ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಹೋಬಲಪತಿ ನೇಮಕ : ಮಾಧ್ಯಮ ಮಿತ್ರರಿಗೆ ಸಂದ ಗೌರವ : ಶ.ಮಂಜುನಾಥ್ ಶ್ಲಾಘನೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 11 : ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾಗಿರುವ ವಿಜಯಕರ್ನಾಟಕ ಪತ್ರಿಕೆ ಹಿರಿಯ ವರದಿಗಾರ ಚಿತ್ರದುರ್ಗದ ಅಹೋಬಲಪತಿರವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ಭವನದಲ್ಲಿ ಗುರುವಾರ ಅಭಿನಂದಿಸಲಾಯಿತು.
ನಿವೃತ್ತ ಪ್ರಾಧ್ಯಾಪಕ ಡಾ.ನಟರಾಜ್ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ ಕರ್ನಾಟಕ ರಾಜ್ಯ ಸರ್ಕಾರ ಗುರುತಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯನನ್ನಾಗಿ ನೇಮಕ ಮಾಡುವಷ್ಟರ ಮಟ್ಟಿಗೆ ಅಹೋಬಲಪತಿ ಬೆಳೆದಿರುವುದು ಎಲ್ಲರಿಗೂ ಅತ್ಯಂತ ಖುಷಿ ಕೊಟ್ಟಿದೆ. ಸ್ಥಳೀಯ ಸುದ್ದಿಗಿಡುಗ ಪತ್ರಿಕೆಯಿಂದ ವೃತ್ತಿ ಜೀವನ ಆರಂಭಿಸಿದ ಅಹೋಬಲಪತಿ ವಿಜಯಕರ್ನಾಟಕ ಪತ್ರಿಕೆ ವರದಿಗಾರನಾಗಿರುವುದು ಕಮ್ಮಿ ಸಾಧನೆಯಲ್ಲ. ಅವರ ಬರವಣಿಗೆಯಲ್ಲಿ ಹೊಸತನವಿದೆ. ಮೂರು ದಶಕಗಳ ಹೋರಾಟವಿದೆ. ಸಾಧಕರನ್ನು ಒಂದಲ್ಲ ಒಂದು ದಿನ ಗುರುತಿಸುತ್ತಾರೆನ್ನುವುದಕ್ಕೆ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವುದೇ ಸಾಕ್ಷಿ ಎಂದು ಹೇಳಿದರು.
ಮಾಧ್ಯಮ ಅಕಾಡೆಮಿ ಸದಸ್ಯರಾಗಿ ನೇಮಕವಾಗಿರುವ ಅಹೋಬಲಪತಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಕೆಲವು ಬದಲಾವಣೆಗೆ ಒತ್ತು ಕೊಡಬೇಕು. ಉನ್ನತ ಶಿಕ್ಷಣ ಸಂಸ್ಥೆಗಳನ್ನು ರಾಜ್ಯ ಸರ್ಕಾರ ಬೇರೆ ಜಿಲ್ಲೆಗಳಿಗೆ ಕೊಟ್ಟಿರುವುದರಿಂದ ಚಿತ್ರದುರ್ಗ ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣ. ಸರ್ಕಾರ ಗಮನ ಹರಿಸಬೇಕೆಂದು ಮನವಿ ಮಾಡಿದರು.
ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ ಅಹೋಬಲಪತಿಯವರು ಹೋರಾಟದ ಹಾದಿಯಿಂದ ಬಂದವರು. ಸ್ಥಳೀಯ ಪತ್ರಿಕೆಯಿಂದ ಬರವಣಿಗೆ ಆರಂಭಿಸಿ ರಾಜ್ಯ ಮಟ್ಟದ ಪತ್ರಿಕೆ ವರದಿಗಾರನಾಗಿರುವುದು ಅವರ ಬರವಣಿಗೆಗೆ ಸಿಕ್ಕ ಪ್ರತಿಫಲ. ನನಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಿಕ್ಕಾಗ ನನ್ನ ವಿರುದ್ದ ಹಲವರು ಷಡ್ಯಂತ್ರ ನಡೆಸಿ ನಕ್ಸಲ್ ಪಟ್ಟ ಕಟ್ಟಿದರು. ಅದ್ಯಾವುದಕ್ಕೂ ಜಗ್ಗಲಿಲ್ಲ. ಚಿತ್ರದುರ್ಗದ ಸಂಸದರೊಬ್ಬರ ಬಗ್ಗೆ ಪತ್ರಿಕೆಯಲ್ಲಿ ವರದಿ ಮಾಡಿದಾಗ ಸಾಕಷ್ಟು ಬೆದರಿಕೆಗಳನ್ನು ಎದುರಿಸಬೇಕಾಯಿತು. ಅದೇ ರೀತಿ ಅಹೋಬಲಪತಿ ಕೂಡ ಅನೇಕ ಸವಾಲುಗಳನ್ನು ಮೆಟ್ಟಿ ನಿಂತಿದ್ದಾರೆಂದು ಗುಣಗಾನ ಮಾಡಿದರು.
