ಬರಗೇರಮ್ಮ-ತಿಪ್ಪಿನಘಟ್ಟಮ್ಮ ಭೇಟಿ ಮಹೋತ್ಸವ ನಂತರ ಸಾವು ತಂದ ಸೌಭಾಗ್ಯ ನಾಟಕ ಪ್ರದರ್ಶನ : ಸಿ.ಟಿ.ಕೃಷ್ಣಮೂರ್ತಿ ಮಾಹಿತಿ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 06 : ಐತಿಹಾಸಿಕ ಚಿತ್ರದುರ್ಗ ನಗರದ ದೊಡ್ಡಪೇಟೆಯ ರಾಜಬೀದಿಯಲ್ಲಿ ಇನ್ನೂರು ವರ್ಷಗಳಿಂದಲೂ ಗ್ರಾಮ ದೇವತೆಗಳಾದ ಬರಗೇರಮ್ಮ-ತಿಪ್ಪಿನಘಟ್ಟಮ್ಮ ಭೇಟಿ ಮಹೋತ್ಸವ ನಡೆದುಕೊಂಡು ಬರುತ್ತಿರುವುದು ಇತಿಹಾಸ. ಅದರಂತೆ ಮಂಗಳವಾರ ನಡೆಯುವ ಭೇಟಿ ನಂತರ ನವತರುಣ ಕಲಾ ಸಂಘದವರು ಮನರಂಜನೆಗಾಗಿ ಸಾವು ತಂದ ಸೌಭಾಗ್ಯ ನಾಟಕವಾಡುತ್ತಿದ್ದಾರೆ. ಜನತೆ ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಮನವಿ ಮಾಡಿದ್ದಾರೆ.
ಕರುವಿನಕಟ್ಟೆ ವೃತ್ತದಲ್ಲಿರುವ ದೇವಸ್ಥಾನದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮಕ್ಕಳ ವಿಚಾರದಲ್ಲಿ ಬರಗೇರಮ್ಮ-ತಿಪ್ಪಿನಘಟ್ಟಮ್ಮ ಮನಸ್ತಾಪಗೊಂಡಾಗ ಅದಿ ದೇವತೆ ಏಕನಾಥೇಶ್ವರಿ ಮಧ್ಯಸ್ಥಿಕೆಯಲ್ಲಿ ಇಬ್ಬರ ಕೋಪವನ್ನು ತಣ್ಣಗೆ ಮಾಡಿ ಸಮೃದ್ದ ಮಳೆ-ಬೆಳೆ ಕರುಣಿಸಿ ಚಿತ್ರದುರ್ಗ ಜನತೆಗೆ ಒಳಿತಾಗಬೇಕಾಗಿರುವುದರಿಂದ ವರ್ಷಕ್ಕೊಮ್ಮೆ ಇಬ್ಬರು ಭೇಟಿಯಾಗಬೇಕೆಂದು ಹೇಳಿದ ಪರಿಣಾಮವೇ ಪ್ರತಿ ವರ್ಷ ಯುಗಾದಿ ಹಬ್ಬವಾದ ಹದಿನೈದು ದಿನಗಳ ಬಳಿಕ ಭೇಟಿ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.
ಭೇಟಿಯಾದ ನಂತರ ಸಾಮಾಜಿಕ, ಪೌರಾಣಿಕ ನಾಟಕಗಳನ್ನು ಆಡಿಸಲಾಗುತ್ತದೆ. ಇಲ್ಲಿಂದ ಮದುವೆಯಾಗಿ ಗಂಡನ ಮನೆಗೆ ಹೋದವರು ಏಕನಾಥೇಶ್ವರಿ ಸಿಡಿಗೆ ಬಂದು ನಂತರ ಅಕ್ಕ-ತಂಗಿಯ ಭೇಟಿ ನೋಡಿಕೊಂಡು ತಮ್ಮ ತಮ್ಮ ಊರುಗಳಿಗೆ ಹೋಗುವುದು ವಾಡಿಕೆ ಎಂದು ಸಿ.ಟಿ.ಕೃಷ್ಣಮೂರ್ತಿ ತಿಳಿಸಿದರು.
ಶ್ರೀನಿವಾಸ್ ಜೆ.ಎಂ.ಟಿ. ಲಿಂಗರಾಜ(ಗೌಡ) ಡಿ.ಸಿ.ಸುರೇಶ್, ಹರೀಶ್ ಈ ಸಂದರ್ಭದಲ್ಲಿದ್ದರು.