ಬಿಜೆಪಿ ಏಜೆಂಟರಂತೆ ವರ್ತಿಸುತ್ತಿರುವ ರಾಜ್ಯಪಾಲರ ನಡೆ ಸಂವಿಧಾನ ವಿರೋಧಿ : ಭಾರತ ಕಮ್ಯನಿಸ್ಟ್ ಪಕ್ಷ ಪ್ರತಿಭಟನೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 29 : ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಪಾಲರ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೆಳಗಿಳಿಸುವ ಕುತಂತ್ರ ನಡೆಸುತ್ತಿರುವುದನ್ನು ವಿರೋಧಿಸಿ ಭಾರತ ಕಮ್ಯುನಿಸ್ಟ್ ಪಕ್ಷದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಜಯಣ್ಣ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ದಾವಣಗೆರೆ ರಸ್ತೆಯಲ್ಲಿರುವ ಕಮ್ಯುನಿಸ್ಟ್ ಕಚೇರಿಯಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ರಾಜ್ಯಪಾಲರ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಮೂಡಾ ಪ್ರಕರಣ ಹಾಗೂ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ.ಗಳ ಹಗರಣವನ್ನು ನಿಸ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಪ್ರಜಾಪ್ರಭುತ್ವ ವ್ಯಸ್ಥೆಯಲ್ಲಿ ರಾಜ್ಯದ ಮುಖ್ಯ ಮಂತ್ರಿ ವಿರುದ್ದ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿರುವ ರಾಜ್ಯಪಾಲರು ಕೇಂದ್ರ ಬಿಜೆಪಿ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿರುವುದು ಸಂವಿಧಾನ ವಿರೋಧಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರು ಒತ್ತಡಕ್ಕೆ ಮಣಿದು ತೀರ್ಮಾನ ಕೈಗೊಂಡಿರುವುದು ಸರಿಯಾದ ಕ್ರಮವಲ್ಲ. ಕೇರಳ, ತಮಿಳುನಾಡು, ಪಾಂಡಿಚೇರಿ, ಪಶ್ಚಿಮ ಬಂಗಾಳ, ರಾಜಸ್ಥಾನ ಇನ್ನು ಮುಂತಾದ ರಾಜ್ಯಗಳಲ್ಲಿ ರಾಜ್ಯಪಾಲರು ಹಾಗೂ ಚುನಾಯಿತ ಸರ್ಕಾರಗಳ ನಡುವೆ ಸಂಘರ್ಷ ನಡೆಯುತ್ತಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ರಾಜ್ಯ ಸರ್ಕಾರವನ್ನು ಕೆಡವಲು ರಾಜ್ಯಪಾಲರು ಆಸಕ್ತಿ ವಹಿಸುತ್ತಿರುವುದರ ಹಿಂದೆ ಯಾರ್ಯಾರ ಕೈವಾಡವಿದೆ ಎನ್ನುವುದನ್ನು ಬಹಿರಂಗಪಡಿಸಿ ರಾಜ್ಯಪಾಲರ ಹುದ್ದೆಯನ್ನು ರದ್ದುಗೊಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಇದೇ ತಿಂಗಳ 29 ರಂದು ರಾಜ್ಯಪಾಲ ಹುದ್ದೆ ರದ್ದುಪಡಿಸಿ ಒಕ್ಕೂಟ ವ್ಯವಸ್ಥೆ ಉಳಿಸಿ ಎಂಬ ಪ್ರತಿಭಟನೆಯನ್ನು ರಾಜ್ಯಾದ್ಯಂತ ನಡೆಸಲಾಗುವುದೆಂದು ಭಾರತ ಕಮ್ಯನಿಸ್ಟ್ ಪಕ್ಷ ರಾಜ್ಯ ಮಂಡಳಿ ಸದಸ್ಯ ಸಿ.ವೈ.ಶಿವರುದ್ರಪ್ಪ ಎಚ್ಚರಿಸಿದರು.
ಸಿಪಿಐ. ಜಿಲ್ಲಾ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು, ಜಿಲ್ಲಾ ಮಂಡಳಿ ಸದಸ್ಯರುಗಳಾದ ಕಾಂ.ಬಿ.ಬಸವರಾಜಪ್ಪ, ಕಾಂ.ಟಿ.ಆರ್.ಉಮಾಪತಿ, ಸಹ ಕಾರ್ಯದರ್ಶಿ ದೊಡ್ಡುಳ್ಳಾರ್ತಿ ಕರಿಯಪ್ಪ, ಕಾಂ.ಜಾಫರ್‍ಷರೀಫ್, ಕಾಂ.ಎಸ್.ಸಿ.ಕುಮಾರ್, ಕಾಂ.ಎಲ್.ಸಿ.ಕುಮಾರ್, ಕಾಂ.ಅಮೀನಾಭಿ, ಕಾಂ.ಹನುಮಂತಪ್ಪ, ಕಾಂ.ಈ.ಸತ್ಯಕೀರ್ತಿ, ಕಾಂ.ಎಂ.ಬಿ.ಜಯದೇವಮೂರ್ತಿ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.