For the best experience, open
https://m.suddione.com
on your mobile browser.
Advertisement

ಡಿ.ಎಸ್. ಹಳ್ಳಿಯಲ್ಲಿ ಲಿಂಗೈಕ್ಯ ಬಸವಲಿಂಗ ಸ್ವಾಮಿಗಳ 64 ನೇ ಸಂಸ್ಮರಣೆ ಕಾರ್ಯಕ್ರಮ

06:27 PM Apr 16, 2024 IST | suddionenews
ಡಿ ಎಸ್  ಹಳ್ಳಿಯಲ್ಲಿ ಲಿಂಗೈಕ್ಯ ಬಸವಲಿಂಗ ಸ್ವಾಮಿಗಳ 64 ನೇ ಸಂಸ್ಮರಣೆ ಕಾರ್ಯಕ್ರಮ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 16 : ಸಾಧು ಸಂತರು ಮತ್ತು ದಾರ್ಶನಿಕರ ಸಂಸ್ಮರಣೆ ಅಥವಾ ಪುಣ್ಯರಾಧನೆ ಎಂದರೆ ಅವರು ಅನುಭಾವಿಸಿ ಬೋಧಿಸಿದ ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಡೆಯುವುದೆ ಹೊರತು ಜಾತ್ರೆ ಜಂಗುಳಿ ಉತ್ಸವಗಳಲ್ಲ ಎಂದು ನಿವೃತ್ತ ಪ್ರಾಂಶುಪಾಲರು ಹಾಗೂ ಆರ್ಥಿಕ ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಹೇಳಿದರು.

Advertisement

ದೊಡ್ಡಸಿದ್ದವ್ವನಹಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಲಿಂಗೈಕ್ಯ ಬಸವಲಿಂಗ ಸ್ವಾಮಿಗಳ 64 ನೇ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ನಡೆ-ನುಡಿ ಸಿದ್ದಾಂತ ಕುರಿತು ಉಪನ್ಯಾಸ ನೀಡಿದರು.

ತತ್ವ ನೀತಿಗಳಿಲ್ಲದ ಆಚರಣೆಗಳು, ನಡೆ-ನುಡಿ ಸಾಮ್ಯವಿಲ್ಲದ ಪ್ರವಚನಗಳು ಅಲ್ಲಮಪ್ರಭುಗಳು ಹೇಳಿದಂತೆ ತೋರುಂಬ ಲಾಭಗಳಾಗುತ್ತವೆಯೇ ಹೊರತು ಸಾಮರಸ್ಯ ಸಮಾಜ ಕಟ್ಟುವ ಪ್ರಯತ್ನಗಳಾಗುವುದಿಲ್ಲ ಎಂದರು.

ನಮ್ಮ ಮಾತುಗಳು ವೇದಿಕೆಯಲ್ಲಿ ಬೋಧನೆಗಳಿಗಷ್ಟೆ ಸೀಮಿತವಾದಾಗ ಕೇಳುಗರು ಅವುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ತೆರೆಮರೆಯಲ್ಲಿ ಅಪಹಾಸ್ಯಕ್ಕೀಡು ಮಾಡುತ್ತಾರೆ. ಅದಕ್ಕಾಗಿ ಶಿವಯೋಗದಂತಹ ಆಧ್ಯಾತ್ಮಿಕ ಮಾರ್ಗಗಳನ್ನು ಬೋಧಿಸುವವರು ಕ್ರಾಂತಿಕಾರಿ ಬಸವಣ್ಣನವರು ಹೇಳಿದ ನಡೆಯಲ್ಲಿ ಎಚ್ಚೆತ್ತುಕೊಂಡು ನುಡಿಯಲ್ಲಿ ತಪ್ಪಿದರೆ ಹಿಡಿದಿರ್ಪ ಲಿಂಗ ಘಟಸರ್ಪ ಎನ್ನುವ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಕೇಳುಗರೂ ಕೂಡ ಹೇಳುವವರ ಮಾತುಗಳನ್ನು ಅವರ ನಿಜ ನಡೆಯ ಓರೆಗೆ ಹಚ್ಚಿ ನೋಡುವ ಪರಿಪಾಠ ಬೆಳೆಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ವೀರಶೈವ ಲಿಂಗಾಯಿತ ಸಮಾಜದ ಮುಖಂಡ ಕೆಇಬಿ. ಷಣ್ಮುಖಪ್ಪ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸಮಾಜಕ್ಕೆ ಮಾರ್ಗ ತೋರಿಸುವ ಧಾರ್ಮಿಕ ಮುಖಂಡರ ನಡೆನುಡಿಯಲ್ಲಿ ಇಬ್ಬಂದಿತನವಿರಬಾರದು. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ದ್ವಂದ್ವಗಳನ್ನು ಮೀರಿ ಸಮಾಜದ ಬೆಳವಣಿಗೆಗೆ ಬೆಳಕು ತೋರಿಸುವಂತಿರಬೇಕೆಂದರು.

ಶಿಕ್ಷಕ ನಾಗಭೂಷಣ್, ನಿವೃತ್ತ ಇಂಜಿನಿಯರ್ ಶಿವಕುಮಾರ್, ಜಾಗತಿಕ ಲಿಂಗಾಯಿತ ಮಹಾಸಭಾ ಜಿಲ್ಲಾ ಘಟಕದ ಕಾರ್ಯದರ್ಶಿ ಬಸವರಾಜಕಟ್ಟಿ ವೇದಿಕೆಯಲ್ಲಿದ್ದರು.
ಶರಣೆ ನಾಗಲಾಂಭಿಕ ವಚನ ಗಾಯನ ಹಾಡಿದರು.
ಜಾಗತಿಕ ಲಿಂಗಾಯಿತ ಮಹಾಸಭಾದ ಸಂಚಾಲಕ ಧನಂಜಯ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕ ನಂದೀಶ್ ವಂದಿಸಿದರು. ಉಪನ್ಯಾಸಕಿ ರಶ್ಮಿ ನಿರೂಪಸಿದರು.

Tags :
Advertisement