ಮೈಸೂರು ಚಲೋ ಪಾದಯಾತ್ರೆ ವಿರುದ್ಧ ಚಿತ್ರದುರ್ಗದ ಪ್ರಮುಖ ಬೀದಿಗಳಲ್ಲಿ ನಡೆದ ಬೈಕ್ ರ‌್ಯಾಲಿ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್.04 : ಅಹಿಂದ ನಾಯಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೆಂಬಲಿಸಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ನಗರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಬೈಕ್ ರ್ಯಾಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಸಿದ್ದರಾಮಯ್ಯ ವಿರುದ್ದ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹೊರಟಿರುವ ಬಿಜೆಪಿ ವಿರುದ್ದ ಬೈಕ್‍ರ್ಯಾಲಿಯಲ್ಲಿ ಧಿಕ್ಕಾರಗಳನ್ನು ಕೂಗಿ ಭ್ರಷ್ಟ ರಾಜ್ಯಪಾಲರ ವಿರುದ್ದ ಘೋಷಣೆಗಳು ಮೊಳಗಿದವು.
ಕುರುಬ ಸಮಾಜದ ಮುಖಂಡ ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್ ಬೈಕ್‍ರ್ಯಾಲಿ ಉದ್ದೇಶಿಸಿ ಮಾತನಾಡುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಬಡ ಜನರ ಪರವಾಗಿರುವುದನ್ನು ಸಹಿಸಿಕೊಳ್ಳಲು ಆಗದ ಪ್ರತಿ ಪಕ್ಷಗಳು ರಾಜೀನಾಮೆಗೆ ಒತ್ತಾಯಿಸುತ್ತಿರುವುದರಲ್ಲಿ ಅರ್ಥವಿಲ್ಲ. ಅಹಿಂದ ಜಾತಿ ಹಾಗೂ ಶೋಷಿತ ಸಮುದಾಯಗಳು ಸಿದ್ದರಾಮಯ್ಯನವರ ಪರವಾಗಿವೆ. ಯಾವುದೇ ಕಾರಣಕ್ಕೂ ತೊಂದರೆಯಾಗಲು ಬಿಡುವುದಿಲ್ಲ ಎಂದು ವಿರೋಧಿಗಳಿಗೆ ಎಚ್ಚರಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ ಮಾತನಾಡಿ ರಾಜ್ಯಪಾಲರು ಮುಖ್ಯಮಂತ್ರಿಗೆ ನೀಡಿರುವ ನೋಟಿಸ್ ಸೋಮವಾರ ಸಂಜೆಯೊಳಗೆ ಹಿಂದಕ್ಕೆ ಪಡೆಯದಿದ್ದರೆ ಚಿತ್ರದುರ್ಗ ಜಿಲ್ಲೆಯನ್ನು ಬಂದ್ ಮಾಡಿ ಪ್ರತಿಭಟಿಸುತ್ತೇವೆ. ಗೋಬ್ಯಾಕ್ ರಾಜ್ಯಪಾಲ ಎಂದು ಅಧಿಕಾರದಿಂದ ಇಳಿಯುವತನಕ ಕೂಗುತ್ತಿರುತ್ತೇವೆಂದು ಎಚ್ಚರಿಸಿದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಮಾತನಾಡುತ್ತ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದ ಜೊತೆ ಅಲ್ಪಸಂಖ್ಯಾತರು, ದಲಿತರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಕ್ಕಿದ್ದಾರೆ, ವಿರೋಧ ಪಕ್ಷಗಳು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಕಿಡಿ ಕಾರಿದರು.
ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಮಾಜಿ ಸದಸ್ಯ ಶ್ರೀರಾಮ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ, ಸೈಯದ್ ವಲಿಖಾದ್ರಿ, ಅಬ್ದುಲ್ಲಾ, ಎ.ಸಾಧಿಕ್‍ವುಲ್ಲಾ, ಛಲವಾದಿ ಸಮಾಜದ ಮುಖಂಡ ಎಸ್.ಎನ್.ರವಿಕುಮಾರ್, ಮುತ್ತುರಾಜ್, ಮಲ್ಲಿಕಾರ್ಜನ ಎಸ್.ಬಿ.ಎಲ್. ಹನೀಸ್, ನ್ಯಾಯವಾದಿ ರವೀಂದ್ರ, ಖಾನ್‍ಸಾಬ್, ಕುರಿನಾಗರಾಜ್, ಸಲ್ಮಾನ್, ಕೋಟಿ, ಸತೀಶ್, ಉಮೇಶ್, ಜಿ.ಟಿ.ಮಂಜುನಾಥ್, ಆರ್.ಶಿವಣ್ಣ ಸೇರಿದಂತೆ ನೂರಾರು ಮಂದಿ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಹೊರಟ ಬೈಕ್ ರ್ಯಾಲಿ ಮದಕರಿನಾಯಕನ ಪ್ರತಿಮೆ ಮೂಲಕ ದೊಡ್ಡಪೇಟೆ, ಉಚ್ಚಂಗಿಯಲ್ಲಮ್ಮ ದೇವಸ್ಥಾನ ಮುಂಭಾಗದಿಂದ ಆನೆಬಾಗಿಲು, ಬುರುಜನಹಟ್ಟಿ ವೃತ್ತ, ಸಂಗೊಳ್ಳಿ ರಾಯಣ್ಣ ಸರ್ಕಲ್, ಗಾಂಧಿವೃತ್ತ, ಹೊರಪೇಟೆ, ಜೆ.ಸಿ.ಆರ್. ಬಡಾವಣೆ, ತಿಪ್ಪಜ್ಜಿ ಸರ್ಕಲ್ ಮೂಲಕ ಸಂಚರಿಸಿ ಒನಕೆ ಓಬವ್ವ ವೃತ್ತದಲ್ಲಿ ಅಂತ್ಯಗೊಂಡಿತು.