ಸ್ನೇಹಿತನ ಮದುವೆಯಲ್ಲಿ ಕುಣಿಯುವುದಕ್ಕೆ ಹೋಗಿ ಸಾವನ್ನಪ್ಪಿದ ಯುವಕ : ಚಿತ್ರದುರ್ಗದಲ್ಲಿ ಹೃದಯವಿದ್ರಾವಕ ಘಟನೆ..!
ಚಿತ್ರದುರ್ಗ: ಸ್ನೇಹಿತ ಮದುವೆಯೆಂಬ ಸಂಭ್ರಮ.. ಎಲ್ಲರೂ ಒಟ್ಟುಗೂಡಿದ ಕ್ಷಣ.. ಕಿವಿಗೆ ಜೋರು ಡಿಜೆ ಸೌಂಡ್ ಕೇಳಿಸುತ್ತಿದ್ದಂತೆ ಸ್ನೇಹಿತರೆಲ್ಲ ಕುಣಿಯುವುದಕ್ಕೆ ಶುರು ಮಾಡಿದರು. ಆ ಖುಷಿಯನ್ನು ವಿಧಿ ಸಹಿಸಲಿಲ್ಲ ಎನಿಸುತ್ತದೆ. ಕುಣಿಯುತ್ತಿದ್ದ ಯುವಕನ ಪ್ರಾಣವನ್ನ ಹೊತ್ತೊಯ್ದೆ ಬಿಡ್ತು. ಸ್ನೇಹಿತನ ಪ್ರಾಣ ಕಣ್ಣ ಮುಂದೆಯೇ ಹೋಗಿದ್ದನ್ನ ಅರಗಿಸಿಕೊಳ್ಳಲಾಗುತ್ತಿಲ್ಲ. ಆ ನೋವು ಸ್ನೇಹಿತರನ್ನು ತುಂಬಾ ಕಾಡುತ್ತಿದೆ. ಚಳ್ಳಕೆರೆಯಲ್ಲಿ ಈ ಘಟನೆ ನಡೆದಿದೆ.
23 ವರ್ಷದ ಆದರ್ಶ್ ಮೃತ ದುರ್ದೈವಿ. ಚಳ್ಳಕೆರೆ ತಾಲೂಕಿನ ಪಗಡಲಬಂಡೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದೇ ಗ್ರಾಮದಲ್ಲಿ ಯುವಕನ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಎಲ್ಲರೂ ಸೇರಿ ಡಿಜೆ ಸೌಂಡಿಗೆ ಹೆಜ್ಜೆ ಹಾಕುವುದಕ್ಕೆ ಶುರು ಮಾಡಿದರು. ಜೊತೆಗೆ ಕುಣಿಯುತ್ತಿದ್ದ ಆದರ್ಶ್ ಇದ್ದಕ್ಕಿದ್ದ ಹಾಗೇ ಪ್ರಜ್ಞೆ ತಪ್ಪಿ ಬಿದ್ದನು. ಅಲ್ಲಿಯೇ ಇದ್ದವರೂ ತಕ್ಷಣ ಆದರ್ಶ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಹೋಗುವುದರೊಳಗೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಯುವಕನ ದುರಂತ ಅಂತ್ಯದ ಕ್ಷಣದ ಡ್ಯಾನ್ಸ್ ವಿಡಿಯೋದಲ್ಲಿ ಸೆರೆಯಾಗಿದೆ. ಮೃತಪಟ್ಟ ಯುವಕ ಆದರ್ಶ್ ಐನಳ್ಳಿ ಕುರುಬರಹಟ್ಟಿಯ ನಿವಾಸಿಯಾಗಿದ್ದಾನೆ. ಸ್ನೇಹಿತನ ಮದುವೆಗೆಂದು ಪಗಡಲಬಂಡೆಗೆ ಬಂದಿದ್ದನು. ಹುಟ್ಟುವುದು ಗೊತ್ತಾದರೂ ಸಾವು ಯಾವಾಗ ಹೇಗೆ ಸಂಭವಿಸುತ್ತದೆ ಎಂಬುದು ಯಾರಿಗೂ ತಿಳಿಯಲ್ಲ. ಹಾಗೇ ಆದರ್ಶ್ ಇದ್ದಕ್ಕಿದ್ದ ಹಾಗೇ ಸಾವನ್ನಪ್ಪಿದ್ದಕ್ಕೆ ಕಾರಣ ಏನು ಎಂಬುದು ಯಾರಿಗೂ ಗೊತ್ತಿಲ್ಲ. ನಿನ್ನೆ ರಾತ್ರಿ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವಕ ಸಾವಿನಿಂದ ಮನೆಯವರು ದಿಗ್ಬ್ರಾಂತರಾಗಿದ್ದಾರೆ. ಮದುವೆ ಮನೆಯಲ್ಲಿ ಖುಷಿಯಾಗಿರಬೇಕಾದವನು ಮಸಣ ಸೇರಿದ್ದಾನೆ.