ಸುದ್ದಿಗಿಡುಗ ಪತ್ರಿಕೆ ಸಂಪಾದಕ ಶ.ಮಂಜುನಾಥ್ ಮಾತನಾಡುತ್ತ ಆರಂಭದಲ್ಲಿ ನಮ್ಮ ಪತ್ರಿಕೆ ವರದಿಗಾರರಾಗಿ ಪತ್ರಿಕೋದ್ಯಮ ಪ್ರವೇಶಿಸಿದ ಅಹೋಬಲಪತಿ ಚಲನಚಿತ್ರ ವೀಕ್ಷಿಸಿ ಬಂದ ಮೇಲೆ ಚಿತ್ರದ ಕುರಿತು ವಿಶ್ಲೇಷಣೆ ಬರೆಯಲು ಆರಂಭಿಸಿದಾಗ ಚಿತ್ರಮಂದಿರದ ಮಾಲೀಕರು ವಿಶ್ಲೇಷಣೆ ಬರೆಯುವುದನ್ನು ನಿಲ್ಲಿಸುವಂತೆ ಒತ್ತಡ ಹೇರಿದರು. ನಗರಸಭೆ ಅಧ್ಯಕ್ಷರಾಗಿದ್ದವರೊಬ್ಬರು ಪೈಪ್‍ಗಳನ್ನು ಮಾರಾಟ ಮಾಡಿಕೊಂಡಾಗ ಪೈಪ್ ಕಳ್ಳ ಎಂದು ಬರೆದಾಗಲು ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು.
ಎಂತಹ ಕಠಿಣ ಸಂದರ್ಭ ಎದುರಾದರೂ ಅಹೋಬಲಪತಿಯನ್ನು ಬಿಟ್ಟುಕೊಡಲಿಲ್ಲ. ಏಕೆಂದರೆ ಅವರಲ್ಲಿ ಅಂತಹ ಮೊನಚು ಬರವಣಿಗೆಯಿದೆ ಎಂದು ಶ್ಲಾಘಿಸಿದರು.
ಅಹೋಬಲಪತಿ ಎಂದಿಗೂ ಪ್ರಶಸ್ತಿಗೆ ಲಾಭಿ ಮಾಡಿದವರಲ್ಲ. ಅವರ ಪ್ರಾಮಾಣಿಕತೆಯನ್ನು ಗುರುತಿಸಿ ರಾಜ್ಯ ಸರ್ಕಾರ ಮಾಧ್ಯಮ ಅಕಾಡೆಮಿ ಸದಸ್ಯರನ್ನಾಗಿ ನೇಮಕ ಮಾಡಿರುವುದು ಇಡಿ ಮಾಧ್ಯಮ ಮಿತ್ರರಿಗೆ ಸಂದ ಗೌರವ ಎಂದು ಶ್ಲಾಘಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಾಧ್ಯಮ ಅಕಾಡೆಮಿ ಸದಸ್ಯ ಅಹೋಬಲಪತಿ ಇದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ರಾಜ್ಯ ಸರ್ಕಾರ ನನ್ನನ್ನು ಗುರುತಿಸಿ ಮಾಧ್ಯಮ ಅಕಾಡೆಮಿ ಸದಸ್ಯನಾಗಿ ಆಯ್ಕೆ ಮಾಡಿರುವುದು ಖುಷಿ ತಂದಿದೆ. ಈ ಅವಕಾಶವನ್ನು ಬಳಸಿಕೊಂಡು ಚಿತ್ರದುರ್ಗ ಜಿಲ್ಲೆಯಲ್ಲಿ ಅನೇಕ ವಿಚಾರ ಸಂಕಿರಣ, ಕಾರ್ಯಾಗಾರಗಳನ್ನು ನಡೆಸುತ್ತೇನೆಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್‍ಗೌಡಗೆರೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಹೋರಾಟದ ಮನೋಭಾವನೆಯುಳ್ಳ ಅಹೋಬಲಪತಿಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ನೇಮಕಗೊಳಿಸಿರುವುದು ಸಂತಸದ ಸಂಗತಿ. ಇನ್ನು ಹೆಚ್ಚಿನ ಅವಕಾಶ ಸಿಗಲಿ ಎಂದು ಹಾರೈಸಿದರು.
ಮಾಧ್ಯಮ ಮಿತ್ರರು ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಾಕೀಕೆರೆ ತಿಪ್ಪೇಸ್ವಾಮಿ, ಹೆಂಜಾರಪ್ಪ, ರವಿ ಉಗ್ರಾಣ, ರವಿ ಮಲ್ಲಾಪುರ, ರಾಜು, ವೀರೇಶ್, ವಿನಾಯಕ, ಗೋವಿಂದಪ್ಪ, ದರ್ಶನ್, ಪ್ರಹ್ಲಾದ್, ನಾಗೇಶ್, ಮಾರುತಿ ಸೇರಿದಂತೆ ಇತರರು ಭಾಗವಹಿಸಿದ್ದರು.