ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಗೆ 11.83 ಕೋಟಿ ಲಾಭ : ಸಚಿವ ಡಿ. ಸುಧಾಕರ್
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 05 : ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 2023-24 ನೇ ಸಾಲಿನಲ್ಲಿ ರೂ.11.83 ಕೋಟಿ ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರು, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಹೇಳಿದರು.
ನಗರದ ಚಳ್ಳಕೆರೆ ರಸ್ತೆಯ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 61 ನೇ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಬ್ಯಾಂಕ್ 2023-24 ನೇ ಸಾಲಿಗೆ ರೂ.573.00 ಕೋಟಿ ಠೇವಣಿ ಸಂಗ್ರಹಣೆ ಮಾಡಿದ್ದು, 57921 ರೈತರಿಗೆ ಶೂನ್ಯ ಬಡ್ಡಿದರದಲ್ಲಿ ರೂ.480.77 ಕೋಟಿ ಅಲ್ಪಾವಧಿ ಬೆಳೆ ಸಾಲ ವಿತರಣೆ ಮಾಡಿದೆ. ಈ ಪೈಕಿ ಪರಿಶಿಷ್ಟ ಜಾತಿಯ 6980 ರೈತರಿಗೆ ರೂ.45.33 ಕೋಟಿ ಮತ್ತು ಪರಿಶಿಷ್ಟ ಪಂಗಡದ 8805 ರೈತರಿಗೆ ರೂ.65.04 ಕೋಟಿ ಸಾಲ ವಿತರಿಸಲಾಗಿದೆ. ಹಾಗೂ ಶೇ.3% ಬಡ್ಡಿದರದಲ್ಲಿ 924 ರೈತರಿಗೆ ರೂ.58.54 ಕೋಟಿ ಭೂ ಅಭಿವೃದ್ದಿ ಮದ್ಯಮಾವಧಿ ಕೃಷಿ ಸಾಲ ವಿತರಿಸಿದೆ. 722.89 ಕೋಟಿ ಕೃಷಿಯೇತರ ಸಾಲ ವಿತರಿಸಲಾಗಿದೆ. ಬ್ಯಾಂಕ್ 2023-24 ನೇ ಸಾಲಿನಲ್ಲಿ ರೂ.11.83 ಕೋಟಿ ಲಾಭಗಳಿಸುವುದರ ಮೂಲಕ ಉತ್ತಮ ಸಾಧನೆ ಮಾಡಿರುತ್ತದೆ.
ಮುಂದಿನ ವರ್ಷದಲ್ಲಿ 4000 ಹೊಸ ರೈತರಿಗೆ ರೂ.48.00 ಕೋಟಿ ಬೆಳೆ ಸಾಲ, 1200 ಹೊಸ ರೈತರಿಗೆ ರೂ.65.00 ಕೋಟಿ ಮಧ್ಯಮಾವಧಿ ಸಾಲ ಹಾಗೂ ರೂ.220.00 ಕೋಟಿ ಕೃಷಿಯೇತರ ಸಾಲಗಳನ್ನು ವಿತರಿಸುವ ಗುರಿ ಹೊಂದಿದ್ದು ರೂ.12.00 ಕೋಟಿ ಲಾಭಗಳಿಸಲು ಗುರಿ ಹಾಕಿಕೊಂಡಿದ್ದು ಪ್ರಗತಿ ಸಾಧಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಹಾಗೂ ಬ್ಯಾಂಕ್ ಹಿಂದಿನ ವರ್ಷ ರಾಜ್ಯದ ಡಿ.ಸಿ.ಸಿ ಬ್ಯಾಂಕುಗಳಲ್ಲಿ 21 ನೇ ಸ್ಥಾನದಲ್ಲಿದ್ದು ಈ ವರ್ಷ 18 ಸ್ಥಾನಕ್ಕೆ ಬಂದಿದ್ದು ಉತ್ತಮ ಸಾಧನೆ ಮಾಡಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಕಾರಣವಾಗಿದೆ.
ಬ್ಯಾಂಕಿನ ಸದಸ್ಯ ಸಂಘಗಳು ಬ್ಯಾಂಕಿನಲ್ಲಿ ಹೆಚ್ಚಿನ ಠೇವಣಿ ಮಾಡಲು ಕೋರಿದರು. ಬ್ಯಾಂಕ್ 2023-24ನೇ ಸಾಲಿನಲ್ಲಿ ಸದಸ್ಯರಿಗೆ ಶೇ.3% ಡಿವಿಡೆಂಡ್ ನೀಡಿದೆ. ಬ್ಯಾಂಕಿನಲ್ಲಿ ಧರ್ಮಪುರ, ತಳಕು, ಐಮಂಗಲ, ಮಾಡದಕೆರೆ, ಹೆಚ್.ಡಿ.ಪುರ, ಮಲ್ಲಪ್ಪನಹಳ್ಳಿ, ಮುತ್ತುಗದೂರು ತರಳಬಾಳು ನಗರ ಮತ್ತು ರಾಮಗಿರಿಗಳಲ್ಲಿ ಒಟ್ಟಾರೆ 8 ಹೊಸ ಶಾಖೆಗಳನ್ನು ಪ್ರಾರಂಭಿಸಲಾಗಿದೆ. ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕಿನಿಂದ ಸಾಲ ಪಡೆದು ರೈತರಿಗೆ ಸಾಲ ವಿತರಿಸುತ್ತಿದ್ದು ಇದರಲ್ಲಿ ಸರ್ಕಾರದಿಂದ ಯಾವುದೇ ಹಣಕಾಸಿನ ನೆರವು ಇರುವುದಿಲ್ಲ. ಆದ್ದರಿಂದ ಸಾಲಗಳನ್ನು ಸುಸ್ತಿ ಮಾಡದೇ ಸಾಲಗಳನ್ನು ಮರುಪಾವತಿಸಲು ಕೋರಿದರು.
ನಂತರ ಬ್ಯಾಂಕಿನ ನಿರ್ದೇಶಕರು ಹಾಗೂ ಶಾಸಕರಾದ ಟಿ.ರಘುಮೂರ್ತಿಯವರು ಮಾತನಾಡಿ ಬ್ಯಾಂಕ್ ಬರಗಾಲದಲ್ಲಿ ಕರೋನಾ ಸಮಯದಲ್ಲಿ ಸಹ ನಷ್ವವನ್ನು ಅನುಭವಿಸದೆ ಉತ್ತಮ ಲಾಭ ಮಾಡಿ ಮುನ್ನಡೆಯುತ್ತಿದೆ. ಇದಕ್ಕೆ ಸದಸ್ಯ ಸಂಘಗಳ ಸಹಕಾರ ಕಾರಣವಾಗಿದೆ. ಬ್ಯಾಂಕಿನಿಂದ ರೈತರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಲ ನೀಡಿ ನೆರವಾಗಲು ಬ್ಯಾಂಕ್ ಸಿದ್ದವಿದ್ದು ಸಾಲಗಳನ್ನು ಸುಸ್ತಿ ಮಾಡಿಕೊಳ್ಳದೇ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿ ಬ್ಯಾಂಕಿನ ಬೆಳವಣಿಗೆಗೆ ನೆರವಾಗಲು ಕೋರಿದರು.
ಜಿಲ್ಲೆಗೆ ಭದ್ರಾ ಮೇಲ್ದಂಡೆ ನೀರಿನ ಯೋಜನೆ ಪ್ರಾರಂಭವಾದ ನಂತರ ರೈತರಿಗೆ ಇನ್ನೂ ಹೆಚ್ಚು ಪ್ರಯೋಜನವಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಹೆಚ್.ಬಿ.ಮಂಜುನಾಥ್, ಬ್ಯಾಂಕಿನ ಎಲ್ಲಾ ನಿರ್ದೇಶಕರುಗಳು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಇಲ್ಯಾಸ್ ಉಲ್ಲಾ ಷರೀಫ್ ಉಪಸ್ಥಿತರಿದ್ದರು.