Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಒಳಮೀಸಲಾತಿ ಹೋರಾಟಕ್ಕೆ ದಿಗ್ವಿಜಯ |ಐಸಿಯುನಲ್ಲಿದ್ದ ಸಮುದಾಯಕ್ಕೆ ಬದುಕುವ ಭರವಸೆ : ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ

04:42 PM Aug 01, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ: ಆ. 01:  ಪರಿಶಿಷ್ಟ ಜಾತಿಯಲ್ಲಿ ಒಳಮೀಸಲು ಸೌಲಭ್ಯ ಕಲ್ಪಿಸಬೇಕೆಂಬ ಮೂರು ದಶಕದ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಪ್ರಕಟಿಸಿದ ತೀರ್ಪು ಐತಿಹಾಸಿಕ ಗೆಲುವು ತಂದುಕೊಟ್ಟಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

Advertisement

ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕ ಸರ್ಕಾರ ಒಳಮೀಸಲಾತಿ ಸಂಬಂಧ ಜಾರಿಗೆ ಮುಂದಾಗಿದ್ದ ನಡೆಗೆ ಸುಪ್ರೀಂಕೋರ್ಟ್ ಅಸ್ತು ಎನ್ನುವ ಮೂಲಕ ಮೀಸಲಾತಿ ವರ್ಗೀಕರಣ ಸಂವಿಧಾನಾತ್ಮಕ ನಿರ್ಧಾರ ಎಂಬ ಸಂದೇಶ ನೀಡಿದೆ.

ಸತತ 30 ವರ್ಷಗಳಿಂದ ದಲಿತಪರ ಸಂಘಟನೆಗಳು, ಜನಪ್ರತಿನಿಧಿಗಳು ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದರ ಫಲ ದೊರೆತಿದೆ. ಕತ್ತಲ ಬದುಕಿನಲ್ಲಿದ್ದ ಎಸ್ಸಿಯಲ್ಲಿ ಬಹಳಷ್ಟು ಸಮುದಾಯಗಳಿಗೆ ಕೋರ್ಟ್ ತೀರ್ಪು ಐಸಿಯು ನಲ್ಲಿದ್ದವರಿಗೆ ಬದುಕುವ ಭರವಸೆಯಂತೆ ಆಶಾಭಾವನೆ ಮೂಡಿಸಿದೆ ಎಂದು ತಿಳಿಸಿದ್ದಾರೆ.

Advertisement

ಒಳಮೀಸಲಾತಿ ಜಾರಿ ಸಂಬಂಧ ಹೋರಾಟ ತೀವ್ರಗೊಂಡ ಸಂದರ್ಭ ಅಂದಿನ ಕಾಂಗ್ರೆಸ್ ಸರ್ಕಾರ ನ್ಯಾ.ಸದಾಶಿವ ನೇತೃತ್ವದಲ್ಲಿ ಅಯೋಗ ರಚಿಸುವ ಮೂಲಕ ಹೋರಾಟಕ್ಕೆ ಸ್ಪಂದಿಸಿತ್ತು. ಸದಾಶಿವ ಆಯೋಗ ವರದಿ ನೀಡಿದ್ದರೂ ಅದನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುವಲ್ಲಿ ಹಲವು ಅಡ್ಡಿ ಆತಂಕಗಳು ಎದುರಾಗಿದ್ದವು. ಆದರೆ, ಪ್ರಸ್ತುತ ಕೋರ್ಟ್ ತೀರ್ಪು ಸದಾಶಿವ ಆಯೋಗದ ವರದಿ ಜಾರಿಗೆ ಆನೆಬಲ ನೀಡಿದೆ. ಆದ್ದರಿಂದ ಹೋರಾಟ ಹುಟ್ಟಿದ ಕರ್ನಾಟಕ ಮತ್ತು ಆಂಧ್ರಪ್ರದೇಶ, ತೆಲಂಗಾಣದಲ್ಲಿ ಕೂಡಲೇ ಒಳಮೀಸಲು ಸೌಲಭ್ಯ ಕಲ್ಪಿಸಲು ಸರ್ಕಾರಗಳು ಮುಂದಾಗಬೇಕು. ಈಗಾಗಲೇ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸುವುದನ್ನು ರದ್ದುಗೊಳಿಸಿ, ಮೀಸಲಾತಿ ವರ್ಗೀಕರಣಗೊಂಡ ಬಳಿಕ ಅರ್ಜಿ ಆಹ್ವಾನಿಸಬೇಕು ಎಂದು ಆಂಜನೇಯ ಒತ್ತಾಯಿಸಿದ್ದಾರೆ.

ಆರಂಭದಿಂದಲೂ ಒಳಮೀಸಲು ಪರವಿದ್ದ ಕಾಂಗ್ರೆಸ್ ಈ ಬಾರಿಯ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಲಿಖಿತವಾಗಿ ಘೋಷಿಸಿತ್ತು. ಜೊತೆಗೆ ಒಳಮೀಸಲು ಸಂಬಂಧ ಸಿದ್ಧರಾಮಯ್ಯ ಸರ್ಕಾರ ಆರು ತಿಂಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಈಗಿನ ಕೋರ್ಟ್ ತೀರ್ಪು ದಲಿತಪರ ಹೋರಾಟಕ್ಕೆ ಹಾಗೂ ಕಾಂಗ್ರೆಸ್ ಪಕ್ಷದ ನಡೆಗೆ ಜಯ ಸಿಕ್ಕಂತಾಗಿದೆ ಎಂದು ಆಂಜನೇಯ ಸಂತಸ ವ್ಯಕ್ತಪಡಿಸಿದ್ದಾರೆ.

ಒಳಮೀಸಲಾತಿ ಕೇವಲ ಮಾದಿಗ, ಛಲವಾದಿ ಸಮುದಾಯಗಳಿಗೆ ಅನುಕೂಲ ಆಗಲಿದೆ ಎಂಬ ತಪ್ಪುಗ್ರಹಿಕೆಗೆ ಕೋರ್ಟ್ ತೀರ್ಪು ಉತ್ತರವಾಗಿದೆ. ಪರಿಶಿಷ್ಟ ಜಾತಿಯಲ್ಲಿರುವ ಯಾವುದೇ ಜಾತಿಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಜೊತೆಗೆ ಯಾವುದೇ ಸಮುದಾಯಕ್ಕೆ ಅನ್ಯಾಯವಾಗುವುದಿಲ್ಲ. ಆದ್ದರಿಂದ ಪರಿಶಿಷ್ಟ ಗುಂಪಿನಲ್ಲಿರುವ ಯಾವುದೇ ಜಾತಿ ಜನ ಆತಂಕ ಪಡಬೇಕಾಗಿಲ್ಲ. ನಾವೆಲ್ಲರೂ ಒಂದೇ ತಂದೆ-ತಾಯಿ ಮಕ್ಕಳಾಗಿದ್ದು, ಜನಸಂಖ್ಯೆಗೆ ಅನುಗುಣವಾಗಿ ತಮ್ಮ ತಮ್ಮ ಪಾಲಿನ ಹಕ್ಕು ಪಡೆದುಕೊಳ್ಳುವುದೇ ಮೀಸಲಾತಿ ವರ್ಗೀಕರಣದ ಮೂಲ ಉದ್ದೇಶ. ಜೊತೆಗೆ ಕೋರ್ಟ್ ಕೂಡ ಸಮ್ಮತಿ ನೀಡಿದೆ ಎಂದು ಹೇಳಿದ್ದಾರೆ.

ಕೇವಲ ಕೋರ್ಟ್ ತೀರ್ಪು ಕರ್ನಾಟಕ ರಾಜ್ಯಕ್ಕಷ್ಟೇ ಸೀಮಿತಗೊಳಿಸದೆ, ಕೇಂದ್ರದಲ್ಲಿರುವ ಎನ್.ಡಿ.ಎ ಸರ್ಕಾರ ರಾಷ್ಟ್ರವ್ಯಾಪಿ ಮೀಸಲಾತಿ ವರ್ಗೀಕರಣಕ್ಕೆ ಮುಂದಾಗಬೇಕು. ಈ ಸಂಬಂಧ ನಮ್ಮ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಕೂಡ ಧ್ವನಿಯೆತ್ತಲಿದ್ದಾರೆ. ಮುಖ್ಯವಾಗಿ ತೆಲಂಗಾಣದಲ್ಲಿ ಚುನಾವಣೆ ಸಂದರ್ಭ ಮಾದಿಗ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಮಾತನ್ನು ಅನುಷ್ಠಾನಕ್ಕೆ ತರಬೇಕು ಎಂದು ಒತ್ರಾಯಿಸಿದ್ದಾರೆ.

