For the best experience, open
https://m.suddione.com
on your mobile browser.
Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನಿಯೋಗ

06:51 PM Dec 09, 2023 IST | suddionenews
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನಿಯೋಗ
Advertisement

ಬೆಂಗಳೂರು, ಡಿಸೆಂಬರ್ 9:  ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ  ಮೀಸಲಾತಿ ರಕ್ಷಣಾ ವೇದಿಕೆ ನಿಯೋಗವು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು.

Advertisement

ನಿಯೋಗದಲ್ಲಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಸಚಿವರಾದ ಶಿವರಾಜ ತಂಗಡಗಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಶಾಸಕ ಮಾನಪ್ಪ ವಜ್ಜಲ್, ಶಾಸಕಿ ಮಂಜುಳ ಲಿಂಬಾವಳಿ,  ವಿಧಾನ ಪರಿಷತ್ ಸದಸ್ಯರಾದ ಸುಭಾಷ ರಾಠೋಡ, ಒಕ್ಕೂಟದ ಅಧ್ಯಕ್ಷರಾದ ರವಿ ಮಾಕಳಿ, ಕಾರ್ಯಾಧ್ಯಕ್ಷರಾದ ರಾಘವೇಂದ್ರ ನಾಯ್ಕ, ಅನಂತ್ ನಾಯ್ಕ ಆದರ್ಶ ಯಲ್ಲಪ್ಪ, ಕಿರಣ್ ಕೊತ್ತಗೆರೆ, ಜಯದೇವ ನಾಯ್ಕ ಹಾಗೂ ಇನ್ನಿತರರು ಉಪಸ್ಥಿತಿಯಿದ್ದರು.

ಒಕ್ಕೂಟವು ಬಂಜಾರ, ಭೋವಿ, ಕೊರಚ, ಕೊರಮ, ಅಲೆಮಾರಿ ಸಮುದಾಯಗಳ ಹಕ್ಕೊತ್ತಾಯಗಳನ್ನು ಈಡೇರಿಸಲು ಕೋರಿದರು.

Advertisement

ಮೈಸೂರು ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್, ಡಾ ಬಿ ಆರ್ ಅಂಬೇಡ್ಕರ್, ಜವಾಹರಲಾಲ್ ನೆಹರು, ದೇವರಾಜ್ ಅರಸು ಅವರು ಸೇರಿದಂತೆ ಜನಪರ ನಾಯಕರ ದೂರದೃಷ್ಟಿಯ ಕಾರಣದಿಂದಾಗಿ ಪರಿಶಿಷ್ಟ ಜಾತಿಗಳ ಸಾಂವಿಧಾನಿಕ ಮೀಸಲಾತಿ ಪಡೆಯುತ್ತಿರುವ ಬಂಜಾರ, ಭೋವಿ, ಕೊರಚ, ಕೊರಮ ಮತ್ತಿತರ ಅಲೆಮಾರಿ ದಮನಿತ ಜಾತಿಗಳ ಮೀಸಲಾತಿಯ ಹಕ್ಕನ್ನು ಸಂರಕ್ಷಣೆ ಮಾಡಿ ನಮ್ಮ ಸಮುದಾಯಗಳ ಈ ಕೆಳಗಿನ ಹಕ್ಕೊತ್ತಾಯಗಳನ್ನು ಈಡೇರಿಸಲು ಕೋರುತ್ತೇವೆ.

ಹಕ್ಕೊತ್ತಾಯಗಳು:

1. ಬಂಜಾರ, ಭೋವಿ, ಕೊರಚ, ಕೊರಮ, ಅಲೆಮಾರಿ ಸಮುದಾಯಗಳ ಸಾಂವಿಧಾನಿಕ ಮೀಸಲಾತಿಯನ್ನು ಸಂರಕ್ಷಣೆ ಮಾಡಬೇಕು.

2. ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ಎಸ್ ಸಿ, ಎಸ್ ಟಿ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮ ಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ತಕ್ಷಣ ನಿಗಮಗಳಿಗೆ ಅಧ್ಯಕ್ಷರು/ಸದಸ್ಯರನ್ನು ನೇಮಿಸಬೇಕು.

3. ಅಲೆಮಾರಿ ಸಮುದಾಯಗಳ ಕುಲಶಾಸ್ತ್ರ ಅಧ್ಯಯನ ಮಾಡಬೇಕು. ಭೋವಿ ಸಂಸ್ಕೃತಿ ಅಧ್ಯಯನ ಪ್ರಾಧಿಕಾರ ರಚಿಸಬೇಕು. ಬಂಜಾರ ಅಕಾಡೆಮಿಗೆ ಅಗತ್ಯ ಅನುದಾನ, ಸಿಬ್ಬಂದಿ ನೇಮಿಸಬೇಕು.

4. ಪರಿಶಿಷ್ಟ ಜಾತಿಗಳ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡದಂತೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು. ಫೇಕ್ ಸರ್ಟಿಫಿಕೇಟ್ ಪಡೆದರ ಮೇಲೆ ಕಾನೂನು ಕ್ರಮ ಜರುಗಿಸಬೇಕು.

5. ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇರುವ ಸಿಳ್ಳೆಕ್ಯಾತ ಸಮುದಾಯದ ಪರ್ಯಾಯ ಪದಗಳನ್ನು ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಕು.

6. ವಿವಿಧ ಜಿಲ್ಲೆಗಳಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಮುಖಂಡರ ಮೇಲೆ ದಾಖಲಾದ ಪ್ರಕರಣಗಳನ್ನು ವಾಪಸು ಪಡೆಯಬೇಕು. ಪ್ರಕರಣಗಳ ಪಟ್ಟಿಯನ್ನು ಲಗತ್ತಿಸಲಾಗಿದೆ.

7. ಅಲೆಮಾರಿ ಸಮುದಾಯಗಳಿಗೆ ಶಾಶ್ವತ ವಸತಿ ಕಲ್ಪಿಸಬೇಕು. ಅದಕ್ಕಾಗಿ ಅಗತ್ಯ ಅನುದಾನ ಮತ್ತು ಯೋಜನೆ ರೂಪಿಸಬೇಕು.

8. ಪರಿಶಿಷ್ಟ ಜಾತಿಗಳ ಯುವಕರಿಗೆ ಕುಲ ಕಸುಬು ಆಧಾರಿತ, ವರ್ತಮಾನಕ್ಕೆ ಅಗತ್ಯ ಕೌಶಲ್ಯ ತರಬೇತಿ ನೀಡಬೇಕು. ಉದ್ಯೋಗ ಪ್ರಾರಂಭಿಸಲು ಆರಂಭಿಕ ಪ್ರೊತ್ಸಾಹ ಅನುದಾನ ಒದಗಿಸಬೇಕು.
ಈ ಮೇಲಿನ ಅಂಶಗಳನ್ನು ಪರಿಗಣಿಸಿ, ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ತಮ್ಮನ್ನು ಕೋರುತ್ತೇವೆ.

Tags :
Advertisement