For the best experience, open
https://m.suddione.com
on your mobile browser.
Advertisement

ಜನಸಾಮಾನ್ಯರು ಇಂದು ಸುದ್ದಿಗಳನ್ನು ಅನುಮಾನದ ದೃಷ್ಠಿಯಿಂದ ನೋಡುವ ಪರಿಸ್ಥಿತಿ ಉಂಟಾಗಿದೆ : ಸಚಿವ ಡಿ.ಸುಧಾಕರ್

05:58 PM Jul 13, 2024 IST | suddionenews
ಜನಸಾಮಾನ್ಯರು ಇಂದು ಸುದ್ದಿಗಳನ್ನು ಅನುಮಾನದ ದೃಷ್ಠಿಯಿಂದ ನೋಡುವ ಪರಿಸ್ಥಿತಿ ಉಂಟಾಗಿದೆ   ಸಚಿವ ಡಿ ಸುಧಾಕರ್
Advertisement

ಚಿತ್ರದುರ್ಗ. ಜುಲೈ.13:  ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಸತ್ಯಕ್ಕೆ ಹತ್ತಿರವಾದ ಸುದ್ದಿಗಳಿಗೆ ಮಾತ್ರ ಜನಮನ್ನಣೆ ದೊರಕುವುದು ಎಂದು ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

Advertisement
Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಸಂಯುಕ್ತಾಶ್ರಯದಲ್ಲಿ, ನಗರದ ಜಿಲ್ಲಾ ಪಂಚಾಯತ್ ಮುಖ್ಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾದ “ಪತ್ರಿಕಾ ದಿನಾಚರಣೆ” ಉದ್ಘಾಟಿಸಿ ಅವರು ಮಾತನಾಡಿದರು.

ಮಾಧ್ಯಮಗಳು ಜನರ ವಿಶ್ವಾಸಕ್ಕೆ ಹತ್ತಿರವಾಗಬೇಕು. ಜನರು ಮಾಧ್ಯಮಗಳನ್ನು ಅತಿ ಸೂಕ್ಷ್ಮವಾಗಿ ಗಮನಿಸುತ್ತಾರೆ. ಜನಸಾಮಾನ್ಯರಲ್ಲಿ ಇಂದು ಟಿ.ವಿ ಹಾಗೂ ಪತ್ರಿಕೆಗಳ ಸುದ್ದಿಗಳನ್ನು ಅನುಮಾನದ ದೃಷ್ಠಿಯಿಂದ ನೋಡುವ ಪರಿಸ್ಥಿತಿ ಉಂಟಾಗಿದೆ. ಮಾಧ್ಯಮಗಳಲ್ಲಿ ಪ್ರಕಟವಾಗುವುದು ಸುಳ್ಳು ಎನ್ನುವ ಭಾವನೆ ಜನರಲ್ಲಿ ಮೂಡುತ್ತಿರುವುದು ಆತಂಕಕಾರಿಯಾಗಿದೆ. ಮುಖ್ಯ ವಾಹಿನಿಯ ಮಾಧ್ಯಮಗಳ ಜೊತೆಗೆ, ಸಾಮಾಜಿಕ ಮಾಧ್ಯಮಗಳು, ಯೂಟ್ಯೂಬ್‍ಗಳಲ್ಲಿಯೂ ಸುದ್ದಿಗಳ ಪ್ರಸಾರವಾಗುತ್ತಿದೆ. ಇವು ಮುಖ್ಯ ವಾಹಿನಿಯ ಮಾಧ್ಯಮಗಳಿಗೆ ಸಮಾನಾಂತರವಾಗಿ ಕಾರ್ಯ ನಿರ್ವಹಿಸುತ್ತಿವೆ. ಬದಲಾದ ಈ ಪರಿಸ್ಥಿತಿಯಿಂದ ಟಿ.ವಿ ಹಾಗೂ ಪತ್ರಿಕಾ ಮಾಧ್ಯಮಗಳು ಹೊರಬರಬೇಕು.

Advertisement

ವಸ್ತುನಿಷ್ಠ, ನಿಖರ ಹಾಗೂ ಸತ್ಯವಾದ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಜನರ ನಂಬಿಕೆ ಗಳಿಸಬೇಕು. ಪತ್ರಿಕೆ ಮತ್ತು ಮಾಧ್ಯಮ ಪ್ರಜಾಪ್ರಭುತ್ವ ಹಾಗೂ ಸಮಾಜದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಚಿವ ಡಿ.ಸುಧಾಕರ್ ಅಭಿಪ್ರಾಯ ವ್ಯಕ್ತ ಪಡಿಸಿದರು.

Advertisement

ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.  ಜಿಲ್ಲೆಯ ಅಭಿವೃದ್ಧಿ ಬಗ್ಗೆ ಪತ್ರಕರ್ತರು ಕಾಳಜಿ ಹೊಂದಿದ್ದಾರೆ. ಜಿಲ್ಲೆಯ ಪತ್ರಕರ್ತರಿಗೆ ಅಗತ್ಯವಾಗಿರುವ ನಿವೇಶನ ಮಂಜೂರಾತಿ ಮಾಡಲು ಸ್ಥಳ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಸಚಿವನಾಗಿ ಕಾರ್ಯನಿರ್ವಹಿಸುವ ಅವಧಿಯಲ್ಲಿಯೇ ನಿವೇಶನ ಹಂಚಿಕೆ ಪೂರ್ಣಗೊಳಿಸುವುದಾಗಿ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.

ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ ಜಿಲ್ಲೆಯಲ್ಲಿ ಕೇಲವು ಪತ್ರಿಕೆಗಳು ಮಾತ್ರ ಪರಿಚಯವಿತ್ತು. ಆದರೆ ಪತ್ರಿಕಾ ರಂಗ ಇಷ್ಟೊಂದು ದೊಡ್ಡದು ಎಂಬುದು ನನಗೆ ಇಂದು ತಿಳಿಯಿತು. ಪತ್ರಕರ್ತರು ಮತ್ತು ಪತ್ರಿಕಾ ವಿತರಕರಿಗೆ ನಾನು ಸದಾ ಸಹಕಾರ ನೀಡುತ್ತೇನೆ. ವಿತರಕರು ನಮಗೆ ಒಂದಿಷ್ಟು ಸಮಸ್ಯೆ ಕುರಿತು ನನ್ನ ಗಮನಕ್ಕೆ ತಂದಿದ್ದು  ಮುಂದಿನ ದಿನದಲ್ಲಿ ಚರ್ಚಿಸುತ್ತೇನೆ ಎಂದರು.

ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ರಘುಮೂರ್ತಿ ಮಾತನಾಡಿ ಸರ್ಕಾರದ ನಾಲ್ಕನೇ ಅಂಗವಾಗಿ ಪತ್ರಿಕಾ ರಂಗ ಕೆಲಸವನ್ನು ಮಾಡುತ್ತಿದೆ‌. ಜಿಲ್ಲೆಯಸಮಸ್ಯೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದು ಎಚ್ಚರಿಸುವ ಕೆಲಸ ಮಾಧ್ಯಮ‌ ಮಾಡುತ್ತಿದೆ.

ಈ ಬಾರಿಯ ಪತ್ರಿಕಾ ದಿನಾಚರಣೆ ತುಂಬಾ ವಿಶೇಷವಾಗಿ ನಡೆಯುತ್ತಿರುವುದು ತುಂಬಾ ಸಂತೋಷ ತಂದಿದೆ.

ದುಡಿಮೆಗೆ ಹಲವಾರು ದಾರಿಗಳಿವೆ. ಆದರೆ ಮಾಧ್ಯಮ ಕ್ಷೇತ್ರಕ್ಕೆ  ಪಾದಾರ್ಪಣೆ ಮಾಡುವವರಿಗೆ ಮಾತ್ರ ಸಾಮಾಜಿಕ ಕಾಳಜಿ ಹೆಚ್ಚಿರುತ್ತದೆ. ಅಂತಹ ವ್ಯಕ್ತಿಗಳು ಮಾತ್ರ ಈ ಕ್ಷೇತ್ರ ಬರಲು ಸಾಧ್ಯ ಎಂದರು.

ಹಲವು ಸವಾಲುಗಳನ್ನು ಮೆಟ್ಟಿ ನಿಂತರೆ ಮಾತ್ರ ಪತ್ರಕರ್ತರಾಗಿರಲು ಸಾಧ್ಯವಾಗುತ್ತದೆ. ಸಮಾಜದ ಮತ್ತು ಸರ್ಕಾರವನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವ ಹೊಣೆಗಾರಿಕೆ ಪತ್ರಕರ್ತರ ಮೇಲಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಜೊತೆಯಾಗಿ ಹೆಜ್ಜೆ ಹಾಕೋಣ ಎಂದು ಹೇಳಿದರು.

ಕಾರ್ಯನಿರತ ಪತ್ರಕರ್ತ ಸಂಘಕ್ಕೆ ರೂ.5 ಲಕ್ಷ ಅನುದಾನ :ವಿಧಾನಪರಿಷತ್ ಶಾಸಕ ಕೆ.ಎಸ್.ನವೀನ್ ಮಾತನಾಡಿ, ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅಗತ್ಯ ಇರುವ ಸಲಕರಣೆಗಳನ್ನು ನೀಡಲು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ರೂ.5 ಲಕ್ಷ ಅನುದಾನ ಮಂಜೂರು ಮಾಡಿರುವುದಾಗಿ ತಿಳಿಸಿದರು. ಇದರೊಂದಿಗೆ ಜಿಲ್ಲೆಯ 157 ಪತ್ರಿಕಾ ವಿತರಕರಿಗೆ ರೇಡಿಯಂ ಸ್ಟಿಕರ್ ರಿಫ್ಲೆಕ್ಟರ್ ಹೊಂದಿರುವ ಜಾಕೇಟ್‍ಗಳನ್ನು ನೀಡುವುದಾಗಿ ಹೇಳಿದರು.

ಶಾಸಕ ಕೆ.ಸಿ.ವೀರೇಂದ್ರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ರಘುಮೂರ್ತಿ, ನಗರಾಭಿವೃದ್ಧಿ ಪ್ರಾಧಿಕಾರ  ಅಧ್ಯಕ್ಷ ತಾಜ್‍ಪೀರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಕರ್ನಾಟಕ ಮಾಧ್ಯಮ ಅಕಾಡೆಮಿಯ ನೂತನ ಸದಸ್ಯ ಎಂ.ಎನ್.ಅಹೋಬಲ ಪತಿ, ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಬಿ.ವಿ.ಮಲ್ಲಿಕಾರ್ಜುನಯ್ಯ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಸೇರಿದಂತೆ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿವಿಧ ಮಾಧ್ಯಮ ಪ್ರತಿನಿಧಿಗಳು, ಗಣ್ಯಮಾನ್ಯರು, ಕನ್ನಡ ಪರ ಹೋರಾಟಗಾರರು, ರೈತ ಸಂಘ, ಕಮ್ಯುನಿಷ್ಟ್ ಪಕ್ಷದ ಪ್ರತಿನಿಧಿಗಳು, ಹಲವು ಸಂಘಟನೆಗಳ ಪದಾಧಿಕಾರಿಗಳು ಹಾಗೂ ಪತ್ರಿಕಾ ವಿತರಕರ ಸಂಘಗಳ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Tags :
Advertisement