರೋಗ ಹರಡದಂತೆ ನಿಯಂತ್ರಿಸಬಹುದು. ಹೆಚ್‍ಐವಿ ಕಾಯಿಲೆಗೆ ಸಂಬಂಧಪಟ್ಟಂತೆ ಲಸಿಕೆ ಸಂಶೋಧನೆಗಳು ನಡೆಯುತ್ತಿದೆ ಎಂದು ಹೇಳಿದರು.
ಎಚ್‍ಐವಿ ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ವೈರಾಣು. ಈ ವೈರಾಣು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತಾ ಹೋಗುತ್ತದೆ. ಹೀಗೆ ಹಲವು ರೋಗಗಳಿಗೆ ಒಳಗಾಗುವ ಸ್ಥಿತಿಯನ್ನು ಏಡ್ಸ್ ಎಂದು ಕರೆಯುತ್ತೇವೆ.
ಎಚ್‍ಐವಿ ಸೋಂಕು ಅಸುರಕ್ಷಿತ ಲೈಂಗಿಕ ಸಂಬಂಧದ ಮೂಲಕ, ಎಚ್‍ಐವಿ ಸೋಂಕಿತ ರಕ್ತವನ್ನು ಪರೀಕ್ಷೆ ಮಾಡದೇ ಪಡೆಯುವುದರಿಂದ, ಎಚ್‍ಐವಿ ಸೋಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ ಅಥವಾ ಎದೆ ಹಾಲಿನ ಮೂಲಕ, ಎಚ್‍ಐವಿ ಸೋಂಕಿತ ಸೂಜಿ, ಸಿರಿಂಜು, ಹರಿತವಾದ ಸಲಕರಣೆಗಳನ್ನು ಸಂಸ್ಕರಿಸದೇ ಬಳಸುವುರಿಂದ ಎಚ್‍ಐವಿ ಸೋಂಕು ಹರಡುತ್ತದೆ. ಹಾಗಾಗಿ ಬಹಳ ಎಚ್ಚರಿಕೆಯಿಂದ ಇರಬೇಕು.
ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅಭಿನವ್ ಮಾತನಾಡಿ, ಎಚ್‍ಐವಿ ಸೋಂಕು ಕೇವಲ ನಾಲ್ಕು ವಿಧಾನಗಳಲ್ಲಿ ಮಾತ್ರ ಹರಡುತ್ತದೆ. ಮುಂಜಾಗ್ರತೆಯಿಂದ ಮಾತ್ರ ಏಡ್ಸ್ ತಡೆಗಟ್ಟಲು ಸಾಧ್ಯ. ಎಚ್‍ಐವಿ ಸೋಂಕು ಕುರಿತು ಈಗಾಗಲೇ ಜನರಿಗೆ ಸಾಕಷ್ಟು ಮಾಹಿತಿ ಇದೆ. ಆದರೆ ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ಸಿ.ಓ.ಸುಧಾ ಮಾತನಾಡಿ, ಏಡ್ಸ್ ಕಾಯಿಲೆಯಿಂದ ಮರಣ ಹೊಂದಿದವರ ಸ್ಮರಣಾರ್ಥವಾಗಿ ಹಾಗೂ ಪ್ರತಿಯೊಬ್ಬರಿಗೂ ಎಚ್‍ಐವಿ-ಏಡ್ಸ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷವೂ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತಿದೆ ಎಂದರು.
ಎಚ್‍ಐವಿ- ಏಡ್ಸ್ ಗೆ ಇಲ್ಲಿಯವರೆಗೂ ವ್ಯಾಕ್ಸಿನ್ ಅಥವಾ ಔಷಧಿಗಳನ್ನು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ. ಇದಕ್ಕೆ ಮುಂಜಾಗ್ರತೆಯ ಔಷಧವಾಗಿದ್ದು, ಆದ್ದರಿಂದ ಮಾಹಿತಿ ಶಿಕ್ಷಣದ ಮೂಲಕ ಸಮುದಾಯದ ಪ್ರತಿಯೊಬ್ಬರಿಗೂ ಅರಿವು ಮೂಡಿಸಿ ಏಡ್ಸ್‍ನ್ನು ತಡೆಗಟ್ಟಬಹುದಾಗಿದೆ. ಪ್ರತಿ ದಿನವೂ ಇದರ ಬಗ್ಗೆ ಜಾಗೃತಿ ಮೂಡಿಸಬೇಕು.
ಹಾಗಾಗಿ ಈ ಬಾರಿಯ ಘೋಷವಾಕ್ಯ “ಸಮುದಾಯಗಳು ಮುನ್ನಡೆಸಲಿ” ಎಂಬುದಾಗಿದ್ದು, ಸಮುದಾಯವು ಇದರಲ್ಲಿ ಭಾಗಿಯಾಗಬೇಕು. ಎಚ್‍ಐವಿ-ಏಡ್ಸ್ ವೈರಸ್ ಎಂಬುವುದು ಕ್ಷಣ-ಕ್ಷಣಕ್ಕೂ ಬದಲಾವಣೆ ಆಗುವುದರಿಂದ, ಇದರ ಅಧ್ಯಯನ ನಡೆಸಿ, ಇದಕ್ಕೆ ಔಷಧಿ ತಯಾರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಭಾರತ ದೇಶದ ಎಲ್ಲಾ ಪ್ರಜೆಗಳು ಎಚ್‍ಐವಿ-ಏಡ್ಸ್ ಬಗ್ಗೆ ತಿಳಿದುಕೊಂಡು ಮುಂಜಾಗ್ರತಾ ವಹಿಸುವ ಮೂಲಕ ತಡೆಗಟ್ಟಬೇಕು.
ಎಚ್‍ಐವಿ-ಏಡ್ಸ್‍ನಲ್ಲಿ ವಿಶ್ವದಲ್ಲಿ ಭಾರತ ಮೂರನೇ ಸ್ಥಾನದಲ್ಲಿ ಇದೆ. ಭಾರತದಲ್ಲಿ ಸುಮಾರು 25 ಲಕ್ಷ ಎಚ್‍ಐವಿ ಸೋಂಕಿತರು ಇದ್ದಾರೆ. ಕರ್ನಾಟಕದಲ್ಲಿ 7 ಲಕ್ಷ ಸೋಂಕಿತರಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಇದುವರೆಗೂ 8517 ಎಚ್‍ಐವಿ ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜ್ಞಾನಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಎಂ.ವಿ. ಲೋಕೇಶ್, ಚಿತ್ರದುರ್ಗ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ವಿಶೇಷಾಧಿಕಾರಿ ಡಾ.ಬಿ.ವೈ ಯುವರಾಜ್, ಸ್ನಾತಕೋತ್ತರ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಡಾ.ಡಿ. ಶಶಿಧರ, ಗುಡ್ಡದರಂಗವ್ವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಡಿ.ಗೀತಾಂಜಲಿ, ಎಆರ್‍ಟಿ ಕೇಂದ್ರದ ವೈದ್ಯಾಧಿಕಾರಿ ಡಾ.ರೂಪಶ್ರೀ, ಸ್ತ್ರೀರೋಗ ತಜ್ಞೆ ಉಮಾ ನಂಜುಂಡಪ್ಪ ಸೇರಿದಂತೆ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕರು, ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದರು.