2024-25ನೇ ಉತ್ತಮ ಶಿಕ್ಷಕರ ಪ್ರಶಸ್ತಿ : ಹಿರಿಯೂರಿನ ಪರಮೇಶ್ವರಪ್ಪ ಪ್ರಶಸ್ತಿಗೆ ಭಾಜನ
ಚಿತ್ರದುರ್ಗ: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಣ ಇಲಾಖೆ ವತಿಯಿಂದ ಉತ್ತಮ ಶಿಕ್ಷಕರ ಪ್ರಶಸ್ತಿಯನ್ನು ನೀಡಲಾಗುತ್ತದೆ. 2024-25ನೇ ಸಾಲಿನ ಪ್ರಶಸ್ತಿ ಘೋಷಣೆಯಾಗಿದ್ದು, ಈ ಬಾರಿ ಹಿರಿಯೂರಿನ ಶಿಕ್ಷಕ ಪರಮೇಶ್ವರಪ್ಲ ಅವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯಿಂದ ಹಿರಿಯೂರು ತಾಲೂಕಿನ ಪರಮೇಶ್ಚರಪ್ಪ ಅವರು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಾಲೂಕಿನ ಮ್ಯಾಕ್ಲೂರಹಳ್ಳಿ ಹೊಸಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕ ಪರಮೇಶ್ವರಪ್ಪ ಅವರು ಮೂಲತಃ ಹಿರಿಯೂರು ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದವರು. 1998ರಲ್ಲಿ ತಮ್ಮ ಶಿಕ್ಷಕ ವೃತ್ತಿಯನ್ನು ಆರಂಭಿಸಿದ್ದರು.
ಪಿಯುಸಿ ಹಾಗೂ ಟಿಸಿಎಚ್ ವಿದ್ಯಾಭ್ಯಾಸ ಮುಗಿಸಿ ಶಿಕ್ಷಕ ವೃತ್ತಿಗೆ ಬಂದ ಇವರು ಮೊದಲ ಬಾರಿಗೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಚಿನ್ನಹಳ್ಳಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ತಾಲೂಕಿಗೆ ವರ್ಗಾವಣೆಗೊಂಡರು. 2022ರಲ್ಲಿ ಸೂರಪ್ಪನಹಟ್ಟಿ ಶಾಲೆಯಲ್ಲಿ ತಮ್ಮ ಸೇವೆ ಸಲ್ಲಿಸಿದರು. ಈ ಶಾಲೆಯಲ್ಲಿ ಅವರು ಸಲ್ಲಿಸಿದ ಸೇವೆಗೆ ಅರಣ್ಯ ಇಲಾಖೆಯಿಂದ ಪರಿಸರ ಮಿತ್ರ ಎಂಬ ಪ್ರಶಸ್ತಿ ಬಂದಿದೆ. ಸದ್ಯಕ್ಕೆ ಮ್ಯಾಕ್ಲೂರಹಳ್ಳಿ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿಮ ಜೂನ್ ತಿಂಗಳಲ್ಲಿ ಅವರು ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಲಿದ್ದಾರೆ.
ಇನ್ನು ರಾಜ್ಯಮಟ್ಟದ ಉತ್ತಮ ಶಿಕ್ಷಕ ಎಂಬ ಪ್ರಶಸ್ತಿ ಬಂದಿದ್ದರ ಬಗ್ಗೆ ಪರಮೇಶ್ವರ್ ಅವರು ಸಂತಸ ಹಂಚಿಕೊಂಡಿದ್ದಾರೆ. ನಾನು ಯಾವ ಪ್ರಶಸ್ತಿಯನ್ನು ನಿರೀಕ್ಷೆ ಮಾಡಿರಲಿಲ್ಲ. ಮುಂದಿನ ವರ್ಷ ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದೇನೆ. ನನ್ನ ಶಿಕ್ಷಣ ವೃತ್ತಿಯ ಸೇವೆಯನ್ನು ಗುರುತಿಸಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡುತ್ತಿರುವುದು ಸಂತೋಷ ನೀಡಿದೆ ಎಂದಿದ್ದಾರೆ.