ರೈತರಿಗೆ ಸಲಹೆ : ತೆಂಗಿನ ತೋಟಗಳಿಗೆ ತಗಲುವ ಕಪ್ಪುತಲೆ ಹುಳುಗಳ ನಿರ್ವಹಣಾ ಕ್ರಮಗಳು
ಚಿತ್ರದುರ್ಗ. ಜುಲೈ19: ಜಿಲ್ಲೆಯಲ್ಲಿ ತೆಂಗು ಬೆಳೆ ವಿಸ್ತೀರ್ಣ 60,874 ಹೆಕ್ಟೇರ್‍ನಲ್ಲಿ ಬೆಳೆಯಲಾಗುತ್ತಿದ್ದು, ತೆಂಗು ಬೆಳೆಗೆ ಕಪ್ಪುತಲೆ ಹುಳುಗಳ ಬಾದೆ ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ಈ ಕೀಟ ನಿಯಂತ್ರಣಕ್ಕಾಗಿ ಹತೋಟಿ ಕ್ರಮಕೈಗೊಳ್ಳಲು ತೋಟಗಾರಿಕೆ ಇಲಾಖೆ ರೈತರಿಗೆ ಸಲಹೆ ನೀಡಿದೆ.
ಗರಿತಿನ್ನುವ ಹುಳು: ಮರಿ ಹುಳುಗಳು ಎಲೆಯ ಕೆಳಭಾಗದಲ್ಲಿ ರೇಷ್ಮೆ ಜಾಡಿನ ಒಳಗೆ ಕುಳಿತು ಹಸಿರು ಪದಾರ್ಥವನ್ನು ಕೆರೆದು ತಿನ್ನುತ್ತದೆ ಅಂತಹ ಎಲೆಗಳ ಮೇಲೆ ಒಣಗಿದ ಮೊಟ್ಟೆಗಳು ಮರಿ ಹುಳುವಿನ ರೇಷ್ಮೆಜಾಡು ಮತ್ತು ಹಿಕ್ಕಿ ಕಂಡು ಬರುತ್ತದೆ, ಅತಿ ಬಾದೆಗೊಳಗಾದ ತೋಟಗಳು ಬೆಂಕಿಯಿಂದ ಸುಟ್ಟಂತೆ ಕಾಣುತ್ತದೆ.
ನಿರ್ವಹಣೆ ಕ್ರಮಗಳು-ಯಾಂತ್ರಿಕ ವಿಧಾನ: ಹಾನಿಯು ಪ್ರಾಥಮಿಕ ಹಂತದಲ್ಲಿದ್ದು, ಕೆಲವೇ ಗರಿಗಳಲ್ಲಿ ಕಂಡುಬಂದಾಗ ತೋಟದಲ್ಲಿ ಬಿದ್ದ ಗರಿಗಳು ಇತರ ಕಸಕಡ್ಡಿಗಳನ್ನು ಸಂಗ್ರಹಿಸಿ ಸ್ವಚ್ಚವಾಗಿಡುವುದು. ಹುಳದ ಬಲೆ ಇರುವ ಗರಿ ಅಥವಾ ಅದರ ಭಾಗಗಳನ್ನು ಮಾತ್ರ ಕತ್ತರಿಸುವುದು.
ಜೈವಿಕ ವಿಧಾನ: ಕೀಟದ ಬಾದೆಯು ಕೆಲಬಾಗದ ಗರಿಗಳಲ್ಲಿಯೇ ಇದ್ದು, ತೀವ್ರತೆಯ ಹಂತ ತಲುಪಿಲ್ಲದಿದ್ದರೆ ಪ್ರಯೋಗ ಶಾಲೆಗಳಿಂದ ಪರೋಪ ಜೀವಿಗಳನ್ನು ಪಡೆದುಕೊಳ್ಳುವುದು. ಗೋನಿಯೋಜಸ್ ನೆಪಾಂಟಡಿಸ್ ಪರೋಪ ಜೀವಿಗಳನ್ನು ಪ್ರತಿ ಕೀಟ ಭಾದಿತ ಮರಕ್ಕೆ ಸುಮಾರು 15 ರಿಂದ 20 ರಂತೆ 15 ದಿನಗಳಿಗೊಮ್ಮೆ ಕನಿಷ್ಟ 04 ಬಾರಿ ಬಿಡುವುದು.
ರಾಸಾಯನಿಕ ವಿಧಾನ: ಸಣ್ಣ ಸಸಿಗಳಾದಲ್ಲಿ ಕ್ಲೋರೊಪೈರಿಪಾಸ್ 2 ಮಿ.ಲೀ/ಪ್ರ.ಲೀ ನೀರಿಗೆ ಕ್ವಿನಾಲ್ಪಾಸ್ 1 ಮಿ.ಲೀ/ಪ್ರ.ಲೀ, ಮಾನೋಕ್ರೋಟೋಪಸ್ 1.5 ಮಿ.ಲೀ/ಪ್ರ.ಲೀ ಕೀಟ ನಾಶಕವನ್ನು ನೀರಿನಲ್ಲಿ ಬೆರೆಸಿ ಗರಿಗಳನ್ನು ಕೆಳಬಾಗ ಸಂಪೂರ್ಣ ಒದ್ದೆಯಾಗುವಂತೆ ಸಿಂಪಡಿಸಿಬೇಕು. 10 ವರ್ಷಕಿಂತ ಮೇಲ್ಪಟ್ಟ ಮರಗಳಿಗೆ ಬೇರಿಗೆ ಉಪಚಾರ ಮಾನೋಕ್ರೋಟೋಪಸ್ 10 ಎಂ ಎಲ್ / 10 ಎಂ.ಎಲ್ ನೀರಿಗೆ ಸೇರಿಸಿ ಬೇರಿನ ಮೂಲಕ ಕೀಟನಾಶಕ ಉಣಿಸಬೇಕಾಗಿರುತ್ತದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮರಗಳ ಬೇರಿಗೆ ಉಪಚಾರ ಮಾನೋಕ್ರೋಟೋಪಸ್ 7.5 ಎಂ ಎಲ್ / 7.5 ಎಂ.ಎಲ್ ನೀರಿಗೆ ಸೇರಿಸಿ ಬೇರಿನ ಮೂಲಕ ಕೀಟನಾಶಕ ಉಣಿಸಬೇಕಾಗಿರುತ್ತದೆ.
ಪೋಷಕಾಂಶಗಳ ನಿರ್ವಹಣೆ: ಪ್ರತಿ ವರ್ಷ ಪ್ರತಿ ಮರಕ್ಕೆ ಬೇವಿನ ಹಿಂಡಿ- 5ಕೆ.ಜಿ. ಪೊಟ್ಯಾಶ್-1.2ಕೆ.ಜಿ. ಕೊಟ್ಟಿಗೆ ಗೊಬ್ಬರ-50 ಕೆ.ಜಿ ನೀಡುವುದರಿಂದ ಗಿಡಕ್ಕೆ ರೋಗ ನಿರೋದಕ ಶಕ್ತಿಯು ನೀಡುತ್ತದೆ.
ಈ ಮೇಲ್ಕಂಡ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.