ಮೀಸಲಾತಿ ವರ್ಗೀಕರಣಕ್ಕೆ ಕೋರ್ಟ್ ಒಪ್ಪುವುದಿಲ್ಲ ಎಂಬ ಕೆಲ ಪಟ್ಟಭದ್ರಹಿತಾಸಕ್ತಿಗಳು ಪದೇ ಪದೇ ನೀಡುತ್ತಿದ್ದ ಹೇಳಿಕೆಗೆ ತಕ್ಕ ಉತ್ತರ ನೀಡಿದೆ. ಪರಿಶಿಷ್ಟ ಜಾತಿ ಗುಂಪಿನಲ್ಲಿ 100ಕ್ಕೂ ಹೆಚ್ಚು ಜಾತಿಗಳಿದ್ದರೂ ಸಹೋದರರ ರೀತಿ ಸೌಹಾರ್ದ ಜೀವನ ನಡೆಸುತ್ತಿರುವುದಕ್ಕೆ ಒಳಮೀಸಲಾತಿ ಜಾರಿ ಇನ್ನಷ್ಟು ಬಲ ತಂದುಕೊಡಲಿದೆ. ಪರಸ್ಪರ ಅಪನಂಬಿಕೆಗಳಿಗೆ ಕಡಿವಾಣ ಬೀಳಲಿದೆ. ಜನಸಂಖ್ಯೆಗೆ ಅನುಗುಣವಾಗಿ ಅವರವರ ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಎಲ್ಲ ಸಮುದಾಯಗಳು ಸಮಗ್ರವಾಗಿ ಪ್ರಗತಿ ಸಾಧಿಸಲು ಸಹಕಾರಿ ಆಗಲಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕೂಡಲೇ ಒಳಮೀಸಲಾತಿ ಜಾರಿಗೆ ಮುಂದಾಗುವ ಮೂಲಕ ಇಡೀ ರಾಷ್ಟ್ರಕ್ಕೆ ಮಾದರಿ ಜೊತೆಗೆ ಕ್ರಾಂತಿಕಾರಿ ಹೆಜ್ಜೆ ಇಡಬೇಕು ಎಂದು ಆಗ್ರಹಿಸಿದ್ದಾರೆ.

ಸದಾ ನೊಂದ ಜನರು, ಅದರಲ್ಲೂ ದಲಿತರ ಪರ ಹತ್ತಾರು ಯೋಜನೆ ಜಾರಿಗೊಳಿಸಿ, ದೇಶದಲ್ಲಿಯೇ ಎಸ್‍ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿಗೊಳಿಸಲು ನಾನು ಸಚಿವನಾಗಿದ್ದ ಸಂದರ್ಭ ನನ್ನ ಬೆನ್ನಿಗೆ ನಿಂತಿದ್ದ ಹಾಗೂ ದೇಶದಲ್ಲಿಯೇ ಅಹಿಂದ ನೇತಾರ ಎಂಬ ಹೆಗ್ಗಳಿಕೆ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಂಡು ಇಡೀ ದೇಶವೇ ಕರ್ನಾಟಕದ ನಡೆಯತ್ತ ನೋಡುವ ರೀತಿ ಮಾಡುತ್ತಾರೆ ಎಂದು ಆಂಜನೇಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement
Tags :
bengaluruchitradurgacommunityFormer Minister H. Anjaneyainternal reservation strugglesuddionesuddione newsvictoryಐಸಿಯುಒಳಮೀಸಲಾತಿ ಹೋರಾಟಚಿತ್ರದುರ್ಗದಿಗ್ವಿಜಯಬೆಂಗಳೂರುಭರವಸೆಮಾಜಿ ಸಚಿವ ಎಚ್.ಆಂಜನೇಯಸಮುದಾಯಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article